ಮಕ್ಕಳನ್ನು ಶಾಲೆಗೆ ಸೇರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಏಕರೂಪ ವಯೋಮಿತಿ

Posted By: Vinaykumar

ಶಾಲೆಗೆ ಸೇರಲು ಬಯಸುವ ಮಕ್ಕಳ ವಯೋಮಿತಿ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. ಪೂರ್ವ ಪ್ರಾಥಮಿಕ (ಎಲ್.ಕೆ.ಜಿ) ಮತ್ತು ಪ್ರಾಥಮಿಕ ಶಾಲೆಯ ಒಂದನೇ ತರಗತಿಗೆ ಮಕ್ಕಳನ್ನು ದಾಖಲಾತಿ ಮಾಡಲು ನಿಗಧಿಗೊಳಿಸಿರುವ ವಯೋಮಿತಿಯಲ್ಲಿ ಸ್ಪಷ್ಟತೆ ಇಲ್ಲದಿರುವುದನ್ನು ಗಮನಿಸಿ
ಸಾರ್ವಜನಿಕ ಶಿಕ್ಷಣ ಇಲಾಖೆ ಏಕರೂಪ ವಯೋಮಿತಿಯನ್ನು ನಿರ್ಧರಿಸಿ ಸ್ಪಷ್ಟ ಪಡಿಸಿದೆ.

ಮುಂದಿನ ಶೈಕ್ಷಣಿಕ ವರ್ಷದಿಂದ ಒಂದನೆ ತರಗತಿಗೆ ದಾಖಲಾಗುವ ಮಕ್ಕಳ ವಯಸ್ಸು ಜೂನ್ ವೇಳೆಗೆ 5 ವರ್ಷ 10 ತಿಂಗಳು ಪೂರ್ಣಗೊಂಡಿರಬೇಕು.
ಹಾಗೆಯೇ ಪೂರ್ವ ಪ್ರಾಥಮಿಕ ತರಗತಿಗೆ ದಾಖಲಾಗುವ ಮಕ್ಕಳಿಗೆ 3 ವರ್ಷ 10 ತಿಂಗಳು ತುಂಬಿರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಈ ಹಿಂದಿನ ಸರ್ಕಾರಗಳು ನಿಗದಿ ಪಡಿಸಿದ್ದ ಮಕ್ಕಳ ದಾಖಲಾತಿ ವಯೋಮಿತಿ ಆದೇಶಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ರದ್ದು ಪಡಿಸಿದೆ. ಮಕ್ಕಳಿಗೆ 5 ವರ್ಷ ತುಂಬಿದ ಕೂಡಲೇ ಪೋಷಕರು ಶಾಲೆಗೆ ಸೇರಿಸುತ್ತಾರೆ. ಮಕ್ಕಳು ಈ ವಯಸ್ಸಿಗೆ ಕಲಿಯಲು ಇನ್ನೂ ಶಕ್ತರಾಗಿರುವುದಿಲ್ಲ. ಆದರೆ, ಹೊಸ ನಿಯಮದ ಪ್ರಕಾರ 5 ವರ್ಷ 10 ತಿಂಗಳು ಪೂರ್ಣಗೊಂಡಿದ್ದರೆ ಮಾತ್ರ ಶಾಲೆಗೆ ದಾಖಲಿಸಲು ಸಾಧ್ಯ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಂ.ಆನಂದ್ ತಿಳಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಈ ಆದೇಶ ಜೂನ್ 2017 ರಿಂದ ಕಟ್ಟು ನಿಟ್ಟಾಗಿ ಜಾರಿಗೆ ಬರಲಿದೆ. 2016- 17ನೆ ಸಾಲಿನಲ್ಲಿ ಈಗಾಗಲೆ ದಾಖಲಾಗಿರುವ ಮಕ್ಕಳಿಗೆ ಈ ನಿಯಮ ಅನ್ವಯವಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 10ನೆ ತರಗತಿ ಪೂರ್ಣಗೊಳಿಸುವ ವೇಳೆಗೆ ವಿದ್ಯಾರ್ಥಿ ವಯಸ್ಸು 16 ವರ್ಷ ತುಂಬಿರಬೇಕು. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿಯಮಗಳ ಪ್ರಕಾರ, 16 ವರ್ಷ ಪೂರ್ಣಗೊಂಡಿದ್ದರೆ ಮಾತ್ರ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲು ಸಾಧ್ಯ, ಹೀಗಾಗಿ ಮಕ್ಕಳ ದಾಖಲಾತಿ ವಯೋಮಿತಿಯನ್ನು 5 ವರ್ಷ 10 ತಿಂಗಳಿಗೆ ನಿಗದಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ

ಹೊಸ ಅದೇಶದಲ್ಲಿ ಏನೇನಿದೆ ?

1. ಈ ಜ್ಞಾಪನ ಸರ್ಕಾರಿ ಶಾಲೆಗಳಿಗೆ, ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗಿ ಅನುಧಾನ ರಹಿತ ಅನುದಾನ ಸಹಿತ ಶಾಲೆಗಳಿಗೆ ಅನ್ವಯಿಸುತ್ತದೆ.
2. ಶಾಲೆಯಿಂದ ಹೊರಗುಳಿದ 6 ರಿಂದ 14 ವರ್ಷದೊಳಗಿನ ಮಕ್ಕಳು ಪ್ರಾಥಮಿಕ ಶಿಕ್ಷಣ ಪಡೆಯಲು ಶಾಲೆಗಳಿಗೆ ಬಂದಲ್ಲಿ ದಾಖಲಾತಿಯನ್ನು ನಿರಾಕರಿಸುವಂತಿಲ್ಲ. 6 ರಿಂದ 14 ವಯೋಮಾನದ ಯಾವುದೇ ಮಗು ಪ್ರವೇಶ ಕೋರಿ ಬಂದಲ್ಲಿ ಮಗುವಿನ ವಯೋಮಾನಕ್ಕನುಗುಣವಾಗಿ ತರಗತಿಯನ್ನು ಸ್ಥಾನಿಕರಿಸಿ ಪ್ರವೇಶ ನೀಡುವುದು.
ಉದಾಹರಣೆಗೆ: ಶಾಲೆಯಿಂದ ಹೊರಗುಳಿದ 9 ನೇ ವರ್ಷದ ಮಗು ದಾಖಲಾತಿ ಬಯಸಿ ಬಂದಲ್ಲಿ ಆ ಮಗುವನ್ನು ವಯೋಮಾನಕ್ಕನುಗುಣವಾಗಿ ಶಾಲೆಯ ಮುಖ್ಯಸ್ಥರು 4 ನೇ ತರಗತಿಗೆ ದಾಖಲು ಮಾಡಿಕೊಳ್ಳತಕ್ಕದ್ದು. ಹೀಗೆ 14 ವರ್ಷದವರೆವಿಗೂ ವಯೋಮಾನಕ್ಕನುಗುಣವಾಗಿ ತರಗತಿಗಳನ್ನು ಸ್ಥಾನಿಕರಿಸಿ ಮಕ್ಕಳಿಗೆ ಪ್ರವೇಶ ನೀಡುವುದು. ಈ ಮಕ್ಕಳು ಹಿಂದಿನ ತರಗತಿಗಳ ಕಲಿಕಾಂಶ/ ಸಾಮರ್ಥ್ಯಗಳನ್ನು ಇತರೆ ರೆಗ್ಯುಲರ್ ಮಕ್ಕಳಂತೆ ಸಮಾನಾಂತರವಾಗಿ ಪ್ರಗತಿ ಸಾಧಿಸಲು ಅನುವಾಗುವಂತೆ ಈ ಮಕ್ಕಳಿಗೆ ವಿಶೇಷ ಕಲಿಕಾ ಚಟುವಟಿಕೆಗಳನ್ನು ಹಾಗೂ ಬೋಧನಾ ಕಾರ್ಯಗಳನ್ನು ಮುಖ್ಯಶಿಕ್ಷಕರು ಆಯೋಜಿಸುವುದು.
3. ಈ ಜ್ಞಾಪನ 2017-18 ನೇ ಶೈಕ್ಷಣಿಕ ಸಾಲಿನಿಂದ ಜಾರಿಗೆ ಬರುತ್ತದೆ. ಹಿಂದಿನ ಸಾಲಿನಲ್ಲಿ ದಾಖಲಾತಿ ಹೊಂದಿರುವ ವಿದ್ಯಾರ್ಥಿಗಳಿಗೆ ಇದು ಅನ್ವಯವಾಗುವುದಿಲ್ಲ.
4. ಮಗುವಿನ ಜನ್ಮ ದಿನಾಂಕ ಪ್ರಮಾಣ ಪಾತ್ರ ಇಲ್ಲ ಎಂಬ ಕಾರಣದಿಂದ ಯಾವುದೇ ಮಗುವನ್ನು ಶಾಲಾ ದಾಖಲಾತಿಗೆ ನಿರಾಕರಿಸುವಂತಿಲ್ಲ. ಹುಟ್ಟಿದ ದಿನಾಂಕ ಬಗ್ಗೆ ಅಧಿಕೃತ ದಾಖಲೆ ಇಲ್ಲದಿದ್ದಲ್ಲಿ ಪೋಷಕರಿಂದ ಸ್ವಯಂ ಘೋಷಣಾ ಲಿಖಿತ ಹೇಳಿಕೆಯನ್ನು ಪಡೆದು ದಾಖಲಾತಿ ಮಾಡಿಕೊಳ್ಳಲು ಸೂಚಿಸಿದೆ.
ಪೂರ್ವ ಪ್ರಾಥಮಿಕ (ಎಲ್.ಕೆ.ಜಿ)ಗೆ ಹಾಗು ಪ್ರಾಥಮಿಕ ಒಂದನೇ ತರಗತಿಗೆ ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಮೇಲೆ ತಿಳಿಸಿರುವ ಎಲ್ಲಾ ಸೂಚನೆಯನ್ನು ಪಾಲಿಸಬೇಕು. ಯಾವುದೇ ಲೋಪದೋಷ ಕಂಡುಬಂದಲ್ಲಿ ಸಂಬಂಧಪಟ್ಟ ಮುಖ್ಯಶಿಕ್ಷಕರನ್ನು ನೇರವಾಗಿ ಜವಾಬ್ದಾರರನ್ನಾಗಿ ಮಾಡಿ ಸೂಕ್ತ ಕ್ರಮ ಜರುಗಿಸಲಾಗುವುದು.

English summary
department of public instructions clarifies minimum age to admit children to school

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia