2022ರ ಜಂಟಿ ಪ್ರವೇಶ ಪರೀಕ್ಷೆಯ (ಜೆಇಇ) ಮುಖ್ಯ ಪರೀಕ್ಷೆಯ ದಿನಾಂಕಗಳನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ)ಯು ಪ್ರಕಟಿಸಿದೆ. ಜೆಇಇ ಮೇನ್ 2022ರ ಪರೀಕ್ಷೆಗಳನ್ನು ಈ ವರ್ಷ ಎರಡು ಬಾರಿ ನಡೆಸಲಾಗುತ್ತಿದ್ದು, ಮೊದಲ ಅಧಿವೇಶನ ಏಪ್ರಿಲ್‌ನಲ್ಲಿ ಮತ್ತು ಎರಡನೇ ಅಧಿವೇಶನವನ್ನು ಮೇ ತಿಂಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಜೆಇಇ ಮುಖ್ಯ ಪರೀಕ್ಷೆಯ ದಿನಾಂಕಗಳನ್ನು ಪ್ರಕಟಿಸಲಾಗಿದ್ದು, ಮೊದಲ ಅವಧಿಯು ಏಪ್ರಿಲ್ 16 ಮತ್ತು ಏಪ್ರಿಲ್ 21 ರ ನಡುವೆ ಮತ್ತು ಎರಡನೇ ಅವಧಿಯ ಪರೀಕ್ಷೆಯು ಮೇ 24 ರಿಂದ ಮೇ 29ರ ವರೆಗೆ ನಡೆಯಲಿದೆ.
ಜೆಇಇ ಮುಖ್ಯ ಪರೀಕ್ಷೆ 2022ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆರಂಭವಾಗಿದೆ. ಮೊದಲ ಅವಧಿಯ ಪರೀಕ್ಷೆಗೆ ಮಾರ್ಚ್ 1 ರಿಂದ ಮಾರ್ಚ್ 31, 2022 ರೊಳಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಹಾಕಬಹುದು.
ಜೆಇಇ ಮುಖ್ಯ ಪರೀಕ್ಷೆ 2022 ಅನ್ನು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಮತ್ತು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿ) ಸೇರಿದಂತೆ ದೇಶಾದ್ಯಂತ ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರಲ್ ಕೋರ್ಸ್‌ಗಳಲ್ಲಿ ಪದವಿಪೂರ್ವ ಪ್ರವೇಶವನ್ನು ಬಯಸುವ ಅಭ್ಯರ್ಥಿಗಳಿಗಾಗಿ ನಡೆಸಲಾಗುತ್ತದೆ. ಜೆಇಇ ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಜೆಇಇ ಅಡ್ವಾನ್ಸ್ಡ್ 2022 ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ. ಜೆಇಇ ಮುಖ್ಯ ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳಿದ್ದು, ಪೇಪರ್ 1 ಅಥವಾ ಬಿ.ಟೆಕ್ ಪೇಪರ್ ಮತ್ತು ಪೇಪರ್ 2 ಅಥವಾ ಬಿಆರ್ಕ್ ಮತ್ತು ಬಿಪ್ಲಾನಿಂಗ್ ಪತ್ರಿಕೆಗಳಿವೆ. ಬಿಆರ್ಕ್ ಮತ್ತು ಬಿಪ್ಲಾನಿಂಗ್ ಪತ್ರಿಕೆಗಳನ್ನು ಕ್ರಮವಾಗಿ ಪೇಪರ್ 2A ಮತ್ತು ಪೇಪರ್ 2B ನಂತೆ ಪ್ರತ್ಯೇಕವಾಗಿ ನಡೆಸಲಾಗುವುದು.
ಬಿಇ ಮತ್ತು ಬಿ.ಟೆಕ್ ಕಾರ್ಯಕ್ರಮಗಳಿಗೆ ಪ್ರವೇಶಕ್ಕಾಗಿ ಪೇಪರ್ 1 ಅನ್ನು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರಕ್ಕೆ ಕಂಪ್ಯೂಟರ್ ಆಧಾರಿತ ಕ್ರಮದಲ್ಲಿ ನಡೆಸಲಾಗುತ್ತದೆ. ಪೇಪರ್ 2ಎ ಮತ್ತು ಪೇಪರ್ 2ಬಿಗೆ ಗಣಿತ ಮತ್ತು ಆಪ್ಟಿಟ್ಯೂಡ್ ಪರೀಕ್ಷೆ ಸಾಮಾನ್ಯವಾಗಿದ್ದರೆ, ಡ್ರಾಯಿಂಗ್ ಟೆಸ್ಟ್ ಮತ್ತು ಪ್ಲಾನಿಂಗ್ ಕ್ರಮವಾಗಿ ಆರ್ಕಿಟೆಕ್ಚರ್ ಮತ್ತು ಬಿಪ್ಲಾನಿಂಗ್ ಕೋರ್ಸ್‌ಗಳಿಗೆ ಮಾತ್ರ ಇರುತ್ತದೆ.
ಜೆಇಇ ಮುಖ್ಯ ಪರೀಕ್ಷೆ 2022 ಅನ್ನು ಅಸ್ಸಾಮಿ, ಬೆಂಗಾಲಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಉರ್ದು ಜೊತೆಗೆ ಹಿಂದಿ, ಇಂಗ್ಲಿಷ್ ಮತ್ತು ಗುಜರಾತಿ ಭಾಷೆಗಳಲ್ಲಿ ನಡೆಯಲಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.