ದ್ವಿತೀಯ ಪಿಯುಸಿ ಮೌಲ್ಯಮಾಪನ ಉಪನ್ಯಾಸಕರ ಕಡಿಮೆ ಹಾಜರಾತಿ

Posted By:

ಬುಧವಾರದಿಂದ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಶುರುವಾಗಿದ್ದು ಮೊದಲ ದಿನ ಸೂಕ್ತ ಸಾರಿಗೆ ಮತ್ತು ವಸತಿ ವ್ಯವಸ್ಥೆ ಸಮಸ್ಯೆಯಿಂದಾಗಿ ನಾಲ್ಕು ಸಾವಿರ ಶಿಕ್ಷಕರು ಗೈರು ಹಾಜರಿದ್ದರು.

ಎರಡನೇ ದಿನವಾದ ಗುರುವಾರ ಮೌಲ್ಯಮಾಪನಕ್ಕೆ ಶೇ 88ರಷ್ಟು ಮೌಲ್ಯಮಾಪಕರು ಹಾಜರಾಗಿದ್ದು ಮೌಲ್ಯಮಾಪನ ಕಾರ್ಯ ಭರದಿಂದ ಸಾಗಿದೆ. ಪ್ರಾಂಶುಪಾಲರು ಮತ್ತು ಉಪ ನ್ಯಾಸಕರು ಸೇರಿ 21 ಸಾವಿರ ಮೌಲ್ಯ ಮಾಪಕರ ಪೈಕಿ 17,761 ಸಿಬ್ಬಂದಿ ಹಾಜರಾಗಿದ್ದಾರೆ.

ಬೆಂಗಳೂರು, ಮೈಸೂರು, ಶಿವಮೊಗ್ಗ, ಮಂಗಳೂರು, ದಾವಣಗೆರೆ ಮತ್ತು ಬೆಳಗಾವಿಯ 48 ಕೇಂದ್ರಗಳಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯುತ್ತಿದೆ. ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಸೇರಿ ಒಟ್ಟು 21 ಸಾವಿರ ಸಿಬ್ಬಂದಿಯನ್ನು ಮೌಲ್ಯಮಾಪನ ಕಾರ್ಯಕ್ಕೆ ನಿಯೋಜಿಸಲಾಗಿದೆ.

ಮೌಲ್ಯಮಾಪನದ ಮೊದಲ ದಿನ

ಬೆಂಗಳೂರಿನ ಮೌಲ್ಯಮಾಪನ ಕೇಂದ್ರಗಳಲ್ಲಿ ಮೊದಲ ದಿನ ಶೇ.40 ರಷ್ಟು ಸಿಬ್ಬಂದಿ ಗೈರು ಹಾಜರಿದ್ದರು. ಕುಮಾರನ್ಸ್‌ ಕಾಲೇಜು, ಬಿಇಎಲ್‌ ಜಾಲಹಳ್ಳಿ, ಶೇಷಾದ್ರಿಪುರ ಕಾಲೇಜು, ಶೇಷಾದ್ರಿಪುರ ಯಲಹಂಕ ಕಾಲೇಜು, ಬಂಟ್ಸ್‌ ಸಂಘ ಆರ್‌ಎನ್‌ಎಸ್‌ ವಿದ್ಯಾನಿಕೇತನ, ಮೌಂಟ್‌ ಕಾರ್ಮೆಲ್‌ ಕಾಲೇಜು ಮತ್ತು ವಿಜಯ ಪಿಯು ಕಾಲೇಜುಗಳನ್ನು  ಮೌಲ್ಯಮಾಪನ ಕೇಂದ್ರಗಳಾಗಿ ನಿಯೋಜಿಸಲಾಗಿದೆ.

ಗೈರು  ಹಾಜರಾದವರಿಗೆ ಎಚ್ಚರಿಕೆ

ಮುಖ್ಯವಾಗಿ ಭೌತವಿಜ್ಞಾನ, ರಸಾಯನವಿಜ್ಞಾನ, ಜೀವ ವಿಜ್ಞಾನ, ಕಂಪ್ಯೂಟರ್‌ ಸೈನ್ಸ್‌, ಅಕೌಂಟೆನ್ಸಿ ಮತ್ತು ಅರ್ಥಶಾಸ್ತ್ರ ವಿಷಯಗಳ ಮೌಲ್ಯಮಾಪಕರು ಹಾಜರಾಗಿರಲಿಲ್ಲ.

ಉಪನ್ಯಾಸಕರ ಗೈರು ಹಾಜರಿಗೆ ಪ್ರತಿಕ್ರಿಯಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಸಿ.ಶಿಖಾ 'ಮೌಲ್ಯಮಾಪನ ಕಾರ್ಯಕ್ಕೆ ನಿಯೋಜಿಸಲಾದ ಎಲ್ಲ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಗುರುವಾರ  ಕಡ್ಡಾಯವಾಗಿ ನಿಗದಿತ ಕೇಂದ್ರಕ್ಕೆ ಹಾಜರಾಗಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು' ಎಂದು ನೀಡಿದ್ದರು.

ಗೈರು ಹಾಜರಿಗೆ ಕಾರಣ

'ಉಪನ್ಯಾಸಕರು ಯಾವುದೇ ಮುಷ್ಕರದಲ್ಲಿ ಭಾಗವಹಿಸುತ್ತಿಲ್ಲ. ಬೇರೆ ಬೇರೆ ಊರುಗಳಿಂದ ಬರುವಾಗ ಸಾರಿಗೆ, ವಸತಿ, ಆರೋಗ್ಯದ ಸಮಸ್ಯೆಯಿಂದ ಮೊದಲ ದಿನ ಮೌಲ್ಯಮಾಪನಕ್ಕೆ ಹಾಜರಾಗಲು ತೊಂದರೆ ಆಗಿರಬಹುದು' ಎಂದು ರಾಜ್ಯ ಪದವಿ ಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಸ್ಪಷ್ಟಪಡಿಸಿದ್ದಾರೆ.

55 ವರ್ಷ ಮೀರಿರುವವರು, ಅನಾರೋಗ್ಯದಿಂದ ಬಳಲುತ್ತಿರುವವರು ಮತ್ತು ಯಾವುದೇ ತರಬೇತಿಗಳಲ್ಲಿ ಪಾಲ್ಗೊಂಡ ಉಪನ್ಯಾಸಕರಿಗೂ ಮೌಲ್ಯಮಾಪನಕ್ಕೆ ಹಾಜರಾಗುವಂತೆ ಸೂಚನೆ ಹೋಗಿರುತ್ತದೆ. ಅಂಥವರಿಗೆ ವಿನಾಯಿತಿಯೂ ಇರುತ್ತದೆ ಎಂದು ಅವರು ಹೇಳಿದ್ದಾರೆ.

'15 ಸಾವಿರದಿಂದ 16 ಸಾವಿರ ಮೌಲ್ಯಮಾಪಕರು ಸಾಕು. ಆದರೂ ಈ ಬಾರಿ 21 ಸಾವಿರ ಮೌಲ್ಯಮಾಪಕರಿಗೆ ಸೂಚನೆ ಕಳುಹಿಸಲಾಗಿದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಯಾವುದೇ ತೊಂದರೆ ಆಗುವುದಿಲ್ಲ' ಎಂದು ಪುರ್ಲೆ ಅವರು ಸ್ಪಷ್ಟಪಡಿಸಿದ್ದಾರೆ.

ಆರುವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 37 ಲಕ್ಷಕ್ಕೂ ಹೆಚ್ಚು ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಲಿದೆ. ಮೌಲ್ಯಮಾಪನ ಆರಂಭವಾದ 8 ದಿನದೊಳಗೆ ಶೇ 75ರಷ್ಟು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಳ್ಳಲಿದೆ. 12 ದಿನದೊಳಗೆ ಸಂಪೂರ್ಣ ಮುಗಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
Second puc answer booklets evaluation started all over. On the second day 88 percent lecturers were present for evaluation

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia