2013ರ ಬಾಂಬ್ ಸ್ಪೋಟ: ಲಿಷಾಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ

Posted By:

2013 ಏಪ್ರಿಲ್ 17ರಂದು ಮಲ್ಲೇಶ್ವರಂ ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಲಿಷಾಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲು ಕೊನೆಗೂ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ದುರಂತ ನಡೆದು ನಾಲ್ಕು ವರ್ಷಗಳ ನಂತರ ಪರಿಹಾರ ಸಿಕ್ಕಿದ್ದು, ಲಿಷಾಗೆ ಗ್ರೂಪ್ ಸಿ ಹುದ್ದೆ ನೀಡಲು ಸಂಪುಟದಲ್ಲಿ ನಿರ್ಧರಿಸಲಾಗಿದೆ.

2016ರ ಅಕ್ಟೋಬರ್‌ ನಲ್ಲಿ ಸರ್ಕಾರಿ ಉದ್ಯೋಗ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಜೊತೆಗೆ ಪರಿಹಾರ ನೀಡುವ ಕುರಿತು ಕೇಂದ್ರ ಸರ್ಕಾರಕ್ಕೂ ಸೂಚಿಸಿತ್ತು.

ಗಾಯಾಳು ಲಿಷಾಗೆ ಸರ್ಕಾರಿ ಉದ್ಯೋಗ

2013 ರ ಬಾಂಬ್ ದುರಂತ

2013ರ ಏಪ್ರಿಲ್ 17ರಂದು ಬೆಳಗ್ಗೆ ಮಲ್ಲೇಶ್ವರಂ ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಫೋಟಗೊಂಡಿತ್ತು. ಈ ಸಂದರ್ಭದಲ್ಲಿ ಕಾಲೇಜಿಗೆ ಹೋಗುತ್ತಿದ್ದ ಲಿಷಾ ಗಾಯಗೊಂಡಿದ್ದರು. ಕಬ್ಬಿಣದ ಚೂರುಗಳು ಅವರ ಎಡಗಾಲಿಗೆ ಹೊಕ್ಕಿತ್ತು. ಚಿಕಿತ್ಸೆಗಾಗಿ ಲಕ್ಷಾಂತರ ರು. ವೆಚ್ಚ ಮಾಡಿದ್ದರೂ ಲಿಷಾಳ ಕಾಲು ಇನ್ನೂ ಪೂರ್ಣ ಗುಣಮುಖವಾಗಿಲ್ಲ.

ಮಹಾರಾಣೀಸ್ ಅಮ್ಮಣಿ ಕಾಲೇಜಿನಲ್ಲಿ ಬಿಸಿಎ ಓದುತ್ತಿರುವ ಲಿಷಾ ಅವರು ಆಸ್ಪತ್ರೆಯಲ್ಲೇ ಇದ್ದಾಗಲೇ ಸಿಇಟಿ ಬರೆದಿದ್ದರು. ಇದೀಗ ಪದವೀಧರೆಯಾಗಿರುವ ಆಕೆಗೆ ಅನುಕಂಪದ ಆಧಾರದಲ್ಲಿ ಗ್ರೂಪ್‌ ಸಿ ಹುದ್ದೆ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಲಿಷಾ ಮನವಿ

ಬಾಂಬ್ ಅನಾಹುತದಿಂದ ಕಾಲು ಕಳೆದುಕೊಂಡ ಲಿಷಾ ಪರಿಹಾರಕ್ಕಾಗಿ ಕೋರ್ಟ್ ಮೊರೆ ಹೋಗಿದ್ದರು. 'ಅಂಗವಿಕಲ ಕೋಟಾದಡಿಯಲ್ಲಿ ಉದ್ಯೋಗ ನೀಡಬೇಕು, 1 ಕೋಟಿ ಪರಿಹಾರ ನೀಡಬೇಕು' ಎಂದು ಹೈಕೋರ್ಟಿಗೆ 2015ರಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ಜೊತೆಗೆ ಮುಂದಿನ ವೈದ್ಯಕೀಯ ವೆಚ್ಚ ಭರಿಸಬೇಕು. ಭಯೋತ್ಪಾದಕ ದಾಳಿಗೆ ತುತ್ತಾದವರಿಗೆ ಪರಿಹಾರ ನೀಡಲು ರಾಷ್ಟ್ರೀಯ ನೀತಿ ರೂಪಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು. ಆದರೆ, ರಾಜ್ಯ ಸರ್ಕಾರವು ಪರಿಹಾರ ರೂಪದಲ್ಲಿ 8.24 ಲಕ್ಷ ರು ಮಾತ್ರ ನೀಡಿತ್ತು.

English summary
More than four years after she was injured in a bomb blast at Malleswaram, Leesha NS has been given a government job. The decision was made by the Karnataka state cabinet on Thursday.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia