ಕೆಪಿಎಸ್‌ಸಿ ಆಯ್ಕೆ ಪಟ್ಟಿ ಪ್ರಕಟ: ಐಶ್ವರ್ಯಾ ಮೊದಲ ಸ್ಥಾನ

Posted By:

2014ನೇ ಸಾಲಿನ 464 ಗೆಜೆಟೆಡ್‌ ಪ್ರೊಬೇಷನರಿ (ಗ್ರೂಪ್‌ ಎ ಮತ್ತು ಬಿ) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಪ್ರಕಟಿಸಿದೆ. ಬೆಂಗಳೂರಿನಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕಿನಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಮೈಸೂರಿನ ಐಶ್ವರ್ಯಾ ಪ್ರಥಮ ರ್ಯಾಂಕ್ ಗಳಸಿದ್ದಾರೆ.

ಎರಡು ವರ್ಷಗಳ ನಿರೀಕ್ಷೆಗೆ ಉತ್ತರ

ಕೆಪಿಎಸ್‌ಸಿ ಅಧ್ಯಕ್ಷರ ನೇಮಕ, ವ್ಯಕ್ತಿತ್ವ ಪರೀಕ್ಷೆಗೆ ಅಭ್ಯರ್ಥಿಗಳ ಅನುಪಾತ ಗೊಂದಲ ಮತ್ತು ವ್ಯಕ್ತಿತ್ವ ಪರೀಕ್ಷೆಯ ನಿಯಮ ತಿದ್ದುಪಡಿ ಕಾರಣಕ್ಕೆ ಆಯ್ಕೆ ಪ್ರಕ್ರಿಯೆ ವರ್ಷದಿಂದ ನನೆಗುದಿಗೆ ಬಿದ್ದಿತ್ತು.

ವಿವಿಧ ಇಲಾಖೆಗಳಲ್ಲಿ 464 ಹುದ್ದೆಗಳಿಗಾಗಿ 2014ರಲ್ಲಿ ಆಧಿಸೂಚನೆ ಹೊರಡಿಸಿ 2015 ರಲ್ಲಿ ಪರೀಕ್ಷೆ ನಡೆಸಲಾಗಿತ್ತು. ಏಪ್ರಿಲ್ ತಿಂಗಳಲ್ಲಿ ನಡೆದಿದ್ದ ಪ್ರಾಥಮಿಕ ಪರೀಕ್ಷೆಯಲ್ಲಿ  7,884 ಅಭ್ಯರ್ಥಿಗಳು ಮುಖ್ಯಪರೀಕ್ಷೆಗೆ ಅರ್ಹತೆ ಪಡೆದಿದ್ದರು. ಸೆಪ್ಟೆಂಬರ್ ನಲ್ಲಿ ಮುಖ್ಯ ಪರೀಕ್ಷೆ ನಡೆದು 1:3 ಅನುಪಾತದಲ್ಲಿ 1,389 ಅಭ್ಯರ್ಥಿಗಳು ತೇರ್ಗಡೆ ಹೊಂದಿ ವ್ಯಕ್ತಿತ್ವ ಪರೀಕ್ಷೆಗೆ (ಸಂದರ್ಶನ) ಆಯ್ಕೆಯಾಗಿದ್ದರು. ಫೆ. 20 ರಿಂದ ಏ. 12ರವರೆಗೆ ವ್ಯಕ್ತಿತ್ವ ಪರೀಕ್ಷೆ ನಡೆಸಿದ ಕೆಪಿಎಸ್‌ಸಿ, ಎಂಟೇ ದಿನಗಳ ಅವಧಿಯಲ್ಲಿ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.

ಕೆಪಿಎಸ್‌ಸಿ ಆಯ್ಕೆ ಪಟ್ಟಿ ಪ್ರಕಟ

ಗ್ರೂಪ್ 'ಎ' ಹುದ್ದೆಗಳು

56 ಅಸಿಸ್ಟೆಂಟ್ ಕಮಿಷನರ್ (ಎ.ಸಿ), 32 ಡಿವೈಎಸ್ಪಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ ಇಲಾಖೆಯ 22 ಕಾರ್ಯನಿರ್ವಾಹಕ ಅಧಿಕಾರಿ, 5 ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹಾಗೂ 44 ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. 

ಗ್ರೂಪ್ 'ಬಿ' ಹುದ್ದೆಗಳು

79 ತಹಶೀಲ್ದಾರ್ (ಗ್ರೇಡ್-2), 45 ವಾಣಿಜ್ಯ ತೆರಿಗೆ ಅಧಿಕಾರಿ ಹುದ್ದೆಗಳು, 42 ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿಗಳು, 25 ಸಹಾಯಕ ಖಜಾನೆ ಅಧಿಕಾರಿಗಳು ಹಾಗೂ 7 ಬಂಧೀಖಾನೆ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. 90 ಹುದ್ದೆಗಳನ್ನು ಹೈದರಾಬಾದ್-ಕರ್ನಾಟಕ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.

ಆಯ್ಕೆ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ kpsc.kar.nic ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳಿದ್ದರೆ 30 ದಿನಗಳ ಒಳಗೆ ಕೆಪಿಎಸ್‌ಸಿ ಕಾರ್ಯದರ್ಶಿಗೆ ಸಲ್ಲಿಸಬಹುದು ಎಂದೂ ತಿಳಿಸಲಾಗಿದೆ.

ಆರ್.ಐಶ್ವರ್ಯ ಪರಿಚಯ

ಈ ಬಾರಿಯ ಕೆಪಿಎಸ್ಸಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಗಳಿಸಿರುವ ಐಶ್ವರ್ಯಾ ಮೂಲತಃ ಮೈಸೂರಿನವರು. ಮೈಸೂರಿನ ಟೆರೇಷಿಯನ್‌ ಹಾಗೂ ಮರಿಮಲ್ಲಪ್ಪ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಪಡೆದಿದ್ದ ಐಶ್ವರ್ಯಾ ಎಸ್ಸೆಸ್ಸೆಲ್ಸಿಯಲ್ಲಿ 4ನೇ ರ‍್ಯಾಂಕ್‌, ಪಿಯುನಲ್ಲಿ 6ನೇ ರ‍್ಯಾಂಕ್‌ ಹಾಗೂ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಎಂಜಿನಿಯರಿಂಗ್‌ನಲ್ಲಿ (ಎನ್‌ಐಇ) ಅಗ್ರಸ್ಥಾನದೊಂದಿಗೆ ಕಂಪ್ಯೂಟರ್‌ ವಿಜ್ಞಾನದಲ್ಲಿ ಎಂಜಿನಿಯರಿಂಗ್‌ ಪದವಿ ಮುಗಿಸಿದ್ದಾರೆ.

ಸಿದ್ಧಾರ್ಥನಗರ ನಿವಾಸಿ ರಾಮಾರಾಧ್ಯ ಮತ್ತು ವಾಣಿ ದಂಪತಿ ಪುತ್ರಿ ಐಶ್ವರ್ಯಾ, ನಾಲ್ಕು ವರ್ಷದ ಹಿಂದೆ ಮಹೇಶ್‌ ಆರಾಧ್ಯ ಅವರನ್ನು ವಿವಾಹವಾಗಿದ್ದ ಐಶ್ವರ್ಯಾ ಬೆಂಗಳೂರಿನಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕಿನಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬ್ಯಾಂಕ್ ಉದ್ಯೋಗ ಮಾಡುತ್ತಲೇ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ಐಶ್ವರ್ಯಾ ಬಾಣಂತನದ ನಡುವೆಯೇ ಸಂದರ್ಶನ ಎದುರಿಸಿದ್ದಾರೆ.

ಕೈ ಹಿಡಿದ ಕನ್ನಡ ಸಾಹಿತ್ಯ

ಐಶ್ವರ್ಯಾರ ಈ ಸಾಧನೆಗೆ ಕನ್ನಡ ಸಾಹಿತ್ಯ ವಿಷಯವೇ ಕಾರಣ. ದಿನಪತ್ರಿಕೆ ಮತ್ತು ಸಾಹಿತ್ಯ ಮೇಲಿನ ಆಸಕ್ತಿ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಪರೀಕ್ಷೆಯ ಮುಖ್ಯ ವಿಷಯವಾಗಿ ಕನ್ನಡ ಸಾಹಿತ್ಯವನ್ನೇ ಆಯ್ಕೆ ಮಾಡಿಕೊಂಡ ಐಶ್ವರ್ಯಾ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವು ಹೊಂದಿದ್ದಾರೆ.

'ನನ್ನ ಈ ಸಾಧನೆಯ ಹಿಂದೆ ಪೋಷಕರು, ಪತಿ, ಅತ್ತೆ, ಮಾವನ ಶ್ರಮವಿದೆ. ಹೀಗಾಗಿ, ನನ್ನ ಯಶಸ್ಸು ಕುಟುಂಬಕ್ಕೆ ಸಮರ್ಪಣೆ' ಎನ್ನುವ ಐಶ್ವರ್ಯಾ ಮುಂದೆ ಯುಪಿಎಸ್ಸಿ ಪರೀಕ್ಷೆಯನ್ನು ಪೂರೈಸುವ ಗುರಿ ಹೊಂದಿದ್ದಾರೆ.

ಹಲವು ಅವಕಾಶಗಳನ್ನು ತಿರಸ್ಕರಿಸಿದ್ದ ಐಶ್ವರ್ಯಾ

ಐಶ್ವರ್ಯಾರವರಿಗೆ ಶಿಕ್ಷಣ ಮುಗಿಸುತ್ತಲೆ ಹಲವು ಉದ್ಯೋಗಾವಕಾಶಗಳು ಹುಡುಕಿ ಬಂದಿದ್ದವು. ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ (ಎಂಎನ್‌ಸಿ) ಒಳ್ಳೆಯ ಉದ್ಯೋಗ ಲಭಿಸಿತ್ತು. ಅಮೆರಿಕಕ್ಕೆ ಹೋಗುವ ಅವಕಾಶವಿತ್ತು. ಆದರೆ, ನಾಗರಿಕ ಸೇವೆಯಲ್ಲಿ ಕಾರ್ಯನಿರ್ವಹಿಸಬೇಕೆಂಬ ಆಸೆಯಿಂದ ಅದನ್ನು ತಿರಸ್ಕರಿಸಿ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

English summary
KPSC Gazetted Probationers-2014 Select list published, Aishwarya from Mysore has got first rank

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia