ಕರ್ನಾಟಕ ಕೇಂದ್ರೀಯ ವಿ.ವಿ ಪ್ರವೇಶ ಪರೀಕ್ಷೆ ದಿನಾಂಕ ಪ್ರಕಟ

Posted By:

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ದ 2017-18ನೇ ಸಾಲಿನ ವಿವಿಧ ಕೋರ್ಸುಗಳ ಪ್ರವೇಶಕ್ಕೆ ಮೇ 17 ಮತ್ತು 18ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಸಿಇಟಿ-2017)ಯು ನಡೆಯಲಿದೆ.

ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕು ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ಯ ಕುಲಪತಿ ಪ್ರೊ.ಎಚ್.ಎಂ.ಮಹೇಶ್ವರಯ್ಯ ಪತ್ರಿಕಾಗೋಷ್ಠಿಯಲ್ಲಿ ಪ್ರವೇಶ ಪರೀಕ್ಷೆಯ ಮಾಹಿತಿಯನ್ನು ತಿಳಿಸಿದ್ದಾರೆ.

76 ಕೇಂದ್ರಗಳಲ್ಲಿ ಪರೀಕ್ಷೆ

ಕರ್ನಾಟಕ ಕೇಂದ್ರೀಯ ವಿ.ವಿ ಸೇರಿದಂತೆ ದೇಶದ 10 ಕೇಂದ್ರೀಯ ವಿಶ್ವವಿದ್ಯಾಲಯಗಳ ಪ್ರವೇಶಕ್ಕೆ ದೇಶದ 76 ಪರೀಕ್ಷಾ ಕೇಂದ್ರಗಳಲ್ಲಿ ಜಂಟಿ ಪ್ರವೇಶ ಪರೀಕ್ಷೆ ನಡೆಸಲಾಗುವುದು.

ಪ್ರವೇಶ ಪರೀಕ್ಷೆ ದಿನಾಂಕ ಪ್ರಕಟ

ಕರ್ನಾಟಕದ ಕಲಬುರ್ಗಿ, ಬೀದರ್, ಯಾದಗಿರಿ, ಹುಬ್ಬಳ್ಳಿ, ಬೆಂಗಳೂರು, ಉಡುಪಿ, ರಾಯಚೂರು, ದಾವಣಗೆರೆ ಮತ್ತು ಮೈಸೂರು ಸೇರಿದಂತೆ ದೇಶದ 76 ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ನಡೆಸಲಾಗುವುದು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಒಟ್ಟು 8 ಪದವಿ, 19 ಸ್ನಾತಕೋತ್ತರ ಪದವಿ ಮತ್ತು 13 ಪಿಎಚ್‌.ಡಿ ಕೋರ್ಸುಗಳಿಗೆ ಪ್ರವೇಶ ನೀಡಲಾಗುವುದು.

ಪ್ರಸಕ್ತ ಸಾಲಿನಿಂದ ಬಿ.ಇಡಿ ಮತ್ತು ಎಂ.ಇಡಿ, ಜಾನಪದ ಮತ್ತು ಬುಡಕಟ್ಟು ಅಧ್ಯಯನ, ಸಂಗೀತ ಮತ್ತು ದೃಶ್ಯ ಕಲೆ ವಿಭಾಗಗಳನ್ನು ಆರಂಭಿಸಲಾಗುತ್ತಿದೆ. ಬಿ.ಎಸ್ಸಿ, ಎಂ.ಎಸ್ಸಿ, ಬಿ.ಟೆಕ್ ಮತ್ತು ಎಂ.ಟೆಕ್ ಇಂಟಿಗ್ರೆಟೆಡ್ ಕೋರ್ಸುಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಅರ್ಜಿ ಪ್ರಕ್ರಿಯೆ

ವಿಶ್ವವಿದ್ಯಾಲಯದ ವೆಬ್‌ಸೈಟ್‌ www.cuk.ac.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ₹850 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ₹400 ಶುಲ್ಕ ನಿಗದಿಪಡಿಸಲಾಗಿದೆ.

ಸಹಾಯವಾಣಿ ಸೌಲಭ್ಯ

ಸಹಾಯವಾಣಿ ಕೂಡ ಆರಂಭಿಸಲಾಗಿದ್ದು, ಬೆಳಿಗ್ಗೆ 10.30ರಿಂದ ಸಂಜೆ 5 ಗಂಟೆಯವರೆಗೆ ದೂ. ಸಂ: 08477- 226756, 226707 ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ

ಶುಲ್ಕ ವಿನಾಯಿತಿ ಮತ್ತು ಶಿಷ್ಯವೇತನ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ, ಹಾಸ್ಟೆಲ್ ಶುಲ್ಕ ಮತ್ತು ಮೆಸ್ ಬಿಲ್ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗಗಳ ಇಲಾಖೆಯಿಂದ ಶುಲ್ಕ ಮರುಪಾವತಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗುತ್ತಿದೆ.

ಆರ್ಥಿಕವಾಗಿ ಹಿಂದುಳಿದ ಹಾಗೂ ವಾರ್ಷಿಕ ₹6 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಪೋಷಕರ ಹೆಣ್ಣುಮಕ್ಕಳಿಗೆ ಬೋಧನಾ ಶುಲ್ಕದಲ್ಲಿ ಸಂಪೂರ್ಣ ವಿನಾಯಿತಿ ನೀಡಲಾಗುತ್ತಿದೆ.

English summary
karnataka central university entrance exam dates are out

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia