125 ವರ್ಷ ಹಿಂದಿನ ವಿವೇಕಾನಂದರ ಮಾತನ್ನು ನೆನಪಿಸಲಿದ್ದಾರೆ ಮೋದಿ

ಇತಿಹಾಸದ ಅಂದಿನ ದಿನವನ್ನು ಮತ್ತೆ ನೆನಪು ಮಾಡಲು ಮೋದಿ ಸೆ.11 ರಂದು 'ಯುವ ಭಾರತ, ನವ ಭಾರತ - ಪುನರುಜ್ಜೀವಿತ ರಾಷ್ಟ್ರ: ಸಂಕಲ್ಪದಿಂದ ಸಿದ್ಧಿವರೆಗೆ' ಎಂಬ ವಿಷಯವಾಗಿ ಪ್ರಧಾನಿ ಮಾತನಾಡಲಿದ್ದಾರೆ.

ಸೆಪ್ಟೆಂಬರ್ 11 ರಂದು ನರೇಂದ್ರ ಮೋದಿಯವರು ಭಾರತದ ಯುವಜನತೆಯನ್ನು ಕುರಿತು ಭಾಷಣ ಮಾಡಲಿದ್ದಾರೆ. ಅಷ್ಟೇ ಅಲ್ಲದೇ ಅವರ ಭಾಷಣವನ್ನು ಕಾಲೇಜುಗಳಲ್ಲಿ ಪ್ರಸಾರ ಮಾಡುವಂತೆ ಯುಜಿಸಿ ಎಲ್ಲಾ ಕಾಲೇಜುಗಳಿಗೆ ಸೂಚನೆ ನೀಡಿದೆ.

1893 ರ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣಕ್ಕೆ ಸೆ.11 ಕ್ಕೆ 125 ವರ್ಷ ತುಂಬಲಿದ್ದು, ಮೋದಿಯವರ ಭಾಷಣಕ್ಕೆ ಪ್ರಮುಖ ಕಾರಣ. ಇಂದಿನ ಯುವ ಸಮೂಹಕ್ಕೆ ಇತಿಹಾಸದ ಅಂದಿನ ದಿನವನ್ನು ಮತ್ತೆ ನೆನಪು ಮಾಡಲು ಮೋದಿ ಸೆ.11 ರಂದು 'ಯುವ ಭಾರತ, ನವ ಭಾರತ - ಪುನರುಜ್ಜೀವಿತ ರಾಷ್ಟ್ರ: ಸಂಕಲ್ಪದಿಂದ ಸಿದ್ಧಿವರೆಗೆ' ಎಂಬ ವಿಷಯವಾಗಿ ಪ್ರಧಾನಿ ಮಾತನಾಡಲಿದ್ದಾರೆ.

ಸ್ವಾಮಿ ವಿವೇಕಾನಂದರ ಭಾಷಣ

ಸೆಪ್ಟೆಂಬರ್ 11, 1893 ಇಡೀ ವಿಶ್ವವೇ ಭಾರತದ ಕಡೆ ಮುಖ ಮಾಡಿದ ದಿನ. ಅಮೆರಿಕದ ಷಿಕಾಗೊದಲ್ಲಿ ನಿಂತು ಸ್ವಾಮಿ ವಿವೇಕಾನಂದರು ಮಾಡಿದ ಭಾಷಣ ಭಾರತದ ಸ್ವರೂಪವನ್ನೇ ಬದಲಿಸಿತು. ಸ್ವಾಮೀಜಿಯವರ ಮಾತಿಗೆ ಅಮೆರಿಕದ ಜನತೆ ಮೂಕ ವಿಸ್ಮಿತರಾದರು.

ಭಾರತವನ್ನು ವಿಶ್ವಗುರುವಿನ ರೀತಿ ಚಿತ್ರಿಸಿದ ವಿವೇಕಾನಂದರ ಭಾಷಣದ ಪ್ರಮುಖಾಂಶಗಳು

ಸಮ್ಮೇಳನದ ಮೊದಲ ದಿನ (11.09.1893)

ಅಮೆರಿಕದ ಸಹೋದರಿಯರೆ ಮತ್ತು ಸಹೋದರರೆ,

ಪ್ರಪಂಚದ ಅತ್ಯಂತ ಪ್ರಾಚೀನವಾದ ಸಂನ್ಯಾಸಿಗಳ ಸಂಘದ ಪರವಾಗಿ, ವಿವಿಧ ಧರ್ಮಗಳ ಮಾತೆಯ ಪರವಾಗಿ ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಹಿಂದು ಜನಾಂಗಕ್ಕೆ ಸೇರಿದ ಎಲ್ಲ ವರ್ಗಗಳ, ಎಲ್ಲ ಪಂಥಗಳ ಕೋಟ್ಯನುಕೋಟಿ ಜನರ ಪರವಾಗಿ ನಿಮಗೆ ಕೃತಜ್ಞತೆಗಳು. ಧಾರ್ವಿುಕ ಸಹನೆಯನ್ನು, ಎಲ್ಲ ಧರ್ಮಗಳೂ ಸ್ವೀಕಾರಯೋಗ್ಯ ಎಂಬುದನ್ನು ಜಗತ್ತಿಗೆ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು. ಪರಧರ್ಮ ಸಹಿಷ್ಣುತೆಯಲ್ಲಿ ನಮಗೆ ನಂಬಿಕೆ ಉಂಟು. ಅಷ್ಟೇ ಅಲ್ಲ, ಎಲ್ಲ ಧರ್ಮಗಳೂ ಸತ್ಯ ಎಂಬುದನ್ನು ನಾವು ಒಪ್ಪುತ್ತೇವೆ. ಜಗತ್ತಿನಲ್ಲಿ ಎಲ್ಲ ರಾಷ್ಟ್ರಗಳಲ್ಲಿ ಎಲ್ಲ ಧರ್ಮಗಳಲ್ಲಿ ಯಾರು ಯಾರು ಹಿಂಸೆಗೆ ಒಳಗಾದರೋ ಅವರಿಗೆಲ್ಲ ಆಶ್ರಯವನ್ನು ನೀಡಿದ ದೇಶಕ್ಕೆ ಸೇರಿದವನು. ಸೋದರರೆ, ಚಿಕ್ಕಂದಿನಿಂದ ನಾನು ಪಠಿಸುತ್ತಿದ್ದ, ಇಂದಿಗೂ ಕೋಟ್ಯಂತರ ಜನರು ಪಠಿಸುತ್ತಿರುವ ಶ್ಲೋಕವೊಂದರ ಕೆಲವು ಪಂಕ್ತಿಗಳನ್ನು ನಿಮ್ಮ ಮುಂದೆ ಹೇಳುತ್ತೇನೆ-'ಬೇರೆ ಬೇರೆ ಕಡೆಗಳಲ್ಲಿ ಹುಟ್ಟಿದ ನದಿಗಳು ಕೊನೆಗೆ ಸಾಗರದಲ್ಲಿ ಸಂಗಮಗೊಳ್ಳುವಂತೆ, ಹೇ ಭಗವಾನ್, ಮಾನವರು ತಮ್ಮ ತಮ್ಮ ಸಂಸ್ಕಾರಗಳಿಗೆ ತಕ್ಕಂತೆ ನೇರವಾಗಿಯೋ ವಕ್ರವಾಗಿಯೋ ಇರುವ ಪಥಗಳನ್ನು ಅನುಸರಿಸುತ್ತಾರೆ. ಅವೆಲ್ಲವೂ ನಿನ್ನೆಡೆಗೆ ಕರೆದೊಯ್ಯುತ್ತವೆ'. ಹಾಗೆಯೇ, 'ಯಾರೇ ಆಗಲಿ, ಯಾವುದೇ ರೂಪದಲ್ಲೇ ಆಗಲಿ ನನ್ನ ಬಳಿ ಬಂದರೆ ನಾನು ಅವರನ್ನು ಸ್ವೀಕರಿಸುತ್ತೇನೆ. ಅಂತಿಮವಾಗಿ ನನ್ನ ಬಳಿಗೆ ಬರುವ ವಿವಿಧ ಪಥಗಳಲ್ಲಿ ಸಾಗಿ ಬಂದು ನನ್ನನ್ನೇ ಸೇರಲು ಎಲ್ಲ ಜನರೂ ಪ್ರಯತ್ನಿಸುತ್ತಿದ್ದಾರೆ' ಎಂಬ ಗೀತೆಯ ಅದ್ಭುತ ತತ್ತ್ವದ ಸತ್ಯವನ್ನು ಜಗತ್ತಿಗೆ ಸಾರುವುದಕ್ಕೆ ಈ ಸಭೆಯೊಂದೇ ಸಾಕು. ಸಂಕುಚಿತ ಪಂಥಭಾವನೆ, ಸ್ವಮತಾಭಿಮಾನ, ಅದರ ಭೀಕರ ಸಂತಾನವಾದ ಮತಾಂಧತೆ ಇವು ಈ ಸುಂದರ ಪೃಥ್ವಿಯನ್ನು ಬಹುಕಾಲದಿಂದ ಬಾಧಿಸುತ್ತಿವೆ. ನಾಗರಿಕತೆಯನ್ನು ನಾಶಗೊಳಿಸಿವೆ. ಇಂದು ಬೆಳಗ್ಗೆ ಈ ಸಭೆಯ ಶುಭಾರಂಭವನ್ನು ಸೂಚಿಸಲು ಮೊಳಗಿದ ಗಂಟಾನಾದ ಎಲ್ಲ ಮತಾಂಧತೆಯ, ಖಡ್ಗ ಇಲ್ಲವೆ ಲೇಖನಿಯಿಂದ ಸಾಧಿಸಿದ ಮತೀಯ ಹಿಂಸೆಗಳ, ಒಂದೇ ಗುರಿಯೆಡೆಗೆ ಸಾಗುತ್ತಿದ್ದರೂ ಪಥಿಕರಲ್ಲಿ ತಲೆದೋರುತ್ತಿರುವ ಅನುದಾರವಾದ ಎಲ್ಲ ಮನಸ್ತಾಪಗಳ ಅಂತ್ಯಕ್ರಿಯೆಯನ್ನು ಸೂಚಿಸುವ ಘಂಟಾನಾದವೂ ಆಗಲಿ ಎಂಬುದೇ ನನ್ನ ಆಶಯ.

ಪ್ರಕೃತಿ ಸಹಜ ನಿಯಮ ಅನ್ವಯ ಸಮ್ಮೇಳನದ ಕೊನೆಯ ದಿನ (27.09.1893)

ಬೀಜವನ್ನು ನೆಲದಲ್ಲಿ ಬಿತ್ತಿದ್ದಾಗಿದೆ. ಮಣ್ಣು, ಗಾಳಿ, ನೀರು ಎಲ್ಲ ಅಲ್ಲಿವೆ. ಬೀಜವು ನೆಲ, ಗಾಳಿ, ನೀರು ಆಗುವುದೇನು? ಇಲ್ಲ, ಅದು ಗಿಡವಾಗುತ್ತದೆ. ತನ್ನದೇ ಬೆಳವಣಿಗೆಯ ನಿಯಮಕ್ಕೆ ಅನುಗುಣವಾಗಿ ಗಾಳಿ, ನೆಲ, ನೀರುಗಳನ್ನು ತನ್ನ ಸ್ವಭಾವವಾಗಿ ಪರಿವರ್ತಿಸಿಕೊಂಡು ಬೆಳೆಯುತ್ತದೆ. ಧರ್ಮದ ವಿಷಯಕ್ಕೂ ಇದೇ ಅನ್ವಯವಾಗುತ್ತದೆ. ಕ್ರೖೆಸ್ತ, ಹಿಂದು ಅಥವಾ ಬೌದ್ಧನಾಗಬೇಕಾಗಿಲ್ಲ. ಹಿಂದುವಾಗಲಿ, ಬೌದ್ಧನಾಗಲಿ ಕ್ರೖೆಸ್ತನಾಗಬೇಕಾಗಿಲ್ಲ. ಪ್ರತಿಯೊಬ್ಬನೂ ಇತರರ ಮನೋಭಾವವನ್ನು ಗ್ರಹಿಸಬೇಕು. ಆದರೆ ತನ್ನ ವೈಯಕ್ತಿಕತೆಯನ್ನು ಉಳಿಸಿಕೊಂಡು ತನ್ನದೇ ಬೆಳವಣಿಗೆಯ ನಿಯಮಗಳಿಗೆ ಅನುಗುಣವಾಗಿ ಬೆಳೆಯಬೇಕು. ಸರ್ವ ಧರ್ಮ ಸಮ್ಮೇಳನ ಜಗತ್ತಿಗೆ ಏನನ್ನಾದರೂ ಪ್ರಕಟಪಡಿಸಿದ್ದರೆ ಅದು ಇದು - ಪಾವಿತ್ರ್ಯ ಪರಿಶುದ್ಧತೆ, ದಾನ, ದಯೆಗಳು ಯಾವುದೇ ಒಂದು ಧರ್ಮದ ಸ್ವಂತ ಆಸ್ತಿ ಅಲ್ಲ; ಪ್ರತಿಯೊಂದು ಧರ್ಮವೂ ಅತ್ಯಂತ ಉದಾರಚರಿತರಾದ ಸ್ತ್ರೀಪುರುಷರನ್ನು ರೂಪಿಸಿದೆ. ಇಷ್ಟಕ್ಕೆಲ್ಲ ಸಾಕ್ಷ್ಯಾಧಾರಗಳು ಇರುವಾಗ ಯಾರಾದರೂ ತನ್ನ ಧರ್ಮವೊಂದೇ ಉಳಿಯತಕ್ಕದ್ದು, ಇತರ ಧರ್ಮಗಳು ನಾಶ ಹೊಂದತಕ್ಕವು ಎಂಬ ಭ್ರಾಂತಿಯಲ್ಲಿದ್ದರೆ ಅವನ ವಿಷಯದಲ್ಲಿ ನನಗೆ ಅಪಾರ ಮರುಕವಿದೆ.

ಮಾಹಿತಿ: ಮೈಸೂರು ಶ್ರೀರಾಮಕೃಷ್ಣಾಶ್ರಮ ಹೊರತಂದ 'ಷಿಕಾಗೊ ಉಪನ್ಯಾಸಗಳು' ಕೈಪಿಡಿ

For Quick Alerts
ALLOW NOTIFICATIONS  
For Daily Alerts

English summary
September 11 2017 would mark the 125th Anniversary of Swami Vivekananda's historic speech at Chicago. The speech was delivered on September 11, 1983.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X