ವಿಳಂಬ ತಪ್ಪಿಸಲು ಡಾಟಾ ಎಂಟ್ರಿ ಆಪರೇಟರ್ಸ್‌ಗಳ ನೇಮಕಾತಿ

Posted By:

ಶೀಘ್ರದಲ್ಲೆ ರಾಜ್ಯದ ಪ್ರತಿ ತಾಲೂಕು ಆರೋಗ್ಯ ಕಚೇರಿಗಳಲ್ಲಿ ವಿಶೇಷ ಡಾಟಾ ಎಂಟ್ರಿ ಆಪರೇಟರ್ಸ್‌ಗಳನ್ನು ನಿಯೋಜಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

ಸಚಿವ ರಮೇಶ್‌ಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಡಾಟಾ ಎಂಟ್ರಿ ಆಪರೇಟರ್ಸ್‌ಗಳನ್ನು ನಿಯೋಜಿಸಲು ತೀರ್ಮಾನಿಸಲಾಗಿದ್ದು, ಆಶಾ ಸಾಫ್ಟ್‌ ಎಂಟ್ರಿ ಸಾಫ್ಟ್‌ವೇರ್‌ಗಳಲ್ಲಿ ಆಶಾ ಕಾರ್ಯಕರ್ತೆಯರ ಕೆಲಸಗಳನ್ನು ನಮೂದಿಸುವಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಲು ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

ಕೆಲ ದಿನಗಳಿಂದ ಡಾಟಾ ಎಂಟ್ರಿಯಲ್ಲಿ ಆಗುತ್ತಿರುವ ವಿಳಂಬ ಖಂಡಿಸಿ, ಆಶಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

ಡಾಟಾ ಎಂಟ್ರಿ ಆಪರೇಟರ್ಸ್‌ಗಳ ನೇಮಕಾತಿ

ಡಾಟಾ ಎಂಟ್ರಿ ಆಪರೇಟರ್ಸ್‌ಗಳ ನೇಮಕಾತಿಯಿಂದ ಆಶಾ ಕಾರ್ಯಕರ್ತೆಯರ ಕೆಲಸದ ವಿವರಗಳನ್ನು ಸಾಫ್ಟ್‌ವೇರ್‌ನಲ್ಲಿ ಅಪ್‌ಲೋಡ್‌ ಮಾಡಲು ಸುಲಭವಾಗಲಿದೆ ಅಲ್ಲದೇ ಸಮಯಕ್ಕೆ ಸರಿಯಾಗಿ ಪ್ರೋತ್ಸಾಹ ಧನ ಪಡೆಯಲು ಕೂಡ ಇದು ಸಹಕಾರಿಯಾಗಲಿದೆ.

ಆಶಾ ಕಾರ್ಯಕರ್ತೆಯರ ಕೆಲಸಗಳಿಗೆ 5-6 ಸಾವಿರ ರೂ. ಹಣವನ್ನು ಒಟ್ಟಾಗಿ ಪಾವತಿ ಮಾಡುವಂತೆ ಮಾಡಬೇಕು. ಸಣ್ಣ ಮೊತ್ತದಲ್ಲಿ ನೀಡುತ್ತಿರುವ ಪ್ರೋತ್ಸಾಹ ಧನವನ್ನು 6 ಸಾವಿರ ರೂ. ಪಾವತಿಸಬೇಕೆಂಬ ಬೇಡಿಕೆಯನ್ನು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗುವುದು. ಕೇಂದ್ರ ಸರಕಾರದ ಲೆಕ್ಕಾಚಾರ ಪ್ರಕಾರ, ಆಶಾ ಕಾರ್ಯಕರ್ತೆಯರನ್ನು ಹೆಚ್ಚು ತೊಡಗಿಸಿಕೊಳ್ಳುವ ಮೂಲಕ 13 ಸಾವಿರ ರೂ. ವರೆಗೂ ಪ್ರೋತ್ಸಾಹ ಧನ ಒದಗಿಸಬಹುದಾಗಿದೆ.

ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಇಂತಹ ವ್ಯವಸ್ಥೆ ಜಾರಿಯಲ್ಲಿದೆ. ಹೀಗಾಗಿ ನಿಗದಿತ ಪ್ರೋತ್ಸಾಹ ಧನ ನೀಡುವ ಬಗ್ಗೆ ಸಂಘಗಳೊಂದಿಗೆ ಮಾತುಕತೆ ನಡೆಸಿ ಇತ್ಯರ್ಥಪಡಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ,'' ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಆಶಾ ಯೋಜನೆ

ಕೇಂದ್ರ ಸರ್ಕಾರದ 'ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆ'ಯಡಿ 2005ರಲ್ಲಿ 'ಆಶಾ' (ಅಕ್ರೆಡಿಟೆಡ್ ಸೋಷಿಯಲ್ ಹೆಲ್ತ್ ಆ್ಯಕ್ಟಿವಿಸ್ಟ್) ಯೋಜನೆಗೆ ಹಸಿರು ನಿಶಾನೆ ಸಿಕ್ಕಿತು.

ಗರ್ಭಿಣಿಯರ ಸುರಕ್ಷಿತ ಹೆರಿಗೆ, ಸ್ವಸ್ಥ ಶಿಶುವಿನ ಜನನ, ಆರೈಕೆ, ಆರೋಗ್ಯ ಮತ್ತು ಪೌಷ್ಟಿಕತೆಯ ಅರಿವು ಮೂಡಿಸುತ್ತ, ಕ್ಷಯ, ಕುಷ್ಠ ರೋಗ, ಮಲೇರಿಯ, ಡೆಂಗಿ, ಚಿಕೂನ್‌ಗುನ್ಯ ಇತ್ಯಾದಿ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಶ್ರಮಿಸುವುದು. ಕುಟುಂಬ ಯೋಜನೆ, ಶೌಚಾಲಯ ಬಳಕೆ, ಸಮಗ್ರ ಅಭಿವೃದ್ಧಿ ಕುರಿತು ಗ್ರಾಮೀಣ ಸಮಾಜದ ಆರೋಗ್ಯಕರ ಬದಲಾವಣೆಗೆ ವಿಷಮ ಪರಿಸ್ಥಿತಿಗಳಲ್ಲೂ ಸದ್ದಿಲ್ಲದೆ ಸೇವೆ ಸಲ್ಲಿಸುವುದು, ಗ್ರಾಮೀಣ ಜನಸಮುದಾಯಕ್ಕೂ ಆರೋಗ್ಯ ಇಲಾಖೆಗೂ ನಡುವಿನ ಸೇತುವೆಯಾಗಿರುವುದು ಆಶಾ ಯೋಜನೆಯಾಗಿದೆ.

2007ರಲ್ಲಿ ಕರ್ನಾಟಕದಲ್ಲಿ ಆರೋಗ್ಯ ಇಲಾಖೆಯಡಿ ಆಶಾ ಕಾರ್ಯಕರ್ತರನ್ನು ನೇಮಿಸಿಕೊಳ್ಳಲಾಯಿತು. ಗ್ರಾಮೀಣ ಪ್ರದೇಶದ, ಕನಿಷ್ಠ ಎಂಟನೇ ತರಗತಿಯವರೆಗೆ ಓದಿರುವ ಹೆಣ್ಣು ಮಕ್ಕಳಿಗೆ, ಪ್ರತಿ ಸಾವಿರ ಜನಸಂಖ್ಯೆಗೆ ಒಬ್ಬರಂತೆ ಜನರ ಆರೋಗ್ಯದ ಜವಾಬ್ದಾರಿ ನೀಡಿ ಬೇರುಮಟ್ಟದ ಕೊಂಡಿಯಾಗಿ ನೇಮಿಸಲಾಯಿತು. ದೇಶದಲ್ಲಿ 9 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

English summary
Government to appoint data entry operators to ASHA programme. To avoid delay in entering the workers data this decision has taken.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia