ಎಸ್ ಎಸ್ ಎಲ್ ಸಿ ಪರೀಕ್ಷೆ : ಮಾದರಿ ಉತ್ತರ ಪತ್ರಿಕೆಗಳು ಲಭ್ಯ

Posted By:

ಎಸ್ ಎಸ್ ಎಲ್ ಸಿ ಪರೀಕ್ಷೆ ತಯಾರಿಯಲ್ಲಿರುವ ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆಗಳನ್ನು ತುಂಬಲು ಹಾಗೂ ಉತ್ತರ ಪತ್ರಿಕೆಗಳಲ್ಲಿ ಉತ್ತರಿಸುವ ಕ್ರಮ ತಿಳಿಸಲು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ಮಾದರಿ ಉತ್ತರ ಪತ್ರಿಕೆಗಳನ್ನು ಬಿಡುಗಡೆ ಮಾಡಿದೆ.
ಪರೀಕ್ಷೆ ವೇಳೆ ಯಾವುದೇ ರೀತಿಯ ಗೊಂದಲ ಉಂಟಾಗಬಾರದು ಎಂಬ ಉದ್ದೇಶದಿಂದ ಹಾಗೂ ವಿದ್ಯಾರ್ಥಿಗಳು ಉತ್ತರ ಪತ್ರಿಕೆಗಳನ್ನು ತಪ್ಪಿಲ್ಲದಂತೆ ಸುಲಭವಾಗಿ ತುಂಬುವಂತೆ ಮಾಡಲು ಈ ಮಾದರಿ ಉತ್ತರ ಪತ್ರಿಕೆಗಳನ್ನು ತನ್ನ ಅಧಿಕೃತ ವೆಬ್ಸೈಟ್ ವಿಳಾಸದಲ್ಲಿ http://kseeb.kar.nic.in/index.asp ಬಿಡುಗಡೆ ಮಾಡಲಾಗಿದೆ.
ಶಾಲೆಗಳಿಗೆ ಉತ್ತಮ ಫಲಿತಾಂಶ ತರುವ ಯೋಜನೆಯಲ್ಲಿರುವ ಶಿಕ್ಷಕರು ವಿದ್ಯಾರ್ಥಿಗಳಿಗೆ ಈ ಉತ್ತರ ಪತ್ರಿಕೆಯನ್ನು ವಿವರಿಸುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆಗಳಲ್ಲಿ ಉತ್ತರಿಸುವ ಕ್ರಮದ ಪರಿಚಯ ಮಾಡಬಹುದಾಗಿದೆ.

ಮಾದರಿ ಉತ್ತರ ಪತ್ರಿಕೆಗಳು

ಮಾದರಿ ಉತ್ತರ ಪತ್ರಿಕೆ ವಿವರ

ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ಮೂರು ರೀತಿಯ ಉತ್ತರ ಪತ್ರಿಕೆಗಳನ್ನು ಬಿಡುಗಡೆ ಮಾಡಿದೆ.

 1. ಸಾಮಾನ್ಯ ಉತ್ತರಪತ್ರಿಕೆ (ಜನರಲ್ ಬುಕ್ಲೆಟ್): ಸಾಮಾನ್ಯ ಉತ್ತರ ಪತ್ರಿಕೆಯು ಮುಖ್ಯ ಉತ್ತರ ಪತ್ರಿಕೆಯಾಗಿದ್ದು ಇದಾಗಿದೆ. ವಿದ್ಯಾರ್ಥಿಯು ತನ್ನ ಪರೀಕ್ಷಾ ವಿವರಗಳನ್ನು ತಪ್ಪಿಲ್ಲದಂತೆ ಉತ್ತರ ಪತ್ರಿಕೆಯ ಮೂಡ್ನಪುಟದಲ್ಲಿ ತುಂಬಿಸಬೇಕು. ಒಟ್ಟು 20 ಪುಟಗಳ ಪತ್ರಿಕೆ ಇದಾಗಿದ್ದು, ವಿದ್ಯಾರ್ಥಿಗಳಿಗೆ ಸಾಮಾನ್ಯ ಸೂಚನೆಗಳನ್ನು ಇದು ಒಳಗೊಂಡಿರುತ್ತದೆ.
 2. ಹೆಚ್ಚುವರಿ ಉತ್ತರ ಪತ್ರಿಕೆ (ಅಡಿಷನಲ್ ಬುಕ್ಲೆಟ್):ಮುಖ್ಯ ಉತ್ತರ ಪತ್ರಿಕೆ ತುಂಬಿದ ನಂತರ ಹೆಚ್ಚುವರಿ ಬುಕ್ಲೆಟ್ ಅವಶ್ಯಕತೆ ಇದ್ದಲ್ಲಿ ವಿದ್ಯಾರ್ಥಿಯು ಈ ಪತ್ರಿಕೆಯನ್ನು ಬಳಸಿಕೊಳ್ಳಬಹುದಾಗಿದ್ದು, ಒಟ್ಟು ನಾಲ್ಕು ಪುಟಗಳನ್ನೂ ಒಳಗೊಂಡಿದೆ. ಹೆಚ್ಚುವರಿ ಉತ್ತರ ಪತ್ರಿಕೆ ಪಡೆದ ವಿದ್ಯಾರ್ಥಿಗಳು ಪತ್ರಿಕೆಯ ಮೇಲ್ಭಾಗದಲ್ಲಿ ಮುಖ್ಯ ಉತ್ತರ ಪತ್ರಿಕೆ ಸಂಖ್ಯೆ ಮತ್ತು ನೋಂದಣಿ ಸಂಖ್ಯೆ ಭರ್ತಿ ಮಾಡಿ ಕೊಠಡಿ ಮೇಲ್ವಿಚಾರಕರ ಸಹಿ ಕಡ್ಡಾಯವಾಗಿ ಪಡೆಯಬೇಕು.
 3. ಗಣಿತ ಉತ್ತರ ಪತ್ರಿಕೆ (ಮ್ಯಾಥೆಮ್ಯಾಟಿಕ್ಸ್ ಬುಕ್ಲೆಟ್) : ಗಣಿತ ಪತ್ರಿಕೆಯನ್ನು ಉತ್ತರಿಸಲು ಪ್ರತ್ಯೇಕ ಉತ್ತರ ಪತ್ರಿಕೆಯನ್ನು ರೂಪಿಸಲಾಗಿದ್ದು, ಇದು ಸಾಮಾನ್ಯ ಪತ್ರಿಕೆಯಲ್ಲೇ ಇದ್ದು ಗ್ರಾಫ್ ಶೀಟ್ ಒಳಗೊಂಡಿರುತ್ತದೆ.

ಉತ್ತರ ಪತ್ರಿಕೆಯಲ್ಲಿರುವ ಸಾಮಾನ್ಯ ಸೂಚನೆಗಳು

 • ಪ್ರಶ್ನೆ ಪತ್ರಿಕೆಯನ್ನು ಓದಿ ಅರ್ಥೈಸಿಕೊಳ್ಳಲು 15 ನಿಮಿಷಗಳ ಹೆಚ್ಚಿನ ಕಾಲಾವಕಾಶ ನೀಡಲಾಗಿದೆ.
 • ಪರೀಕ್ಷೆ ಪ್ರಾರಂಭವಾದ 30 ನಿಮಿಷಗಳವರೆಗೆ ಪರೀಕ್ಷಾ ಕೊಠಡಿಯಿಂದ ಅಭ್ಯರ್ಥಿಯನ್ನು ಹೊರಗೆ ಹೋಗಲು ಅನುಮತಿ ನೀಡಲಾಗುವುದಿಲ್ಲ. ಯಾವುದೇ ಅಭ್ಯರ್ಥಿಯನ್ನು 30 ನಿಮಿಷಗಳ ನಂತರ ಬಿಡುಗಡೆ ಮಾಡಿದ್ದಲ್ಲಿ ಪುನಃ ಪರೀಕ್ಷಾ ಕೊಠಡಿಗೆ ಹಾಜರಾಗಲು ಅವಕಾಶವಿರುವುದಿಲ್ಲ.
 • ಮುಖ್ಯ ಉತ್ತರ ಪತ್ರಿಕೆಯ ಮುಖಪುಟದಲ್ಲಿ ನಿಗದಿಪಡಿಸಿದ ಸ್ಥಳಗಳಲ್ಲಿ ಹಾಗೂ ಹೆಚ್ಚುವರಿ ಪುರವಣಿ ಉತ್ತರ ಪತ್ರಿಕೆಯಲ್ಲಿ ನೋಂದಣಿ ಸಂಖ್ಯೆಯನ್ನು ಸ್ಪಷ್ಟವಾಗಿ ಬರೆಯುವುದು. ವಿದ್ಯಾರ್ಥಿಯು ನೋಂದಣಿ ಸಂಖ್ಯೆಯ ಮೇಲೆ ತಿದ್ದಿ ಬರೆದಿದ್ದಲ್ಲಿ ಕೊಠಡಿ ಮೇಲ್ವಿಚಾರಕರು ದೃಢೀಕರಿಸುವುದು.
 • ಅಭ್ಯರ್ಥಿಯು ಮಾದ್ಯಮಕ್ಕಾಗಿ ನಿಗದಿಪಡಿಸಿರುವ ಸ್ಥಳದಲ್ಲಿ ತಮ್ಮ ಬೋಧನಾ ಮಾಧ್ಯಮ ಬರೆಯುವುದು.
 • ಅಭ್ಯರ್ಥಿಯು ಪ್ರಶ್ನೆ ಸಂಖ್ಯೆಯನ್ನು ಸ್ಪಷ್ಟವಾಗಿ ಕಾಣುವಂತೆ ಗೆರೆಯ ಎಡಭಾಗದಲ್ಲಿ ಬರೆಯುವುದು. ತಪ್ಪು ಪ್ರಶ್ನೆ ಸಂಖ್ಯೆ ಹಾಗೂ ಪ್ರಶ್ನೆ ಸಂಖ್ಯೆಯ ಮೇಲೆ ತಿದ್ದಿ ಬರೆದಿದ್ದಲ್ಲಿ ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ.
 • ಉತ್ತರ ಪತ್ರಿಕೆಯ ಎರಡು ಭಾಗಗಳಲ್ಲೂ ನೀಲಿ/ಕಪ್ಪು ಶಾಯಿ ಅಥವಾ ಬಾಲ್ ಪೆನ್ನಿನಿಂದ ಉತ್ತರಿಸುವುದು. ಪೆನ್ನು/ ಬೇರೆ ಶಾಯಿಯ ಪೆನ್ನನ್ನು ಬದಲಾಯಿಸಲು ಕೊಠಡಿ ಮೇಲ್ವಿಚಾರಕರ ಸಹಿಯೊಂದಿಗೆ ಅನುಮತಿ ಪಡೆಯುವುದು. ವಿದ್ಯಾರ್ಥಿಗಳು ಸೀಸದ ಕಡ್ಡಿ (ಪೆನ್ಸಿಲ್) ಯಿಂದ ಉತ್ತರಗಳನ್ನು ಬರೆಯಬಾರದು. (ನಕ್ಷೆಗಳು, ರೇಖಾಚಿತ್ರಗಳು ಮತ್ತು ಭೂಪಟಗಳನ್ನು ಹೊರತುಪಡಿಸಿ)
 • ಬಹು ಆಯ್ಕೆ ಪ್ರಶ್ನೆಗಳಿಗೆ ಒಂದು ಬಾರಿ ಮಾತ್ರ ಉತ್ತರಿಸುವುದು. ಒಂದು ವೇಳೆ ಅಭ್ಯರ್ಥಿಯು ಒಂದು ಬಾರಿಗಿಂತ ಹೆಚ್ಚು ಅವಕಾಶಗಳಲ್ಲಿ ಉತ್ತರಿಸಿದರೆ ಮೊದಲನೇ ಉತ್ತರವನ್ನು ಮಾತ್ರ ಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದು.
 • ಹೆಚ್ಚುವರಿ ಪುರವಣಿ ಉತ್ತರ ಪತ್ರಿಕೆಯನ್ನು ಕೊಠಡಿ ಮೇಲ್ವಿಚಾರಕರಿಂದ ಪಡೆದ ನಂತರ, ಮುಖ್ಯ ಉತ್ತರಪತ್ರಿಕೆಯ ಮುಖಪುಟದಲ್ಲಿ ಹೆಚ್ಚುವರಿ ಉತ್ತರಪತ್ರಿಕೆಯ ಕ್ರಮ ಸಂಖ್ಯೆಯನ್ನು ಬರೆಯುವುದು ಹಾಗೂ ಮುಖ್ಯ ಉತ್ತರಪತ್ರಿಕೆಯ ಪುಸ್ತಕದ ಕ್ರಮಸಂಖ್ಯೆಯನ್ನು ಹೆಚ್ಚುವರಿ ಪುರವಣಿ ಉತ್ತರಪುಸ್ತಿಕೆಯಲ್ಲಿ ನಿಗದಿತ ಸ್ಥಳದಲ್ಲಿ ಬರೆಯುವುದು.
 • ಉತ್ತರ ಪತ್ರಿಕೆಯ ಬಲಭಾಗದಲ್ಲಿರುವ ಗೆರೆಯ ಭಾಗದಲ್ಲಿ ಯಾವುದೇ ರೀತಿಯ ಬರಹಗಳನ್ನು ಬರೆಯಬಾರದು
 • ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಮೂತ್ರ/ ಶೌಚಾಲಯಕ್ಕೆ ಅಭ್ಯರ್ಥಿಯು ಹೊರಗೆ ಹೋಗಲು ಬಯಸಿದಲ್ಲಿ ಕೊಠಡಿ ಮೇಲ್ವಿಚಾರಕರಿಗೆ ತಿಳಿಸಿ ಅನುಮತಿ ಪಡೆದು ಹೊರಹೋಗುವುದು. ಹೊರಗೆ ಹೋಗುವಾಗ ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆ ಇತರೆ ಪರೀಕ್ಷಾ ವಸ್ತುಗಳನ್ನು ಸುರಕ್ಷತೆಯಿಂದ ಇಟ್ಟುಕೊಳ್ಳಲು ಕೊಠಡಿ ಮೇಲ್ವಿಚಾರಕರ ವಶದಲ್ಲಿ ನೀಡುವುದು.

ಹೆಚ್ಚಿನ ಮಾಹಿತಿಗಾಗಿ :http://kseeb.kar.nic.in/index.asp ವೆಬ್ಸೈಟ್ ವಿಳಾಸ ನೋಡಿ

ಇದನ್ನು ಗಮನಿಸಿ: 2016-17ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ವೇಳಾಪಟ್ಟಿ

English summary
Model answer script of sslc April 2017 exams are available in its official website

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia