ವಿದ್ಯಾರ್ಥಿನಿಯರ ಹಾಜರಾತಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹ ಧನ ಯೋಜನೆಗೆ ಬ್ರೇಕ್ ಬಿದ್ದಿದೆ. 2014 ರಲ್ಲಿ ಆರಂಭವಾದ ಈ ಯೋಜನೆಯು ಹಣವಿಲ್ಲದೆ ಸ್ಥಗಿತಗೊಂಡಿದೆ.
ಮಧ್ಯಾಹ್ನದ ಬಿಸಿಯೂಟಕ್ಕೆ ಆಧಾರ್ ಕಾರ್ಡ್ ಬೇಕಿಲ್ಲ
ಹೆಣ್ಣು ಮಕ್ಕಳನ್ನು ಶಿಕ್ಷಣದತ್ತ ಆಕರ್ಷಿಸುವ ಉದ್ದೇಶ ದಿಂದ ಸರಕಾರಿ ಶಾಲೆಗೆ ಒಂದನೇ ತರಗತಿಗೆ ಸೇರುವ ಹೆಣ್ಣು ಮಗುವಿನ ಹಾಜರಾತಿಗೆ ಪ್ರತಿದಿನ 2 ರೂ. ನೀಡುವ ಯೋಜನೆಯನ್ನು ರಾಜ್ಯ ಸರಕಾರ 2014ರಿಂದ ಆರಂಭಿಸಿತ್ತು.
ಸರ್ಕಾರಿ ಶಾಲೆಗಳಿಗೆ ದಾಖಲಾಗುವ ಒಂದನೇ ತರಗತಿ ವಿದ್ಯಾರ್ಥಿನಿಯರ ಪ್ರತಿ ಹಾಜರಾತಿಗೆ 2 ರೂ ಪಾವತಿಸಲಾಗುತ್ತಿತ್ತು.
ಯೋಜನೆಯ ಹಣವನ್ನು ಆಯಾ ಶಾಲಾ ಮುಖ್ಯ ಶಿಕ್ಷಕರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿತ್ತು. ಮುಖ್ಯ ಶಿಕ್ಷಕರು ಅದನ್ನು ವಿದ್ಯಾರ್ಥಿಗಳಿಗೆ ಅಥವಾ ಅವರ ಪಾಲಕರಿಗೆ ನೀಡುತ್ತಿದ್ದರು.
ಮಗುವಿನ ಹೆಸರಿನಲ್ಲಿ ಖಾತೆ ತೆರೆದು, ಹಣ ನೇರವಾಗಿ ಆ ಖಾತೆಗೆ ಹಾಕುವುದು ಯೋಜನೆಯ ನಿಯಮವಾಗಿತ್ತು. ಆದರೆ ಮಗುವಿನ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯುವ ಪ್ರಕ್ರಿಯೆ ಯಶಸ್ವಿಯಾಗದೆ, ಶಾಲೆಗೆ ಮಗು ಎಷ್ಟು ದಿನ ಹಾಜರಾಗುತ್ತದೋ ಅಷ್ಟು ದಿನಕ್ಕೆ ಹೊಂದಾಣಿಕೆ ಮಾಡಿ ಶೈಕ್ಷಣಿಕ ವರ್ಷಾಂತ್ಯದಲ್ಲಿ ಆ ಮಗುವಿನ ಪೋಷಕರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತಿತ್ತು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ 2013ರ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಈ ಯೋಜನೆ ಘೋಷಿಸಿದ್ದರು. ಬಳಿಕ ಶಿಕ್ಷಣ ಇಲಾಖೆ ಆದೇಶ ಮಾಡಿತ್ತು.
2014-15 ಮತ್ತು 2015-16ನೇ ಸಾಲಿನಲ್ಲಿ ಹಣ ಬಿಡುಗಡೆಯಾಗಿತ್ತು ನಂತರ ಬಳಿಕ ಅನುದಾನ ನಿಲ್ಲಿಸಲಾಗಿದೆ. ಅಲ್ಲದೆ ಈ ಹಿಂದೆ ಬಿಡುಗಡೆಯಾದ ಅನುದಾನ ಕೆಲವು ಕಡೆ ಬಳಕೆಯಾಗದೆ ಹಣವನ್ನು ಸರ್ಕಾರದ ಬೊಕ್ಕಸಕ್ಕೆ ಹಿಂದಿರುಗಿಸಲಾಗಿದೆ. ಇನ್ನು ಕೆಲವು ಕಡೆ ಸಮರ್ಪಕವಾಗಿ ಬಳಕೆಯಾಗದೆ ಇರುವ ಬಗ್ಗೆ ದೂರುಗಳು ಕೂಡ ಬಂದಿವೆ.
ಕಳೆದ ಎರಡು ವರ್ಷದಿಂದ ಈ ಕಾರ್ಯಕ್ರಮಕ್ಕೆ ಅನುದಾನ ನೀಡಿಲ್ಲ. ಹೀಗಾಗಿ ಯೋಜನೆ ಸದ್ಯಕ್ಕೆ ಸ್ಥಗಿತಗೊಂಡಿದೆ, ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ (ಪ್ರಾಥಮಿಕ) ಬಿ.ಕೆ. ಬಸವರಾಜು ತಿಳಿಸಿದ್ದಾರೆ.