ಪ್ರತಿ ವರ್ಷ ಅಕ್ಟೋಬರ್ 11 ರಂದು ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನು ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನು ಮೊದಲ ಬಾರಿಗೆ ಅಕ್ಟೋಬರ್ 11,2012 ರಂದು ವಿಶ್ವಸಂಸ್ಥೆಯು ಆಚರಿಸಿತು. ಈ ವರ್ಷ ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನದ 10ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದೇವೆ. ಹೆಣ್ಣುಮಕ್ಕಳು ಎದುರಿಸುತ್ತಿರುವ ಸವಾಲುಗಳತ್ತ ಗಮನಹರಿಸಲು, ಹೆಣ್ಣುಮಕ್ಕಳ ಸಬಲೀಕರಣ ಮತ್ತು ಅವರ ಹಕ್ಕುಗಳ ನೆರವೇರಿಕೆಯನ್ನು ಉತ್ತೇಜಿಸುವ ಅಗತ್ಯವನ್ನು ಈ ದಿನವು ನೆನಪಿಸುತ್ತದೆ.
ಪ್ರಪಂಚವು ಪ್ರಗತಿ ಸಾಧಿಸುತ್ತಿರುವ ನಡುವೆಯೂ ಹೆಣ್ಣುಮಕ್ಕಳು ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಸಾಂಸ್ಕೃತಿಕ ಅಡೆತಡೆಗಳು, ಶಿಕ್ಷಣದ ಕೊರತೆ, ಸುರಕ್ಷತೆಯ ಸಮಸ್ಯೆಗಳು ಮತ್ತು ಇನ್ನೂ ಅನೇಕ ಸವಾಲುಗಳು ಇಂದಿನ ಸನ್ನಿವೇಶದಲ್ಲಿ ಹೆಣ್ಣುಮಕ್ಕಳ ಹೋರಾಟಗಳಾಗಿವೆ. ಬನ್ನಿ ಈ ದಿನದ ಇತಿಹಾಸ, ಥೀಮ್, ಮಹತ್ವ ಮತ್ತು ಆಚರಣೆಗಳ ಕುರಿತಾದ ಮಾಹಿತಿಯನ್ನು ಇಲ್ಲಿ ತಿಳಿಯೋಣ.

ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನ 2022 ಇತಿಹಾಸ :
ಡಿಸೆಂಬರ್ 19, 2011 ರಂದು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ 66/170 ನಿರ್ಣಯವನ್ನು ಅಂಗೀಕರಿಸಿತು. ಹೆಣ್ಣು ಮಕ್ಕಳ ಹಕ್ಕುಗಳು ಮತ್ತು ಪ್ರಪಂಚದಾದ್ಯಂತ ಹೆಣ್ಣುಮಕ್ಕಳು ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸಲು ಅಕ್ಟೋಬರ್ 11 ಅನ್ನು ಹೆಣ್ಣು ಮಕ್ಕಳ ಅಂತಾರಾಷ್ಟ್ರೀಯ ದಿನವೆಂದು ಘೋಷಿಸಿತು.
ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನ 2022 ಥೀಮ್ :
ಪ್ರತಿ ವರ್ಷ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಒಂದು ಥೀಮ್‌ನೊಂದಿಗೆ ಆಚರಿಸಲಾಗುತ್ತದೆ. 2022 ರ ಅಂತರರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಥೀಮ್ "ನಮ್ಮ ಸಮಯ ಈಗ - ನಮ್ಮ ಹಕ್ಕುಗಳು, ನಮ್ಮ ಭವಿಷ್ಯ." ಹಿಂದಿನ ವರ್ಷಗಳ ಥೀಮ್‌ಗಳು 'ನನ್ನ ಧ್ವನಿ, ನಮ್ಮ ಸಮಾನ ಭವಿಷ್ಯ', ' ಬಾಲ್ಯ ವಿವಾಹವನ್ನು ಕೊನೆಗೊಳಿಸುವುದು', ಹದಿಹರೆಯದ ಹುಡುಗಿಯ ಶಕ್ತಿ: 2030 ರ ದೃಷ್ಟಿ' ಇತ್ಯಾದಿ.
ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನ 2022 ಮಹತ್ವ :
ಈ ದಿನವನ್ನು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ 2012 ರಲ್ಲಿ ಸ್ಥಾಪಿಸಿತು. ಹೆಣ್ಣುಮಕ್ಕಳು ಎದುರಿಸುತ್ತಿರುವ ಶಿಕ್ಷಣ, ಬಾಲ್ಯವಿವಾಹ, ಪ್ರೌಢಾವಸ್ಥೆ ಮತ್ತು ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಗಮನ ಹರಿಸುವ ಉದ್ದೇಶಗಳನ್ನು ಹೊಂದಿದೆ.
ಕಳೆದ ಹತ್ತು ವರ್ಷಗಳಲ್ಲಿ ಸರ್ಕಾರವು ನೀತಿ ನಿರೂಪಕರು ಮತ್ತು ಸಾರ್ವಜನಿಕರಲ್ಲಿ ಹೆಣ್ಣು ಮಗುವಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಗಣನೀಯವಾಗಿ ಗಮನಹರಿಸಲಾಗಿದೆ. ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನವು ಪ್ರಪಂಚದ ಪ್ರತಿಯೊಬ್ಬ ಹೆಣ್ಣು ಮಗುವಿಗೆ ಸಮಾನ ಮತ್ತು ನ್ಯಾಯಯುತ ಅವಕಾಶಗಳನ್ನು ಒದಗಿಸುವ ಅಗತ್ಯವನ್ನು ಸೂಚಿಸುತ್ತದೆ.
ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನ 2022 ಆಚರಣೆಗಳು :
ಹೆಣ್ಣು ಮಗುವಿನೊಂದಿಗೆ ನಿಲ್ಲಲು ಮತ್ತು ಬೆಂಬಲಿಸಲು ಕಳೆದ ಹತ್ತು ವರ್ಷಗಳಿಂದ ಅಂತರರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತಿದೆ. ಈ ದಿನವು ಪ್ರಪಂಚದಾದ್ಯಂತದ ಹೆಣ್ಣುಮಕ್ಕಳ ಪ್ರಾಮುಖ್ಯತೆ, ಶಕ್ತಿ ಮತ್ತು ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ.