ಬೆಂಗಳೂರಿನ ಸಂಜಯ್ ಗಾಂಧಿ ಟ್ರಾಮ ಮತ್ತು ಅಸ್ಥಿಚಿಕಿತ್ಸಾ ಸಂಸ್ಥೆಯಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿ (ಪಿ.ಜಿ) ಕೋರ್ಸ್‌ನ ಸೀಟುಗಳನ್ನು 10ಕ್ಕೆ ಹೆಚ್ಚಿಸಲು ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಅನುಮತಿ ನೀಡಿದೆ.
2012ರಲ್ಲಿ ಆರಂಭವಾದ ಮೂರು ವರ್ಷದ ಅಸ್ಥಿಚಿಕಿತ್ಸಾ ಕೋರ್ಸ್‌ಗೆ ವರ್ಷಕ್ಕೆ ಒಂದು ಸೀಟು ಮಾತ್ರ ಲಭ್ಯ ಇತ್ತು. ಆದರೆ, 2017-18ನೇ ಸಾಲಿನಲ್ಲಿ ಸೀಟುಗಳ ಸಂಖ್ಯೆ ಹೆಚ್ಚಳವಾಗಲಿದೆ.
ಅಸ್ಥಿಚಿಕಿತ್ಸಾ ಕೋರ್ಸ್ ಬೇಡಿಕೆ
10 ಪಿ.ಜಿ. ಸೀಟುಗಳಿಗೆ ಅನುಮತಿ ನೀಡಬೇಕಾದರೆ ಅಸ್ಥಿಚಿಕಿತ್ಸೆಗೆ ಸಂಬಂಧಿಸಿದಂತೆ 120 ಹಾಸಿಗೆಗಳನ್ನು ಹೊಂದಿರಬೇಕು. ಉತ್ತಮ ತಜ್ಞ ವೈದ್ಯರು ಮತ್ತು ಅದಕ್ಕೆ ಸಂಬಂಧಿಸಿದ ಉನ್ನತ ಗುಣಮಟ್ಟದ ವೈದ್ಯಕೀಯ ಉಪಕರಣಗಳು ಇರಬೇಕಾಗುತ್ತದೆ.
ಆಸ್ಪತ್ರೆಯಲ್ಲಿ ತಲಾ ಇಬ್ಬರು ಪ್ರಾಧ್ಯಾಪಕರು ಹಾಗೂ ಸಹ ಪ್ರಾಧ್ಯಾಪಕರು, ಆರು ಸಹಾಯಕ ಪ್ರಾಧ್ಯಾಪಕರು, ಒಂಬತ್ತು ಕಿರಿಯ ವೈದ್ಯರು ಇದ್ದಾರೆ. ಐದು ಶಸ್ತ್ರಚಿಕಿತ್ಸಾ ಕೊಠಡಿಗಳಿದ್ದು, ಅಸ್ಥಿಚಿಕಿತ್ಸೆಗೆ ಸಂಬಂಧಿಸಿದಂತೆ ನಿತ್ಯ 15 ಮುಖ್ಯ ಶಸ್ತ್ರಚಿಕಿತ್ಸೆಗಳು, 20 ಸಣ್ಣ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತಿದೆ. 150 ಹೊರರೋಗಿಗಳು ಬರುತ್ತಾರೆ. 12 ಒಳರೋಗಿಗಳು ದಾಖಲಾಗುತ್ತಾರೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿದ ಎಂಸಿಐ, ಪಿ.ಜಿ. ಸೀಟುಗಳ ಹೆಚ್ಚಳಕ್ಕೆ ಅನುಮತಿ ನೀಡಿದೆ ಎಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.
ಕೋರ್ಸ್ ವಿವರ
ಈ ಕೋರ್ಸ್ ಸೇರುವ ವಿದ್ಯಾರ್ಥಿಗಳಿಗೆ ದಿನಕ್ಕೆ ಒಂದು ಗಂಟೆ ಮಾತ್ರ ಬೋಧನಾ ತರಗತಿ ಇರುತ್ತದೆ. ಉಳಿದ ಸಮಯದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಕುರಿತು ಹೇಳಿಕೊಡಲಾಗುತ್ತದೆ. ಹೊರರೋಗಿಗಳ ವಿಭಾಗ, ಶಸ್ತ್ರಚಿಕಿತ್ಸಾ ವಿಭಾಗ ಹಾಗೂ ವಾರ್ಡ್‌ಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸಲಾಗುತ್ತದೆ.
ರೋಗಿಗಳಿಗೆ ಚಿಕಿತ್ಸೆ ನೀಡಲು ಅವರು ತಜ್ಞ ವೈದ್ಯರಿಗೆ ನೆರವಾಗುತ್ತಾರೆ. ಕೋರ್ಸ್ ಮುಗಿದ ಬಳಿಕ ಒಂದು ವರ್ಷ ಕಡ್ಡಾಯವಾಗಿ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಬೇಕಾಗುತ್ತದೆ.
ವಿದ್ಯಾರ್ಥಿ ವೇತನ
ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ತಿಂಗಳಿಗೆ ₹25,000, ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ₹30,000 ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ₹35,000 ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ
ಅಸ್ಥಿಚಿಕಿತ್ಸೆ ವಿಷಯದಲ್ಲಿ ಪಿ.ಜಿ. ಸೀಟು ಪಡೆಯಬೇಕಾದರೆ ನೀಟ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಬೇಕು. 10 ಸೀಟುಗಳ ಪೈಕಿ ಐದು ಸೀಟುಗಳು ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲು. ಇನ್ನುಳಿದ ಸೀಟುಗಳನ್ನು ಅಖಿಲ ಭಾರತ ಕೋಟಾದಡಿ (ಜಮ್ಮು ಮತ್ತು ಕಾಶ್ಮೀರ, ಆಂಧ್ರಪ್ರದೇಶ ಹಾಗೂ ತೆಲಂಗಾಣ ಹೊರತುಪಡಿಸಿ) ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.
ಜೂನ್‌ನಲ್ಲಿ ಕೋರ್ಸ್ ಆರಂಭವಾಗಲಿದೆ. ಅಸ್ಥಿಚಿಕಿತ್ಸೆಗೆ ಸಂಬಂಧಿಸಿದಂತೆ ಒಂದು ವಿಷಯವನ್ನು ತೆಗೆದುಕೊಂಡು ಅದರ ಮೇಲೆ ಸಂಶೋಧನೆ ಮಾಡಬೇಕು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸಂಶೋಧನಾ ಪ್ರಬಂಧ ಸಲ್ಲಿಸಬೇಕು.
ದುಬಾರಿ ಶುಲ್ಕಕ್ಕೆ 'ನೀಟ್' ಪರಿಹಾರ
ಏಕರೂಪದ ಪ್ರವೇಶ ಪರೀಕ್ಷೆ ನೀಟ್ ಮೂಲಕ ಬಡ ಮತ್ತು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಕೂಡ ಅಸ್ಥಿಚಿಕಿತ್ಸಾ ಕೋರ್ಸ್ ಪಡೆಯಬಹುದಾಗಿದೆ. 'ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಅಸ್ಥಿಚಿಕಿತ್ಸೆಗೆ ಸಂಬಂಧಿಸಿದ ಒಂದು ಎಂ.ಎಸ್. ಸೀಟಿಗೆ ₹2.25 ಕೋಟಿ ನೀಡಬೇಕು. ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳು ಎಂ.ಎಸ್. ಸೀಟು ಪಡೆಯುವುದು ಕನಸಿನ ಮಾತು. ಅಂತಹ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯುವ ಮೂಲಕ ಸರ್ಕಾರಿ ಸೀಟು ಪಡೆಯಬಹುದು' ಎಂದು ಸಂಸ್ಥೆಯ ನಿರ್ದೇಶಕ ಡಾ.ಎಚ್.ಎಸ್. ಚಂದ್ರಶೇಖರ್ ತಿಳಿಸಿದ್ದಾರೆ.
ಹೆಚ್ಚು ಸೀಟ್ ದೊರೆಯಲು ಕಾರಣ
ಈ ವರ್ಷ ಹೆಚ್ಚುವರಿಯಾಗಿ 5,000 ಪಿ.ಜಿ. ಸೀಟುಗಳನ್ನು ಸೃಷ್ಟಿಸುವುದಾಗಿ ಕೇಂದ್ರದ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಈ ಅವಕಾಶವನ್ನು ಬಳಸಿಕೊಳ್ಳುವ ಉದ್ದೇಶದಿಂದ ಸಂಸ್ಥೆಯಲ್ಲಿ ಲಭ್ಯವಿರುವ ಮೂಲಸೌಕರ್ಯ, ತಜ್ಞ ವೈದ್ಯರು ಹಾಗೂ ಅಸ್ಥಿಚಿಕಿತ್ಸೆಗೆ ಸಂಬಂಧಿಸಿದ ವಿವರಗಳನ್ನು ಎಂಸಿಐಗೆ ಸಲ್ಲಿಸಲಾಗಿತ್ತು. ಸಂಜಯ್ ಗಾಂಧಿ ಇನ್ಸ್ಟಿಟ್ಯೂಟ್ ನ ಸೌಕರ್ಯಗಳನ್ನು ಗಣನೆಗೆ ತೆಗೆದುಕೊಂಡು ಸೀಟ್ ಹೆಚ್ಚಳಕ್ಕೆ ಅನುಮತಿ ನೀಡಲಾಗಿದೆ.