ಎಲಿವೇಟ್ 100 ಸಮ್ಮೇಳನ: ನವೋದ್ಯಮಕ್ಕೆ ಕೋಟಿ ಕೋಟಿ ಹಣ

Posted By:

ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಏರ್ಪಡಿಸಿದ್ದ ಎಲಿವೇಟ್‌ ಸಮ್ಮೇಳನದಲ್ಲಿ ನವೋದ್ಯಮಗಳ ಪ್ರೋತ್ಸಾಹಕ್ಕೆ ಸರ್ಕಾರ 111 ಸಂಸ್ಥೆಗಳಿಗೆ 35 ಕೋಟಿ ರೂ. ಅನುದಾನ ನೀಡಲು ನಿರ್ಧರಿಸಿದೆ.

ನವೋದ್ಯಮಗಳ ಪ್ರೋತ್ಸಾಹಕ್ಕೆ ಐಟಿ-ಬಿಟಿ ಇಲಾಖೆ ಎಲಿವೇಟ್ 100 ಕಾರ್ಯಕ್ರಮಕ್ಕೆ ಕೆಲ ತಿಂಗಳ ಹಿಂದೆ ಚಾಲನೆ ನೀಡಿತ್ತು. ಇದಕ್ಕಾಗಿ ರಾಜ್ಯಾದ್ಯಂತ 1,700ಕ್ಕೂ ಅಧಿಕ ನವೋದ್ಯಮಗಳು ಆಗಮಿಸಿದ್ದವು. ಕೊನೇ ಹಂತಕ್ಕೆ 300 ನವೋದ್ಯಮಗಳು ಆಯ್ಕೆಯಾಗಿದ್ದು, ಬುಧವಾರ ನಡೆದ ಅಂತಿಮ ಸುತ್ತಿನಲ್ಲಿ 111 ಅತ್ಯುತ್ತಮ ನವೋದ್ಯಮಗಳನ್ನು ಆಯ್ಕೆ ಮಾಡಲಾಗಿದೆ.

ಎಲಿವೇಟ್ 100 ಸಮ್ಮೇಳನ

ಕೃಷಿ, ವೈದ್ಯ, ಆ್ಯನಿಮೇಶನ್‌, ವಿಮಾನಯಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೊಸ ಸಂಶೋಧನೆಯನ್ನು ಆಧಾರವಾಗಿರಿಸಿಕೊಂಡು ಈ ನವೋದ್ಯಮಗಳು ಸ್ಥಾಪನೆಯಾಗುತ್ತಿವೆ.

400 ಕೋಟಿ ರೂ. ಮೊತ್ತ ಹೊಂದಿರುವ 'ಸ್ಟಾರ್ಟ್‌ ಅಪ್‌ ವೆಂಚರ್‌ ಫಂಡ್‌'ನಲ್ಲಿ 35 ಕೋಟಿ ರೂ. ಅನ್ನು ಈ ಉದ್ಯಮಗಳಿಗೆ ನೀಡಬೇಕು ಎಂದು ತೀರ್ಪುಗಾರರ ತಂಡ ಸರಕಾರಕ್ಕೆ ಶಿಫಾರಸು ಮಾಡಿದೆ.

ಹೊಸ ಉದ್ಯಮಗಳಿಗೆ ತಾಂತ್ರಿಕ ನೆರವು, ಕಾನೂನು ಸಲಹೆ ನೀಡಲು ರಾಜ್ಯ ಸರಕಾರವು 8 ಒಪ್ಪಂದಗಳನ್ನು ಮಾಡಿಕೊಂಡಿದೆ ಎಂದು ಮಾಹತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಈ ವಿಷಯವನ್ನು ತಿಳಿಸಿದ್ದಾರೆ.

ಆವಿಷ್ಕಾರಗಳಿಗೆ ಆದ್ಯತೆ ನೀಡಲು, ಬಂಡವಾಳ ಸಂಗ್ರಹವಾಗಲು ಮತ್ತು ಉದ್ಯೋಗ ಸೃಷ್ಠಿಗಾಗಿ ನವೋದ್ಯಮಗಳನ್ನು ಉತ್ತೇಜಿಸುತ್ತಿದ್ದೇವೆ. ನವೋದ್ಯಮಗಳು ದೊಡ್ಡ ಉದ್ಯಮವಾಗಿ ಬೆಳೆಯಲು ಅಗತ್ಯ ಮಾರ್ಗದರ್ಶನ ಮತ್ತು ಧನಸಹಾಯ ನೀಡುತ್ತೇವೆ. ಇದಕ್ಕಾಗಿಯೇ ₹ 400 ಕೋಟಿ ಮೀಸಲಿಡಲಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ನವೋದ್ಯಮಕ್ಕೆ ವಿವಿಧೆಡೆಯಿಂದ ಸಹಾಯಾಸ್ತ

ಗೂಗಲ್‌ ಸಂಸ್ಥೆಯು ಸ್ಟಾರ್ಟ್‌ ಅಪ್‌ ಸೆಲ್‌ನಲ್ಲಿ ಹೆಸರು ನೋಂದಾಯಿಸಿಕೊಂಡ ನವೋದ್ಯಮಗಳಿಗೆ 3,000 ಡಾಲರ್‌ ಮೌಲ್ಯದ ಕ್ಲೌಡ್‌ ಕ್ರೆಡಿಟ್‌ (ಉಚಿತ ತಂತ್ರಾಂಶ) ಹಾಗೂ 111ನವೋದ್ಯಮಗಳಿಗೆ 20,000 ಡಾಲರ್‌ ಮೌಲ್ಯದ ಕ್ಲೌಡ್‌ ಕ್ರೆಡಿಟ್‌ ನೀಡಲಿದೆ.

ನವೋದ್ಯಮಗಳಿಗೆ ತಾಂತ್ರಿಕ ಸಲಹೆಯನ್ನು ಪಿಡಬ್ಲ್ಯುಸಿ ಕಂಪನಿ ಹಾಗೂ ಬ್ಯಾಂಕಿಂಗ್‌ ಸಲಹೆಯನ್ನು ಯೆಸ್‌ ಬ್ಯಾಂಕ್‌, ಕಾನೂನು ಸಲಹೆಯನ್ನು ಇಂಡಿಯನ್‌ ಲಾ ಪ್ರಾಕ್ಟೀಸಸ್‌ ನೀಡಲಿದೆ.

ವಹಿವಾಟು ಆರಂಭ, ಖಾತೆ ನಿರ್ವಹಣೆ, ತೆರಿಗೆ ರಿಟರ್ನ್ಸ್‌, ಜಿಎಸ್‌ಟಿ ರಿಟರ್ನ್ಸ್‌ಗಳಿಗೆ ಕೋಟಕ್‌ ಮಹೀಂದ್ರ ಬ್ಯಾಂಕ್‌ ಸಹಾಯ ಮಾಡಲಿದೆ.

ಅಮೇಜಾನ್‌ ಆ್ಯಕ್ಟಿವೇಟ್‌ ನೋಂದಾಯಿತ ಉದ್ಯಮಗಳಿಗೆ 3,000 ಡಾಲರ್‌ ಮೌಲ್ಯದ ಕ್ಲೌಟ್‌ ಕ್ರೆಡಿಟ್‌ ಹಾಗೂ 111 ನವೋದ್ಯಮಗಳಿಗೆ 20 ಸಾವಿರ ಡಾಲರ್‌ ಮೌಲ್ಯದ ಕ್ಲೌಡ್‌ ಕ್ರೆಡಿಟ್‌ ನೀಡಲಿದೆ.

ಡಿಜಿಟಲ್‌ ಒಶಿಯನ್‌ ಸಂಸ್ಥೆಯು ನೋಂದಾಯಿತ ಉದ್ಯಮಗಳಿಗೆ 100 ಡಾಲರ್‌ ಹಾಗೂ ಕರ್ನಾಟಕ ಸ್ಟಾರ್ಟ್‌ ಅಪ್‌ ಸೆಲ್‌ನಲ್ಲಿ ನೋಂದಾಯಿಸಿಕೊಂಡ ಉದ್ಯಮಗಳಿಗೆ 1,000 ಡಾಲರ್‌ ಒನ್‌ ಟೈಂ ಕ್ರೆಡಿಟ್‌ ನೀಡಲಿದೆ.

ಜೋಹೋ ಸಂಸ್ಥೆಯು 35 ಕ್ಕೂ ಅಧಿಕ ಅಪ್ಲಿಕೇಶನ್‌, ಮೊಬೈಲ್‌ ಅಪ್ಲಿಕೇಶನ್‌ಗಳನ್ನು ಉಚಿತವಾಗಿ ನೀಡಲಿದೆ.

ಎಲಿವೇಟ್‌-100

ನವೋದ್ಯಮಗಳನ್ನು ಆರಂಭಿಸಲು ಉತ್ಸುಕರಾಗಿರುವ ಯುವಜನರಿಗೆ ಅಗತ್ಯ ಮಾರ್ಗದರ್ಶನ ಮತ್ತು ಹಣಕಾಸಿನ ನೆರವನ್ನು ನೀಡಲು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಲಾಖೆಯ ಯೋಜನೆ.

ಪ್ರಾಯೋಗಿಕ ಯೋಜನೆಗೆ ಅವಕಾಶ

ವಿವಿಧ ಇಲಾಖೆಗಳಲ್ಲಿ ಪ್ರಾಯೋಗಿಕ ಯೋಜನೆಗಳನ್ನು (ಪೈಲಟ್‌ ಪ್ರಾಜೆಕ್ಟ್‌) ಕೈಗೊಳ್ಳಲು ಅರ್ಹ ನವೋದ್ಯಮಗಳಿಗೆ ಅವಕಾಶ ನೀಡಲಾಗುತ್ತದೆ.

English summary
ELEVATE 100, an initiative of the Department of Information Technology and Biotechnology, Government of Karnataka aims to provide a comprehensive entrepreneurship platform for startups.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia