ಐಎಸ್ ಪರೀಕ್ಷೆಗಳು ಎಲ್ಲಾ ಪರೀಕ್ಷೆಗಳ ಹಿರಿಯಣ್ಣ ಎಂದೆನಿಸಿದೆ

Posted By:

ಪದವಿ ಪರೀಕ್ಷೆಗಳು ಮುಗಿಯುತ್ತಿದ್ದಂತೆ ಕೆಲವರು ಸ್ನಾತಕೋತ್ತ ಪದವಿಗಳಿಗೆ ಸೇರಿದರೆ ಮತ್ತೆ ಕೆಲವರು ಉದ್ಯೋಗ ಹುಡುಕಿ ಹೊರಡುತ್ತಾರೆ.
ಆದರೆ ಇನ್ನು ಕೆಲವರು ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆಗೆ ಮುಖ ಮಾಡುತ್ತಾರೆ. ಉದ್ಯೋಗ ಮಾಡುತ್ತಲೇ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವವರು ಒಂದು ಕಡೆ ಆದರೆ ಪರೀಕ್ಷೆಗಾಗಿಯೇ ಒಂದೆರೆಡು ವರ್ಷಗಳನ್ನು ಮೀಸಲಿಡುವವರು ನಮ್ಮ ಸುತ್ತ ಇದ್ದಾರೆ. ಅದರಲ್ಲೂ ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಗಳಿಗೆ ಸ್ವಲ್ಪ ಹೆಚ್ಚಿನ ಒತ್ತು ನೀಡುವವರ ಸಂಖ್ಯೆ ಈಗ ಜಾಸ್ತಿಯಾಗಿದೆ. ಲೋಕ ಸೇವಾ ಆಯೋಗ ಎಂದ ಕೂಡಲೇ ಎಲ್ಲರ ಕಣ್ಮುಂದೆ ಬರುವ ಚಿತ್ರಣ ಐಎಎಸ್. ಐಎಸ್ ಪರೀಕ್ಷೆಗಳು ಎಲ್ಲಾ ಪರೀಕ್ಷೆಗಳ ಹಿರಿಯಣ್ಣ ಎಂದೆನಿಸಿದೆ ಎಂದರೆ ತಪ್ಪಾಗಲಾರದು. ಅದು ಯಾಕೆ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.

ಐಎಎಸ್ ಪರೀಕ್ಷೆ ಮಾಹಿತಿ

ಏನಿದು ಐಎಎಸ್ ?

ಐಎಎಸ್ ಎಂದರೆ ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವಿಸ್ ಅರ್ಥಾತ್ ಭಾರತೀಯ ಆಡಳಿತಾತ್ಮಕ ಸೇವೆ. ಐಎಎಸ್‌ ಎಂಬುದು ಭಾರತ ಗಣರಾಜ್ಯ ಸರ್ಕಾರದ ಕಾರ್ಯಕಾರಿ ವಿಭಾಗದ ಆಡಳಿತಾತ್ಮಕ ನಾಗರಿಕ ಸೇವೆಯಾಗಿದೆ. ಮೂರು ಅಖಿಲ ಭಾರತ ಸೇವೆಗಳಲ್ಲಿ ಇದೂ ಒಂದುದೇಶಾದ್ಯಂತ ಐಎಎಸ್‌ ಅಧಿಕಾರಿಗಳು ನಿರ್ಣಾಯಕ ಹುದ್ದೆಗಳಲ್ಲಿರುವ ಮೂಲಕ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಅಧಿಕಾರಶಾಹಿಗಳನ್ನು ನಿರ್ವಹಿಸುವಲ್ಲಿ ಈ ಅಧಿಕಾರಿಗಳು ಪ್ರಮುಖ ಪಾತ್ರವಹಿಸುತ್ತಾರೆ.

ಐಎಎಸ್ ಅಧಿಕಾರಿಗಳಿಗಿರುವ ಸ್ವಾತಂತ್ರ್ಯ

ಈ ಅಧಿಕಾರಿ ವರ್ಗವು ಯಾವುದೇ ಹಿಂಜರಿಕೆ, ಬೆದರಿಕೆಗೆ ಹೆದರದೆ ಹಾಗೂ ಹಣಕಾಸಿನ ಅಸ್ಥಿರತೆಗೆ ಅಂಜದೆ, ತಮಗನಿಸಿದ್ದನ್ನು ಹೇಳಬೇಕು ಮತ್ತು ಮಾಡಬೇಕು. ಈ ರೀತಿ ರಾಷ್ಟ್ರವನ್ನು ಒಗ್ಗೂಡಿಸುವ ಅತ್ಯಗತ್ಯ ಅಂಶ ಎಂದು ಭಾರತದ ಸಂವಿಧಾನಾತ್ಮಕವಾಗಿ ರಚಿತ ಶಾಸನಾಂಗದ ಪ್ರತಿನಿಧಿ ಸಭೆ, Constituent Assembly of India ನಿರ್ಣಯಿಸಿದೆ. ಕೇಂದ್ರೀಯ ಲೋಕಸೇವಾ ಆಯೋಗದ (ಯುಪಿಎಸ್‌ಸಿ ಶಿಫಾರಸಿನ ಮೇರೆಗೆ, ಕೇಂದ್ರ ಸರ್ಕಾರವು ಐಎಎಸ್‌ ಅಧಿಕಾರಿಗಳನ್ನು ನೇಮಿಸಿ ಆಯಾ ರಾಜ್ಯ ಸರ್ಕಾರಗಳ ಅಗತ್ಯದ ಸೇವಾಡಳಿತಕ್ಕೆ ಒದಗಿಸುತ್ತದೆ. ಸಂಬಂಧಿತ ರಾಜ್ಯ ಸರ್ಕಾರಗಳು ಐಎಎಸ್‌ ಅಧಿಕಾರಿಗಳ ಬಗೆಗೆ ನಿಯಂತ್ರಣ ವಹಿಸಬಹುದಾದರೂ, ಕೇಂದ್ರ ಸರ್ಕಾರ ಮತ್ತು ಯುಪಿಎಸ್‌ಸಿಯ ಅನುಮತಿಯಿಲ್ಲದೆ ಐಎಎಸ್‌ ಹಾಗೂ ಇತರೆ ಅಖಿಲ ಭಾರತ ಸೇವಾ ಅಧಿಕಾರಿಗಳ ವಿರುದ್ಧ ಯಾವುದೇ ಛೀಮಾರಿ ಅಥವಾ ಶಿಸ್ತಿನ ಕ್ರಮ ಕೈಗೊಳ್ಳುವಂತಿಲ್ಲ.

ಐಎಎಸ್ ಪರೀಕ್ಷೆ ವಿಧಾನ

ಐಎಎಸ್ ಪರೀಕ್ಷೆಯನ್ನು ಮೂರು ಹಂತಗಳಲ್ಲಿ ನಡೆಸಲಾಗುತ್ತದೆ.  ಪ್ರಾಥಮಿಕ ಪರೀಕ್ಷೆ, ಪ್ರಧಾನ ಪರೀಕ್ಷೆ ಹಾಗೂ ಸಂದರ್ಶನ. ಐ.ಎ.ಎಸ್‌. ಮುಂತಾದ ಪರೀಕ್ಷೆಗಳನ್ನು ಯೂನಿಯನ್‌ ಪಬ್ಲಿಕ್‌ ಸರ್ವೀಸ್‌ ಕಮಿಷನ್‌ ನಡೆಸುತ್ತದೆ. ಇದಕ್ಕೆ ಯು.ಪಿ.ಎಸ್‌.ಸಿ. ಎಂದು ಕರೆಯಲಾಗುತ್ತದೆ.
ಇದರಲ್ಲಿ ಪ್ರಿಲಿಮ್ಸ್‌ ಮತ್ತು ಮುಖ್ಯ ಪರೀಕ್ಷೆ (ಮೈನ್ಸ್‌) ಎಂಬ ಎರಡು ಹಂತದ ಪರೀಕ್ಷೆಗಳಿರುತ್ತವೆ.

ಪರೀಕ್ಷೆ ತೆಗೆದುಕೊಳ್ಳಲು ಬೇಕಾದ ಶೈಕ್ಷಣಿಕ ಮತ್ತು ಇತರೆ ಅರ್ಹತೆ

1. ಪದವಿ ಪರೀಕ್ಷೆಯ ಅಂತಿಮ ಹಂತದಲ್ಲಿರುವವರೂ ಕೂಡ ಪ್ರಿಲಿಮ್ಸ್‌ ಬರೆಯಬಹುದು.ಪ್ರಿಲಿಮ್ಸ್‌ನಲ್ಲಿ ತೇರ್ಗಡೆಯಾಗಿ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದರೆ ಆಗ ಪದವಿ ತೇರ್ಗಡೆಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಬೇಕು.
2. ಯುಪಿಎಸ್‌ಸಿಯ ದೃಷ್ಟಿಯಲ್ಲಿ ವಿ.ವಿ.ಗಳ ಪರೀಕ್ಷೆಗೆ ತತ್ಸಮಾನ ಎನಿಸುವ ಬೇರೆ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರುವ ಅಭ್ಯರ್ಥಿಗಳೂ ಐಎಎಸ್‌ ಪರೀಕ್ಷೆಗೆ ಅರ್ಹರಾಗುತ್ತಾರೆ.
3. ತಾಂತ್ರಿಕ ಪದವೀಧರರು: ಬಿಇ., ಎಂ.ಬಿ.ಬಿಎಸ್‌ ಪದವೀಧರರು ಐಎಎಸ್‌ ಬರೆಯಲು ಅರ್ಹರು. ಯಾವುದೇ ಒಂದು ವಿಷಯದಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿರುವುದು ಕಡ್ಡಾಯ. ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದರೆ ಅಂತಿಮ ವರ್ಷದ ಪರೀಕ್ಷೆ ಪಾಸಾಗಿರಬೇಕು, ಇಂಟರ್ನ್‌ಶಿಪ್‌ ಮುಗಿಸಿರದಿದ್ದರೂ ಪರೀಕ್ಷೆ ತೆಗೆದುಕೊಳ್ಳಬಹುದು. ಸಂದರ್ಶನದ ವೇಳೆಗೆ ಅವರು ಅಂತಿಮ ಪರೀಕ್ಷೆಯೊಂದಿಗೆ ಇಂಟರ್ನ್‌ಶಿಪ್‌ ಕೂಡ ತೇರ್ಗಡೆಯಾಗಿದ್ದು ಸಂಬಂಧಿಸಿದ ಪ್ರಮಾಣಪತ್ರ ಹೊಂದಿರಬೇಕು.
4. ಕರ್ನಾಟಕದಲ್ಲಿ ವಿವಿಧ ವಿಶ್ವವಿದ್ಯಾನಿಲಯಗಳ ಮೂಲಕ ಡಿಗ್ರಿ ಮಾಡಿರುವವರು ಈ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳು.

ಶಿಕ್ಷಣದ ನಂತರ/ಜತೆಗೆ ಹೊಂದಿರಬೇಕಾದ ಇತರೆ ಅರ್ಹತೆಗಳು
ಐಎಎಸ್‌ ಮತ್ತು ಐಪಿಎಸ್‌ ಹುದ್ದೆಗಳಿಗೆ ಭಾರತದ ನಾಗರಿಕರಿಗೆ ಮಾತ್ರ ಪ್ರವೇಶಾವಕಾಶ.
ಯುಪಿಎಸ್‌ಸಿ ನಡೆಸುವ ಬೇರೆ ಪರೀಕ್ಷೆಗಳಿಗೆ ಭಾರತದ ನಾಗರಿಕರೊಡನೆ ನೇಪಾಳ, ಭೂತಾನ್‌ ಪ್ರಜೆಗಳೂ ಭಾಗ ವಹಿಸಬಹುದು.
ಜನವರಿ 1, 1962ಕ್ಕಿಂತ ಮೊದಲೇ ಭಾರತದಲ್ಲಿ ನೆಲೆಸಲು ಆಶ್ರಯ ಕೋರಿಬಂದಿರುವ ಟಿಬೆಟ್ಟಿನವರು ಸಹ ಇದೇ ರೀತಿ ಅರ್ಹರಾಗಿರುತ್ತಾರೆ.

ವಯೋಮಿತಿ

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ಆರು ಬಾರಿ ಹಾಗೂ ಒಬಿಸಿ ಅಭ್ಯರ್ಥಿಗಳಿಗಾಗಿ ಗರಿಷ್ಠ ಒಂಬತ್ತು ಬಾರಿ ಪರೀಕ್ಷೆ ಬರೆಯಲು ಅನುಮತಿಯಿದೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಎಷ್ಟು ಬಾರಿಯಾದರೂ ಪರೀಕ್ಷೆಗೆ ಹಾಜರಾಗಬಹುದು. ಪರೀಕ್ಷೆಗೆ ಹಾಜರಾಗಲು ಗರಿಷ್ಠ ವಯೋಮಿತಿ ಪರಿಶಿಷ್ಟ ಜಾತಿ/ಪಂಗಡದವರಿಗೆ 37, ಒಬಿಸಿಗಾಗಿ 35 ಹಾಗೂ ಇತರೆ ವರ್ಗದವರಿಗೆ 32. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಯು ಆ ವರ್ಷ ಆಗಸ್ಟ್‌ 1ರಂದು 32ರ ವಯಸ್ಸು ದಾಟಿರಬಾರದು. ಕನಿಷ್ಠ ವಯೋಮಿತಿ 21 ವರ್ಷ

English summary
Indian Administrative Service (IAS) is the Civil Services Examination or a competitive exam in India conducted by Union Public Service Commission for the recruitment to various Civil Services of the Government of India

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia