ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟು ದುಬಾರಿ

Posted By:

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಈ ವರ್ಷ ಶುಲ್ಕ ಹೆಚ್ಚಳವಾಗಿದೆ. 

ಡೀಮ್ಡ್ ವಿವಿಗಳಲ್ಲಿ  ಶೇ 30ರಿಂದ 40ರಷ್ಟು ಶುಲ್ಕ ಹೆಚ್ಚಳವಾಗಿದ್ದರೆ, ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳಿಗೆ ಶೇ10ರಷ್ಟು ಶುಲ್ಕ ಹೆಚ್ಚಳವಾಗಿದೆ.

ಶುಲ್ಕ ಹೆಚ್ಚಳಕ್ಕೆ ಕಾರಣ

ಡೀಮ್ಡ್‌ ವಿಶ್ವವಿದ್ಯಾಲಯಗಳ ಶುಲ್ಕ ನಿಗದಿ ಮೇಲೆ ರಾಜ್ಯ ಸರ್ಕಾರ ನಿಯಂತ್ರಣ ಹೇರದಿರುವುದರಿಂದ ಶುಲ್ಕ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ. ಅದರಲ್ಲೂ ರಾಜ್ಯದ ಕೆಲವು ಕಾಲೇಜುಗಳಲ್ಲಿ ಶೇ 50 ರಿಂದ ಶೇ 60 ರಷ್ಟು ಶುಲ್ಕ ಹೆಚ್ಚಿಸಿಲಾಗಿದೆ ಎನ್ನುವ ಆರೋಪಗಳು ಕೇಳಿಬಂದಿವೆ.

ವೆಬ್‌ಸೈಟ್‌ನಲ್ಲಿ ಶುಲ್ಕದ ವಿವರ

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (ಎನ್‌ಇಇಟಿ) ಮೆರಿಟ್‌ ಆಧಾರದ ಮೇಲೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ರ್ಯಾಂಕ್‌ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಇದರಲ್ಲಿ ಎಲ್ಲ ಕಾಲೇಜುಗಳ ಕೋರ್ಸ್‌ವಾರು ಶುಲ್ಕ ವಿವರಿಸಲಾಗಿದೆ. ಸರ್ಕಾರಿ ಕೋಟಾದ ಸೀಟುಗಳು ಮತ್ತು ಖಾಸಗಿ ಸೀಟುಗಳ ಶುಲ್ಕ ವಿವರ ಪ್ರತ್ಯೇಕವಾಗಿದೆ.

ಮೆಡಿಕಲ್ ಸೀಟು ದುಬಾರಿ

ಹೆಚ್ಚಿನ ಬೇಡಿಕೆಗೆ ಹೆಚ್ಚಿನ ಶುಲ್ಕ

ಬೇಡಿಕೆ ಹೆಚ್ಚಿರುವ ಪಿಜಿ ಸೀಟುಗಳಿಗೆ ಅತ್ಯಧಿಕ ಶುಲ್ಕ ನಿಗದಿ ಮಾಡಲಾಗಿದೆ. ರಾಜ್ಯದ ಕೆಲ ಕಾಲೇಜುಗಳ ಶುಲ್ಕ ಹೆಚ್ಚಳದ ವಿವರ ಇಂತಿದೆ.

 • ಮಂಗಳೂರಿನ ಕೆ.ಎಸ್. ಹೆಗಡೆ ಮೆಡಿಕಲ್‌ ಅಕಾಡೆಮಿಯಲ್ಲಿ ಎಂ.ಡಿ. ಜನರಲ್‌ ಮೆಡಿಸಿನ್‌, ಎಂ.ಡಿ. ಅನಸ್ತೇಸಿಯಾ ಮತ್ತು ಎಂ.ಎಸ್. ಜನರಲ್‌ ಸರ್ಜರಿಗೆ ಕಳೆದ ವರ್ಷ ₹ 17,54,000 ಇತ್ತು. ಈ ಬಾರಿ ಅದು ಕ್ರಮವಾಗಿ ₹ 24.08 ಲಕ್ಷ, ₹ 18.08 ಲಕ್ಷ ಹಾಗೂ ₹24.08 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ.
 • ಮೈಸೂರಿನ ಜಗದ್ಗುರು ಶ್ರೀ ಶಿವರಾತ್ರೀಶ್ವರ ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ ರೇಡಿಯಾಲಜಿ, ಎಮರ್ಜೆನ್ಸಿ ಮೆಡಿಸಿನ್‌ ಮತ್ತು ಪಲ್ಮೊನರಿ ಮೆಡಿಸಿನ್‌ಗೆ ಕಳೆದ ವರ್ಷ ₹ 11 ಲಕ್ಷ ಇದ್ದ ಶುಲ್ಕ ಈ ಬಾರಿ ₹ 15 ಲಕ್ಷಕ್ಕೆ ಏರಿಕೆಯಾಗಿದೆ.
 • ದಾವಣಗೆರೆಯ ಜಯ ಜಗದ್ಗುರು ಮುರುಘರಾಜೇಂದ್ರ ಮೆಡಿಕಲ್‌ ಕಾಲೇಜಿನಲ್ಲಿ ಎಂ.ಎಸ್. ಜನರಲ್‌ ಸರ್ಜರಿ, ಇ.ಎನ್‌.ಟಿ, ಅನಸ್ತೇಸಿಯಾ ಸೇರಿ ಎಂ.ಎಸ್ ಹಾಗೂ ಎಂ.ಡಿ ಕೋರ್ಸ್‌ಗಳ ಶುಲ್ಕವನ್ನು ₹ 4 ಲಕ್ಷದಿಂದ ₹ 6.60 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಎಂ.ಎಸ್. ರಾಮಯ್ಯ ಮೆಡಿಕಲ್‌ ಕಾಲೇಜಿನ ಎಂ.ಎಸ್, ಎಂ.ಡಿ ಕೋರ್ಸ್‌ ಶುಲ್ಕಗಳು ₹ 4 ಲಕ್ಷದಿಂದ ₹ 6.60 ಲಕ್ಷಕ್ಕೆ ಜಿಗಿದಿವೆ.
 • ಮಣಿಪಾಲ್‌ ವಿಶ್ವವಿದ್ಯಾಲಯದ ಕಸ್ತೂರಬಾ ಮೆಡಿಕಲ್‌ ಕಾಲೇಜಿನಲ್ಲಿ ಎಂ.ಡಿ ಫಾರ್ಮಕಾಲಜಿ ಶುಲ್ಕ ₹8.44 ಲಕ್ಷದಿಂದ ₹10.58 ಲಕ್ಷಕ್ಕೆ, ಎಂ.ಡಿ ಮೈಕ್ರೋಬಯಾಲಜಿ ಶುಲ್ಕ ₹10.31 ಲಕ್ಷದಿಂದ ₹12.64 ಲಕ್ಷಕ್ಕೆ, ಎಂ.ಡಿ ಜನರಲ್‌ ಮೆಡಿಸಿನ್‌ ಶುಲ್ಕ ₹13.72 ಲಕ್ಷದಿಂದ ₹16.40 ಲಕ್ಷಕ್ಕೆ ಹೆಚ್ಚಳ ಆಗಿದೆ.

ಇನ್ನು ಖಾಸಗಿ ಕಾಲೇಜುಗಳಲ್ಲಿ ಲಭ್ಯ ಇರುವ ಸರ್ಕಾರಿ ಕೋಟಾದ ಸೀಟುಗಳಿಗೆ ಗರಿಷ್ಠ ಶೇ 10ರಷ್ಟು ಶುಲ್ಕ ಹೆಚ್ಚಳ ಆಗಿದೆ.

  ಸರ್ಕಾರಿ ಕಾಲೇಜುಗಳಲ್ಲಿ ವ್ಯತ್ಯಾಸ ಆಗಿಲ್ಲ

  ಬೆಂಗಳೂರು ವೈದ್ಯಕೀಯ ಕಾಲೇಜು, ಮೈಸೂರು ವೈದ್ಯಕೀಯ ಕಾಲೇಜು, ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕಿಮ್ಸ್‌) ಹುಬ್ಬಳ್ಳಿ, ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬಳ್ಳಾರಿ, ಮಂಡ್ಯ, ಬೆಳಗಾವಿ, ಹಾಸನ, ಶಿವಮೊಗ್ಗ, ರಾಯಚೂರು ಮತ್ತು ಬೀದರ್‌ನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕಳೆದ ವರ್ಷದ ಶುಲ್ಕದಲ್ಲಿ ಅಷ್ಟಾಗಿ ವ್ಯತ್ಯಾಸ ಆಗಿಲ್ಲ.

  ವೆಬ್‌ಸೈಟ್‌ನಲ್ಲಿ ಅಪೂರ್ಣ ಮಾಹಿತಿ

  ಯಾವ ಯಾವ ಕಾಲೇಜುಗಳಲ್ಲಿ ಎಷ್ಟು ಸೀಟುಗಳಿವೆ ಎನ್ನವುದರ ಪೂರ್ಣ ಮಾಹಿತಿ ವೆಬ್ಸೈಟ್ ನಲ್ಲಿ ಇರಬೇಕಿತ್ತು. ಆದರೆ, ಬಹುತೇಕ ಡೀಮ್ಡ್‌ ವಿವಿಗಳು ಕಾಲೇಜಿನಲ್ಲಿ ಲಭ್ಯ ಇರುವ ಎಲ್ಲ ಸೀಟುಗಳನ್ನು (ಅನಿವಾಸಿ ಭಾರತೀಯ ಕೋಟಾ ಸೀಟು ಹೊರತುಪಡಿಸಿ) ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿಲ್ಲ ಎನ್ನುವ ಆರೋಪ ಕೂಡ ಕೇಳಿಬರುತ್ತಿದೆ.

  ಸಹಾಯಕ್ಕೆ ಬಾರದ ಸಹಾಯವಾಣಿ

  ವೈದ್ಯಕೀಯ ಶಿಕ್ಷಣದ ಸಮಸ್ಯೆಗಳನ್ನು ಆಲಿಸಲೆಂದೇ ಸಹಾಯವಾಣಿ ಅವಕಾಶ ಕಲ್ಪಿಸಲಾಗಿದೆ. ಆದರೆ ಸಹಾಯವಾಣಿಗೆ (080 - 23460460) ಕರೆ ಮಾಡಿದರೆ ಯಾರೂ ಪ್ರತಿಕ್ರಿಯಿಸದಿರುವುದು ವಿದ್ಯಾರ್ಥಿ ಮತ್ತು ಸಾರ್ವಜನಿಕರಿಗೆ ತೊಂದರೆಯುಂಟುಮಾಡಿದೆ.

  ಶಿಕ್ಷಣ ಸಚಿವರ ಅಸಹಾಯಕತೆ

  ಡೀಮ್ಡ್‌ ವಿಶ್ವವಿದ್ಯಾಲಯಗಳು ರಾಜ್ಯ ಸರ್ಕಾರದ ಹಿಡಿತದಲ್ಲಿ ಇಲ್ಲ. ಅವರು ಎಷ್ಟೇ ಶುಲ್ಕ ಹೆಚ್ಚಳ ಮಾಡಿದರೂ ಅದನ್ನು ನಾವು ನಿಯಂತ್ರಿಸಲು ಬರುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

  ಸರ್ಕಾರಿ ಕಾಲೇಜುಗಳು ಮತ್ತು ಖಾಸಗಿ ಕಾಲೇಜುಗಳಲ್ಲಿನ ಸರ್ಕಾರಿ ಸೀಟುಗಳಿಗೆ ಬೇಕಾಬಿಟ್ಟಿ ಶುಲ್ಕ ಹೆಚ್ಚಳ ಮಾಡಲು ಬಿಟ್ಟಿಲ್ಲ. ಯಾವುದೇ ವಿಭಾಗದಲ್ಲಿ ಸಹ ಶೇ 10ಕ್ಕಿಂತ ಹೆಚ್ಚು ಶುಲ್ಕ ಏರಿಕೆ ಮಾಡಿಲ್ಲ ಎಂದು ಅವರು ವಿವರಣೆ ನೀಡಿದ್ದಾರೆ.

  ಈ ಬಾರಿ ಸರ್ಕಾರಿ, ಖಾಸಗಿ, ಅಲ್ಪಸಂಖ್ಯಾತ ಕಾಲೇಜುಗಳು ಮತ್ತು ಡೀಮ್ಡ್‌ ವಿಶ್ವವಿದ್ಯಾಲಯಗಳಲ್ಲಿನ ಸೀಟುಗಳಿಗೆ ಏಕರೂಪದ ಕೌನ್ಸೆಲಿಂಗ್‌ ನಡೆಯುತ್ತದೆ.

  English summary
  Deemed universities raised the medical and dental seat fee to 50 to 60 percent from this year. private colleges raised to 10 percent and no raise in govt colleges

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia