ಕೆಎಎಸ್ ಮುಖ್ಯ ಪರೀಕ್ಷೆಗೆ ಮೈಸೂರಿನ ಕರ್ನಾಟಕ ಮುಕ್ತ ವಿವಿಯಿಂದ (ಕೆಎಸ್ಒಯು) ಪದವಿ ಪಡೆದಿರುವ ಅಭ್ಯರ್ಥಿಗಳನ್ನು ಪರಿಗಣಿಸುವಂತೆ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ.
ತುಮಕೂರಿನ ಕುಣಿಗಲ್ ತಾಲ್ಲೂಕಿನ ಸೀನಪ್ಪನಹಳ್ಳಿ ಗ್ರಾಮದ ಎಸ್.ಆರ್.ಸಂದೀಪ್ ಅರ್ಜಿಯನ್ನು ಸಲ್ಲಿಸಿದ್ದು, ವಿಚಾರಣೆ ನಡೆಸಿದ ನ್ಯಾಯಪೀಠವು ರಾಜ್ಯ ಉನ್ನತ ಶಿಕ್ಷಣ ಇಲಾಖೆ, ಕೆಪಿಎಸ್ಸಿ, ಯುಜಿಸಿ ಹಾಗೂ ಕೆಎಸ್ಒಯು ಗೆ ನೋಟಿಸ್ ಜಾರಿಗೊಳಿಸಿದೆ.
ಸೋಮವಾರ ನಡೆದ ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲರಾದ ಡಿ.ವಿಜಯಕುಮಾರ್ ಕೆಎಸ್ಒಯು ಗೆ ನೀಡಿದ್ದ ಮಾನ್ಯತೆಯನ್ನು ಯುಜಿಸಿ 2013-14 ರಿಂದ ಪೂರ್ವಾನ್ವಯವಾಗುವಂತೆ ರದ್ದುಗೊಳಿಸಿರುವುದು ಕಾನೂನು ಬಾಹಿತ ಕ್ರಮವಾಗಿದೆ ಎಂದು ವಾದಿಸಿದರು.
ಯುಜಿಸಿ ಆದೇಶವನ್ನೇ ಮುಂದಿಟ್ಟುಕೊಂಡು ಕೆಪಿಎಸ್ಸಿ ತನ್ನ ಪರೀಕ್ಷೆಗಳಿಗೆ ಕೆಎಸ್ಒಉ ಪದವಿಗಳನ್ನು ಪರಿಗಣಿಸುತ್ತಿಲ್ಲ. ಇದರಿಂದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದ ವಕೀಲರು ಹೇಳಿದರು.
2016 ನೇ ಸಾಲಿನ ಕೆಎಎಸ್ ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಅರ್ಜಿದಾರರು ಮುಖ್ಯ ಪರೀಕ್ಷೆ ಎದುರಿಸಬೇಕಿದೆ. ಆದರೆ ಕೆಎಸ್ಒಯು ನಲ್ಲಿ ಪದವಿ ಪಡೆದಿರುವ ಇತರ ಅಭ್ಯರ್ಥಿಗಳ ಅರ್ಜಿಗಳನ್ನು ಕೆಪಿಎಸ್ಸಿ ತಿರಸ್ಕರಿಸಿದೆ. ಹೀಗಾಗಿ ಅವರ ಅರ್ಜಿಯನ್ನು ಪರಿಗಣಿಸಲು ಕೆಪಿಎಸ್ಸಿಗೆ ನಿರ್ದೇಶಿಸಬೇಕೆಂದು ನ್ಯಾಯಪೀಠಕ್ಕೆ ಕೋರಿದರು.
ನ್ಯಾ.ಬಿ.ವಿ,ನಾಗರತ್ನ ಅವರಿದ್ದ ಪೀಠ ವಿಚಾರಣೆಯನ್ನು ನಡೆಸಿ ರಾಜ್ಯ ಉನ್ನತ ಶಿಕ್ಷಣ ಇಲಾಖೆ, ಕೆಪಿಎಸ್ಸಿ, ಯುಜಿಸಿ ಹಾಗೂ ಕೆಎಸ್ಒಯು ಗೆ ನೋಟಿಸ್ ಜಾರಿಗೊಳಿಸಿದೆ.