ಬೃಹತ್ ಮಟ್ಟದ ಇ-ಕಾಮರ್ಸ್ ಕಂಪನಿ ಅಮೆಜಾನ್ ಇಂಡಿಯಾ ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳ ಸಬಲೀಕರಣಕ್ಕಾಗಿ ಮತ್ತು ಅವರ ಭವಿಷ್ಯವನ್ನು ಉಜ್ವಲವಾಗಿಸುವ ನಿಟ್ಟಿನಲ್ಲಿ 20 ಸಾವಿರ ಡಿಜಿಟಲ್ ಸಾಧನಗಳನ್ನು ವಿದ್ಯಾರ್ಥಿಗಳಿಗೆ ನೇರವಾಗಿ ನೀಡುವುದಾಗಿ ಹೇಳಿದೆ.

ಅಮೆಜಾನ್ ತನ್ನ 'ಸ್ಮೈಲ್ಸ್ ವಿತರಣೆ' ಉಪಕ್ರಮದ ಅಡಿಯಲ್ಲಿ 150 ಕ್ಕೂ ಹೆಚ್ಚು ದೊಡ್ಡ ಮತ್ತು ಸಣ್ಣ ಲಾಭರಹಿತ ಸಂಸ್ಥೆಗಳ ಸಹಭಾಗಿತ್ವದಲ್ಲಿ ಭಾರತದಾದ್ಯಂತ 1 ಲಕ್ಷ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುವ ಗುರಿಯನ್ನು ಹೊಂದಿದೆ.
"ಅಮೆಜಾನ್ 150 ಕ್ಕೂ ಹೆಚ್ಚು ದೊಡ್ಡ ಮತ್ತು ಸಣ್ಣ ಲಾಭೋದ್ದೇಶವಿಲ್ಲದ ಸಂಸ್ಥೆಗಳ ಸಹಭಾಗಿತ್ವದಲ್ಲಿ 20,000 ಡಿಜಿಟಲ್ ಸಾಧನಗಳನ್ನು ನೇರವಾಗಿ ಹಿಂದುಳಿದ ಯುವಜನರಿಗೆ ಒದಗಿಸುತ್ತಿದೆ. ಭಾರತದಾದ್ಯಂತ 1,00,000 ವಿದ್ಯಾರ್ಥಿಗಳಿಗೆ ಈ ಕೊಡುಗೆ ನೀಡುವ ಸಾಧ್ಯತೆ ಇದೆ. ಅಮೆಜಾನ್ ಸ್ವಯಂಸೇವಕ ಕಾರ್ಯಕ್ರಮದ ಭಾಗವಾಗಿ ಆಂತರಿಕ ಉದ್ಯೋಗಿಗಳ ನಾಮನಿರ್ದೇಶನ ಮೇರೆಗೆ ಈ 150 ಕ್ಕೂ ಹೆಚ್ಚು ದೊಡ್ಡ ಮತ್ತು ಸಣ್ಣ ಲಾಭೋದ್ದೇಶವಿಲ್ಲದ ಸಂಸ್ಥೆಗಳಲ್ಲಿ 100 ಲಾಭರಹಿತ ಪಾಲುದಾರರನ್ನು ಆಯ್ಕೆ ಮಾಡಲಾಗುತ್ತದೆ." ಎಂದು ಅಮೆಜಾನ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಸದುದ್ದೇಶದಿಂದ ಅಮೆಜಾನ್ ಕಂಪನಿಯು ತನ್ನ ಗ್ರಾಹಕರಿಗೆ ನಗದು ರೂಪದಲ್ಲಿ ಕೊಡುಗೆ ನೀಡಲು ಅಥವಾ ತಮ್ಮ ಹಳೆಯ ಮೊಬೈಲ್ ಫೋನ್‌ಗಳನ್ನು ನೀಡಲು ಕೇಳಿಕೊಂಡಿದೆ. ಹಳೆಯ ಮೊಬೈಲ್ ಫೋನ್ ಗಳನ್ನು ನವೀಕರಿಸಿ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿದ್ದು, ಈ ರೀತಿಯಾಗಿ ಸುಮಾರು ಒಂದು ಲಕ್ಷ ಹಿಂದುಳಿದ ವಿದ್ಯಾರ್ಥಿಗಳಿಗೆ ಡಿಜಿಟಲ್ ಕಲಿಕಾ ಸಾಧನಗಳನ್ನು ಒದುಗಿಸುವ ಗುರಿಯನ್ನು ಹೊಂದಿದೆ.
ಅಮೆಜಾನ್ ಇಂಡಿಯಾ ಉಪಾಧ್ಯಕ್ಷ ಮನೀಶ್ ತಿವಾರಿ ಮಾತನಾಡಿ, ಕೋವಿಡ್ -19 ಸಾಂಕ್ರಾಮಿಕವು ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲದೆ ಅಗತ್ಯ ಸೇವೆಗಳ ಪ್ರವೇಶದಲ್ಲಿಯೂ ಡಿಜಿಟಲ್ ವಿಭಜನೆಯನ್ನು ಕೇಂದ್ರೀಕರಿಸಿದೆ ಎಂದಿದ್ದಾರೆ.
"ಈ ಸಂದರ್ಭದಲ್ಲಿ ಅತಿ ಹೆಚ್ಚು ನಷ್ಟಕ್ಕೆ ಒಳಗಾಗಿರುವವರಲ್ಲಿ ಹಿಂದುಳಿದ ಸಮುದಾಯಗಳ ಯುವಕರು ಕೂಡ ಸೇರಿದ್ದಾರೆ. ನಾವು ನಮ್ಮ ಗ್ರಾಹಕರು, ಉದ್ಯೋಗಿಗಳು ಮತ್ತು ಪಾಲುದಾರರೊಂದಿಗೆ ಒಟ್ಟಾಗಿ ಸೇರಿ ಯುವಜನರಿಗೆ ಡಿಜಿಟಲ್ ಸಾಧನಗಳನ್ನು ನೀಡುವ ಮೂಲಕ ಅವರ ಆನ್‌ಲೈನ್ ಶಿಕ್ಷಣಕ್ಕೆ ಮತ್ತು ಅವರ ಕುಟುಂಬಗಳ ಅಗತ್ಯ ಸೇವೆಗಳಿಗೆ ನಿರಂತರವಾಗಿ ಕೈ ಜೋಡಿಸುವ ಉದ್ದೇಶವನ್ನು ಹೊಂದಿದ್ದೇವೆ. ಈ ಮೂಲಕ ಯುವಜನರೊಂದಿಗೆ ನಾವು ಅಂತರವನ್ನು ಕಡಿಮೆ ಮಾಡುವ ಗುರಿ ಹೊಂದಿದ್ದೇವೆ" ಎಂದು ತಿವಾರಿ ಹೇಳಿದ್ದಾರೆ.
"ಎಲ್ಲಾ ಯುವಜನರಲ್ಲಿ ಪ್ರತಿಭೆ ಮತ್ತು ಪ್ಯಾಷನ್ ಇದ್ದರೂ ಕೂಡ ಅದಕ್ಕೆ ತಕ್ಕ ಅವಕಾಶಗಳು ಇಲ್ಲ ಎಂದು ನಮಗೆ ತಿಳಿದಿದೆ. ಈ ನಿಟ್ಟಿನಲ್ಲಿ ಜಾಗತಿಕವಾಗಿ ಸಿಗ್ನೇಚರ್ ಕಂಪ್ಯೂಟರ್ ಸೈನ್ಸ್ ಶಿಕ್ಷಣ ನೀಡಲು ಅಮೆಜಾನ್ ಫ್ಯೂಚರ್ ಇಂಜಿನಿಯರ್ ಅನ್ನು ಭಾರತದಲ್ಲಿ ಆರಂಭಿಸಲು ಕಾರಣವಾಯಿತು. ಇದರಿಂದ ಹಿಂದುಳಿದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಕಂಪ್ಯೂಟರ್ ಸೈನ್ಸ ಶಿಕ್ಷಣವನ್ನು ಒದುಗಿಸುವುದರ ಜೊತೆಗೆ ಅವರಿಗೆ ಉದ್ಯೋಗಾವಕಾಶಗಳನ್ನು ಕೂಡ ನೀಡಲಿದೆ. ದೇಶದ ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಅಮೆಜಾನ್ ಬದ್ಧವಾಗಿದೆ" ಎಂದು ತಿವಾರಿ ಮಾತನಾಡಿದ್ದಾರೆ.