ಸಿಇಟಿ 2017: ಪ್ರಶ್ನೆ ಪತ್ರಿಕೆ ಮತ್ತು ಒಎಂಆರ್ ಪತ್ರಿಕೆ ಬಗ್ಗೆ ನಿಮಗೆಷ್ಟು ಗೊತ್ತು?

Posted By:

ಸಾಮಾನ್ಯ ಪ್ರವೇಶ ಪರೀಕ್ಷೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಉಳಿದಿವೆ. ಪರೀಕ್ಷೆ ತಯಾರಿಯಲ್ಲಿರುವ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಯ ಸಂಪೂರ್ಣ ಮಾಹಿತಿ ನೀಡವುದೇ ಈ ಲೇಖನದ ಉದ್ದೇಶ.

ಸಾಮಾನ್ಯ ಪ್ರವೇಶ ಪರೀಕ್ಷೆಗೂ ಹೋಗುವ ಮುನ್ನ ಪ್ರಶ್ನೆ ಪತ್ರಿಕೆಗಳು ಮತ್ತು ಒಎಂಆರ್ ಪತ್ರಿಕೆಗಳ ಬಗ್ಗೆ ನಿಮಗೆ ತಿಳಿದಿದ್ದರೆ ಪರೀಕ್ಷೆಯ ದಿನ ಯಾವುದೇ ಗೊಂದಲವಿಲ್ಲದೆ ಉತ್ತರ ಪತ್ರಿಕೆ ತುಂಬುತ್ತೀರಿ.

ಕಾಲಾವಧಿ, ಪ್ರಶ್ನೆ ಪತ್ರಿಕೆ ಮತ್ತು ಒಎಂಆರ್ ಉತ್ತರದ ಹಾಳೆಗಳು

ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು, ಎರಡು ದಿನ ನಾಲ್ಕು ವಿಷಯಗಳಿಗೆ ಸಂಬಂಧಿಸಿದಂತೆ ನಾಲ್ಕು ಬೇರೆ ಬೇರೆ ಅವಧಿಗಳಲ್ಲಿ ನಡೆಸಲಾಗುವುದು. ಅಧಿಸೂಚಿಸಿದ ದಿನಾಂಕ ಮತ್ತು ಸಮಯಕ್ಕೆ ಅನುಸಾರವಾಗಿ, ಮೊದಲನೆಯ ದಿನ ಜೀವಶಾಸ್ತ್ರ ಮತ್ತು ಗಣಿತಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದಂತೆ ಎರಡು ಅವದಿಗಳಲ್ಲಿ ಪರೀಕ್ಷೆ ನಡೆಸಲಾಗುವುದು.

ಎರಡನೇ ದಿನ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದಂತೆ ಎರಡು ಅವಧಿಗಳಲ್ಲಿ ಪರೀಕ್ಷೆ ನಡೆಸಲಾಗುವುದು. ಪ್ರತಿಯೊಂದು ಪತ್ರಿಕೆ/ವಿಷಯಕ್ಕೆ 60 ಅಂಕಗಳನ್ನು ಮತ್ತು ಪ್ರತಿಯೊಂದು ಅವಧಿಗೆ 80 ನಿಮಿಷಗಳನ್ನು ನಿಗದಿಪಡಿಸಲಾಗುವುದು.

ಪ್ರಶ್ನೆ ಪತ್ರಿಕೆ ಮತ್ತು ಒಎಂಆರ್ ಪತ್ರಿಕೆ ರಹಸ್ಯ

ಪ್ರತಿಯೊಂದು ಪ್ರಶ್ನೆಪತ್ರಿಕೆಯೂ ಬಹು ಆಯ್ಕೆಯ ಪ್ರಶ್ನೆಗಳ (ವಸ್ತುನಿಷ್ಠ) ಸ್ವರೂಪದ್ದಾಗಿರುತ್ತದೆ. ಪ್ರತಿಯೊಂದು ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆಯು 16 ಬೇರೆ ಬೇರೆ ಆವೃತ್ತಿಗಳಲ್ಲಿ ಇರುತ್ತದೆ ಮತ್ತು ಪ್ರತಿಯೊಂದು ಪ್ರಶ್ನೆಯು ನಾಲ್ಕು ಬೇರೆ ಬೇರೆ ಆಯ್ಕೆಗಳನ್ನು ಹೊಂದಿರುತ್ತದೆ. ಪ್ರತಿಯೊಂದು ಪ್ರಶ್ನೆಗೆ ಒಂದು ಅಂಕವನ್ನು ನಿಗದಿಪಡಿಸಲಾಗಿರುತ್ತದೆ.

ವಿದ್ಯಾರ್ಥಿಯು, ಗರಿಷ್ಠ ಅಂಕಗಳನ್ನು ಪಡೆಯುವ ದೃಷ್ಟಿಯಿಂದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುವರೆಂದು ನಿರೀಕ್ಷಿಸಲಾಗಿದೆ. ಇದನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಪ್ರಶ್ನೆಗಳ ಆಯ್ಕೆಗೆ ಇಲ್ಲಿ ಅವಕಾಶ ಇರುವುದಿಲ್ಲ. ತಪ್ಪು/ಸರಿಯಲ್ಲದ ಉತ್ತರಗಳಿಗೆ ಯಾವುದೇ ಋಣಾತ್ಮಕ ಮೌಲ್ಯಮಾಪನ ಇರುವುದಿಲ್ಲ. ಆದರೆ, ಒಂದೇ ಪ್ರಶ್ನೆಗೆ ಒಂದಕ್ಕಿಂತ ಹೆಚ್ಚು ಉತ್ತರಗಳನ್ನು ಗುರುತು ಹಾಕಿದ್ದಲ್ಲಿ, ಅಂಥ ಉತ್ತರಕ್ಕೆ ಯಾವುದೇ ಅಂಕವನ್ನು ನೀಡುವುದಿಲ್ಲ.

ಪ್ರಶ್ನೆಪತ್ರಿಕೆಯ ಆವೃತ್ತಿಯ ಸಂಕೇತವನ್ನು ಪ್ರಶ್ನೆ ಪತ್ರಿಕೆಯ ಮುಖಪುಟದ ಮೇಲೆ ದಪ್ಪನಾಗಿ ಮುದ್ರಿಸಲಾಗಿರುತ್ತದೆ. ಪ್ರತಿಯೊಂದು ಪತ್ರಿಕೆಯಲ್ಲಿ ಬಳಸಲಾಗುವ ಆವೃತ್ತಿ ಸಂಕೇತಗಳು ಎ-1 ರಿಂದ ಎ-4, ಬಿ-1 ರಿಂದ ಬಿ-4, ಸಿ-1ರಿಂದ ಸಿ-4 ಮತ್ತು ಡಿ-1 ರಿಂದ ಡಿ-4 ಆಗಿರುತ್ತದೆ. ಒಬ್ಬ ವಿದ್ಯಾರ್ಥಿಗೆ ನೀಡುವ ಪ್ರಶ್ನೆ ಪತ್ರಿಕೆಗಳ ಆವೃತ್ತಿ ಸಂಕೇತವು, ಪರೀಕ್ಷೆಯ ಬೇರೆ ಬೇರೆ ಅವಧಿಗಳಿಗೆ ಒಂದೇ ಆಗಿರಬಹುದು ಅಥವಾ ಬೇರೆ ಬೇರೆ ಆಗಿರಬಹುದು.

ಉತ್ತರದ ಹಾಳೆಗಳಾಗಿ ಆಪ್ಟಿಕಲ್ ಮಾರ್ಕ್ ರೀಡರ್ ಹಾಳೆಗಳ (OMR SHEETS) ಬಳಕೆ

ವಿದ್ಯಾರ್ಥಿಗಳು, ಉತ್ತರಗಳನ್ನು ಗುರುತು ಹಾಕುವುದಕ್ಕಾಗಿ ಉಪಯೋಗಿಸಲಾಗುವ ಆಪ್ಟಿಕಲ್ ಮಾರ್ಕ್ ರೀಡರ್ (ಒಎಂಆರ್) ಹಾಳೆಗಳ ಮಾದರಿಯನ್ನು ಕ.ಪ.ಪ್ರಾ.ದ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿರುತ್ತದೆ.

ಉತ್ತರ ಪತ್ರಿಕೆಯ ಪಡಿಯಚ್ಚು ಪ್ರತಿ ಇರುವಂತೆ ಉತ್ತರ ಪತ್ರಿಕೆಯನ್ನು ರೂಪಿಸಬೇಕಾದ ಅಗತ್ಯವಿದ್ದುದರಿಂದ, ಒಂದೇ ಬದಿಯಲ್ಲಿ ಎಲ್ಲಾ ಮಾಹಿತಿ ಇರುವಂತೆ ಮತ್ತು ಉತ್ತರಗಳನ್ನು ಸಹ ಅದೇ ಬದಿಯಲ್ಲಿ ಗುರುತು ಮಾಡುವಂತೆ ಒಎಂಆರ್ ಹಾಳೆಯನ್ನು ವಿನ್ಯಾಸಗೊಳಿಸಲಾಗಿದೆ.

ಈ ಹಾಳೆಯ ಮೇಲ್ಭಾಗವನ್ನು ವಿದ್ಯಾರ್ಥಿಯ ಹೆಸರು, ಸಿಇಟಿ ಸಂಖ್ಯೆ, ಪ್ರಶ್ನೆ ಪುಸ್ತಿಕೆಯ ಆವೃತ್ತಿ ಸಂಖ್ಯೆ ಮತ್ತು ಕ್ರಮ ಸಂಖ್ಯೆಯನ್ನು ತುಂಬುವ ಉದ್ದೇಶಕ್ಕಾಗಿ ರೂಪಿಸಲಾಗಿದೆ.ಕೆಳಭಾಗವನ್ನು, ಉತ್ತರಗಳನ್ನು ಗುರುತು ಹಾಕುವುದಕ್ಕೆ, ಕೊಠಡಿ ಮೇಲ್ವಿಚಾರಕರು ಮತ್ತು ವಿದ್ಯಾರ್ಥಿಗಳು ತಮ್ಮ ಸಹಿ ಹಾಕುವುದಕ್ಕೆ ಹಾಗೂ ವಿದ್ಯಾರ್ಥಿಯ ಎಡಗೈ ಹೆಬ್ಬೆಟ್ಟಿನ ಗುರುತು ಹಾಕುವುದಕ್ಕೆ ರೂಪಿಸಲಾಗಿದೆ.

ವಿಷಯಕ್ಕೆ ಸಂಬಂಧಿಸಿದ ಸ್ಥಳದಲ್ಲಿ ವಿವರವನ್ನು ಮುಂಚಿತವಾಗಿಯೇ ಮುದ್ರಿಸಲಾಗಿರುತ್ತದೆ. ಪ್ರತಿಯೊಂದು ಬಾಬ್ತಿಗೆ ಸಂಬಂಧಿಸಿದಂತೆ ಇರುವ ಚೌಕಾಕಾರದ ಖಾಲಿ ಮನೆಗಳನ್ನು ವಿದ್ಯಾರ್ಥಿಯು ದೊಡ್ಡ ಅಕ್ಷರಗಳಲ್ಲಿ ಮತ್ತು ಸಂಖ್ಯೆಗಳಲ್ಲಿ ತುಂಬಬೇಕು. ಅಕ್ಷರಗಳು ಅಥವಾ ಸಂಖ್ಯೆಗಳಿಗೆ ಸಂಬಂಧಿಸಿದಂತೆ ಇರುವ ವೃತ್ತಗಳನ್ನು, ಕೇವಲ ನೀಲಿ ಅಥವಾ ಕಪ್ಪು ಶಾಯಿಯ ಬಾಲ್ ಪಾಯಿಂಟ್ ಪೆನ್ನಿನಿಂದ ಮಾತ್ರವೇ ಸಂಪೂರ್ಣವಾಗಿ ತುಂಬಬೇಕು.

ಇದನ್ನು ಗಮನಿಸಿ:ಸಿಇಟಿ 2017: ಪ್ರವೇಶ ಪತ್ರ ಪ್ರಕಟ

English summary
Know more about cet question paper and OMR sheet pattern before going to exams.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia