ವೇತನ ಹೆಚ್ಚಳ ಪ್ರಕಟಣೆಗಾಗಿ ತಿಂಗಳುಗಟ್ಟಲೆ ಕಾಯುತ್ತಿರುವ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. 7ನೇ ವೇತನ ಆಯೋಗದ ಶಿಫಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುವ ಭತ್ಯೆ (ಡಿಎ) ಯನ್ನು ಶೇ 17 ರಿಂದ 28 ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಬುಧವಾರ ಅನುಮೋದನೆ ನೀಡಿದೆ.

ಕಳೆದ ಒಂದೂವರೆ ವರ್ಷದಿಂದ ಉದ್ಯೋಗಿಗಳಿಗೆ ವೇತನ ಹೆಚ್ಚಳ ಮಾಡಲಾಗಿಲ್ಲ. ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸರ್ಕಾರಿ ನೌಕರರಿಗೆ ಶೇ.4ರಷ್ಟು ಡಿಎ ಹೆಚ್ಚಳಕ್ಕೆ ಒಪ್ಪಿಗೆ ನೀಡಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದ್ದು, ಈ ಕುರಿತಂತೆ ಅಧಿಕೃತ ಆದೇಶ ಶೀಘ್ರದಲ್ಲೇ ಪ್ರಕಟವಾಗಲಿದೆ.
ಹಲವಾರು ಅನುಮೋದನೆಗಳು ಅಗತ್ಯವಿರುವುದರಿಂದ ಉದ್ಯೋಗಿಗಳಿಗೆ ಹೆಚ್ಚಳವಾದ ಡಿಎ ಪಡೆಯಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಹಿಂದಿನ ವರದಿಯು ಸೂಚಿಸಿದೆ. ಆ ರೀತಿಯ ವಿಳಂಬವಾದರೆ ಕೇಂದ್ರ ಸರ್ಕಾರಿ ನೌಕರರು ಜುಲೈ 1, 2021 ರಿಂದ ಬಾಕಿ ಇರುವ ವೇತನ ಪಡೆಯುವ ಸಾಧ್ಯತೆಯಿದೆ.
ಕಳೆದ ವರ್ಷದಿಂದ ಎರಡು ಮತ್ತು ಈ ವರ್ಷದಿಂದ ಒಂದು ಒಟ್ಟು 3 ಕಂತುಗಳು ಬಾಕಿಯಿದ್ದು, ಬಾಕಿ ಇರುವ ಮೂರು ಕಂತುಗಳ ಭಾಗವಾಗಿ ಶೇ 11ರಷ್ಟು ಡಿಎ ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ.