2018 ರ ಶೈಕ್ಷಣಿಕ ವರ್ಷದಲ್ಲಿ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳ ಸಂಖ್ಯೆ ಹೆಚ್ಚಳ

Posted By: Vinaykumar

ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಶಿಕ್ಷಣ ಪಡೆಯುವ ಆಕಾಂಕ್ಷಿಗಳು ಮುಂಬರುವ ವರ್ಷದಿಂದ ಮೂರು ಬಾರಿ ಪ್ರವೇಶ ಪರೀಕ್ಷೆ ತೆಗೆದುಕೊಳ್ಳಬಹುದಾಗಿದೆ. ಪ್ರಸ್ತುತ ಜೆ ಇ ಇ ಮುಖ್ಯ ಪರೀಕ್ಷೆಯು ವರ್ಷಕ್ಕೆ ಒಂದು ಬಾರಿ ಮಾತ್ರ ಬರೆಯಲು ಅವಕಾಶವಿತ್ತು, ಆದರೆ ಹೊಸ ನಿರ್ಣಯದ ಪ್ರಕಾರ ವಿದ್ಯಾರ್ಥಿಗಳು ಒಂದೇ ವರ್ಷದಲ್ಲಿ ಮೂರು ಬಾರಿ ಈ ಪ್ರವೇಶ ಪರೀಕ್ಷೆಯನ್ನು ಬರೆಯಬಹುದಾಗಿದೆ.

ಆನ್ಲೈನ್ ಮೂಲಕ ಪ್ರವೇಶ ಪರೀಕ್ಸೆ

ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಉನ್ನತ ಶಿಕ್ಷಣವನ್ನು ಆನ್ಲೈನ್ ಮಾಡುವ ಬಗ್ಗೆ ಪ್ರಸ್ತಾಪವಾಗಿರುವ ಹಿನ್ನೆಲೆಯಲ್ಲಿ ನ್ಯಾಷನಲ್ ಟೆಸ್ಟಿಂಗ್ ಸರ್ವಿಸ್ (ಎನ್ ಟಿ ಎಸ್) ಸಂಸ್ಥೆಯು ಈ ನಿರ್ಣಯಕ್ಕೆ ಬಂದಿದೆ. ಈ ಪ್ರಕಾರ ಮುಂಬರುವ ಶೈಕ್ಷಣಿಕ ವರ್ಷದಿಂದ ಜೆ ಇ ಇ ಮುಖ್ಯ ಪರೀಕ್ಷೆಯು ಆನ್ಲೈನ್ ಆಗುವ ಸಾಧ್ಯತೆ ಹೆಚ್ಚಿದೆ.
ಹೊಸ ನಿರ್ಣಯದಂತೆ ಎನ್ ಟಿ ಎಸ್, ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳನ್ನು ವರ್ಷದಲ್ಲಿ ಮೂರು ಬಾರಿ ಅಆಯೋಜಿಸಲಿದೆ. ಇದರಿಂದಾಗಿ ಇಂಜಿನಿಯರಿಂಗ್ ಆಕಾಂಕ್ಷಿಗಳು ವರ್ಷಗಟ್ಟಲೆ ಕಾಯುತ್ತ ಸಮಯ ವ್ಯರ್ಥ ಮಾಡುವುದು ತಪ್ಪುತ್ತದೆ. ಇದರಿಂದ ಮೊದಲ ಪ್ರಯತ್ನದಲ್ಲಿ ವಿಫಲರಾದ ಆಕಾಂಕ್ಷಿಗಳು ಕಡಿಮೆ ಅವಧಿಯಲ್ಲೇ ಮತ್ತೊಂದು ಬಾರಿ ಪರೀಕ್ಷೆ ತೆಗೆದುಕೊಳ್ಳುವ ಅವಕಾಶ ಪಡೆಯಲಿದ್ದಾರೆ.
ಪ್ರಸ್ತುತ ಇರುವ ನಿಯಮದ ಪ್ರಕಾರ ವಿದ್ಯಾರ್ಥಿಗಳು ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಪರೀಕ್ಷೆ ಬರೆಯಬಹುದಾಗಿತ್ತು, ಪ್ರತಿ ವರ್ಷವೂ ಲಕ್ಷಾಂತರ ವಿದ್ಯಾರ್ಥಿಗಳು ಜೆ ಇ ಇ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ವರ್ಷಕ್ಕೆ ಒಮ್ಮೆ ಮಾತ್ರ ಅವಕಾಶವಿದ್ದ ಕಾರಣ ಅನೇಕರು ಅವಕಾಶ ವಂಚಿತರಾಗುತ್ತಿದ್ದರು. ಈಗ ಹೊಸ ನಿಯಮವು ಅವಕಾಶ ವಂಚಿತರಿಗೆ ವರದಾನವಾಗಲಿದೆ.

ಏಕೆ ಈ ಬದಲಾವಣೆ?

1. ಪರೀಕ್ಷೆಗಳಲ್ಲಿ ಗುಣಮಟ್ಟ ಮತ್ತು ಪಾರದರ್ಶಕತೆ ತರುವ ಉದ್ದೇಶದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ.

2. ಪರೀಕ್ಷೆ ವೇಳೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗುವುದನ್ನು ತಡೆಯಬಹುದು.

ಆನ್ಲೈನ್ ಪರೀಕ್ಷೆ ಮಾಡುವ ಮೂಲಕ ಉತ್ತಮ ಗುಣಮಟ್ಟವನ್ನು ಸಾಧಿಸಬಹುದು ಎಂದು ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ ನ ನಿರ್ದೇಶಕರಾದ ಬಿಪಿನ್ ಬಾತ್ರ ಅಭಿಪ್ರಾಯ ಪಟ್ಟಿದ್ದಾರೆ.

ಎನ್ ಟಿ ಎಸ್ ಪ್ರವೇಶ ಪರೀಕ್ಷೆಗಳು ಯಾವಾಗ ಕಾರ್ಯರೂಪಕ್ಕೆ ಬರಲಿವೆ?

ಮುಂಬರುವ ಶೈಕ್ಷಣಿಕ ವರ್ಷ ಅಂದರೆ ೨೦೧೮ ಕ್ಕೆ ಎನ್ ಟಿ ಎಸ್ ಆನ್ಲೈನ್ ಪರೀಕ್ಷೆಗಳನ್ನು ಆಯೋಜಿಸಲಿದೆ. ಜೆ ಇ ಇ , ಸಿ ಎ ಟಿ ಮತ್ತು ಯುಜಿಸಿ ಎನ್ ಇ ಟಿ ಸೇರಿದಂತೆ ಹಲವು ಪರೀಕ್ಷೆಗಳು ಆನ್ಲೈನ್ ಆಗುವ ಸಾಧ್ಯತೆ ಇದೆ.

ಪರೀಕ್ಷಾ ವಿಧಾನ

ಮೊದಲಿಗೆ ಪ್ರಾಯೋಗಿಕವಾಗಿ ಕೆಲವು ಪರೀಕ್ಷೆಗಳು ನಡೆಯಲಿವೆ ಆನಂತರ ಏಕಕಾಲದಲ್ಲಿ 10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳುವ ಹಾಗೆ ತಂತ್ರಜ್ಞಾನವನ್ನು ರೂಪಿಸಲಾಗುತ್ತದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಸುಲಭವಾಗುವ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

English summary
Multiple entrance exams for engineering aspirants likely for the academic year 2018

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia