ಕಾವಲುಗಾರರ ಹುದ್ದೆಗೆ ಉನ್ನತ ಶಿಕ್ಷಣ ಪಡೆದವರ ಪೈಪೋಟಿ

ಗುರುವಾರ ನಡೆದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಲ್ಲಿ ಖಾಲಿ ಇರುವ ಡಿ ದರ್ಜೆಯ ರಾತ್ರಿ ಕಾವಲುಗಾರ ಹುದ್ದೆಯ ನೇರ ನೇಮಕಾತಿ ದೈಹಿಕ ಪರೀಕ್ಷೆಯಲ್ಲಿ ಬಿಇ, ಎಂಎಸ್‌ಸಿ, ಎಂಕಾಂ, ಎಂಎ, ಬಿಇಡಿ, ಡಿಪ್ಲೊಮಾ ಓದಿದವರು ಪಾಲ್ಗೊಂಡಿದ್ದರು.

ನಿರುದ್ಯೋಗ ಸಮಸ್ಯೆ ಮತ್ತು ಜೀವನದ ಅಭದ್ರತೆಯಿಂದಾಗಿ ಇಂದಿನ ಯುವಪೀಳಿಗೆ ಸರ್ಕಾರಿ ಕೆಲಸಗಳ ಮೇಲೆ ಸಾಕಷ್ಟು ಅವಲಂಭಿತವಾಗಿದೆ. ಎಷ್ಟರ ಮಟ್ಟಿಗೆ ಎಂದರೆ ಅದು ಯಾವ ಕೆಲಸವಾದರು ಸರಿ ಎನ್ನೋ ಲೆಕ್ಕಾಚಾರ ಯುವಕರ ಮನದಲ್ಲಿದೆ.

ಮಕ್ಕಳು ಉನ್ನತ ಸ್ಥಾನಕ್ಕೆ ಹೋಗಲಿ ಎಂದು ತಂದೆ ತಾಯಿ ಕಷ್ಟ ಪಟ್ಟು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುತ್ತಿರುವಾಗ ಇಂದಿನ ನಿರುದ್ಯೋಗ ಸಮಸ್ಯೆಯು ವಿದ್ಯೆಗೆ ಬೆಲೆಯಿಲ್ಲದಂತೆ ಮಾಡಿರುವುದು ಬೇಸರದ ಸಂಗತಿ.

ಗುರುವಾರ ನಡೆದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಲ್ಲಿ ಖಾಲಿ ಇರುವ ಡಿ ದರ್ಜೆಯ ರಾತ್ರಿ ಕಾವಲುಗಾರ ಹುದ್ದೆಯ ನೇರ ನೇಮಕಾತಿ ದೈಹಿಕ ಪರೀಕ್ಷೆಯಲ್ಲಿ ಬಿಇ, ಎಂಎಸ್‌ಸಿ, ಎಂಕಾಂ, ಎಂಎ, ಬಿಇಡಿ, ಡಿಪ್ಲೊಮಾ ಓದಿದವರು ಪಾಲ್ಗೊಂಡು ಅಚ್ಚರಿ ಉಂಟು ಮಾಡಿದ್ದಾರೆ.

ಕಾವಲುಗಾರರ ಹುದ್ದೆ ಬಯಸಿ ಬಂದ ವಿದ್ಯಾವಂತರು

ಮಂಡ್ಯದ ಡಿಎಆರ್‌ ಪೊಲೀಸ್‌ ಮೈದಾನದಲ್ಲಿ ನಡೆದ ಪರೀಕ್ಷೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಮೇಲೆ ರಾತ್ರಿ ಕಾವಲುಗಾರರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ ಬಹುತೇಕರು ಪದವೀ, ಸ್ನಾತಕೋತ್ತರ ಪದವಿಗಳಿಸಿದವರೇ ಆಗಿದ್ದರು.

ಪರೀಕ್ಷೆಗೆ ಬಂದಿದ್ದ ಸಾಫ್ಟ್ ವೇರ್ ಇಂಜಿನಿಯರ್

ಎಸ್ ಎಸ್ ಎಲ್ ಸಿಯಲ್ಲಿ 90 ತೆಗೆದವ ಕಾವಲುಗಾರ ಹುದ್ದೆಗೆ ಅರ್ಜಿ ಸಲ್ಲಿಸಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಮದ್ದೂರು ತಾಲ್ಲೂಕಿನ ಎಂ.ಎಸ್‌.ಅಕ್ಷಯ್‌ ಬಿಇ ಓದಿದವರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 90.72 ಅಂಕ ಪಡೆದಿದ್ದು, ಸರ್ಕಾರಿ ಕೆಲಸದ ಕನಸಿನಿಂದ ದೈಹಿಕ ಪರೀಕ್ಷೆಗೆ ಹಾಜರಾಗಿದ್ದರು.

ಪ್ರಸ್ತುತ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ನೌಕರಿಯಲ್ಲಿರುವ ಅಕ್ಷಯ್ 'ಬೆಂಗಳೂರಿನಲ್ಲಿ ಐಟಿ ಕ್ಷೇತ್ರ ಬಿದ್ದು ಹೋಗಿದೆ. ವಿದೇಶಕ್ಕೆ ಹೋದವರೆಲ್ಲ ಕೆಲಸ ಕಳೆದುಕೊಂಡು ವಾಪಸ್‌ ಬರುತ್ತಿದ್ದಾರೆ. ಒಂದು ಸಣ್ಣ ಸರ್ಕಾರಿ ಕೆಲಸ ಸಿಕ್ಕರೆ ಸಾಕು ಎಂದು ಕಾವಲುಗಾರ ಹುದ್ದೆಗೆ ಅರ್ಜಿ ಹಾಕಿಕೊಂಡೆ' ಎಂದು ಹೇಳಿದ್ದಾರೆ.

ಸಾಲಿನಲ್ಲಿ ನಿಂತ ಸ್ನಾತ್ತಕೋತ್ತರ ಪದವೀಧರರು

ಸ್ನಾತಕೋತ್ತರ ಪದವಿಗಳಿಸಿದ ಅನೇಕ ಯುವಕ-ಯುವತಿಯರು ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಕೆ.ಆರ್‌.ಪೇಟೆ ತಾಲ್ಲೂಕು ಮತ್ತಿಕೆರೆ ಗ್ರಾಮದ ಸುಮಾ, ಮೈಸೂರು ವಿಶ್ವವಿದ್ಯಾಲಯದಲ್ಲಿ ಇತಿಹಾಸ ಎಂಎ ಓದಿದವರು. ಬಿಇಡಿ ಕೂಡ ಪೂರೈಸಿ ಶಿಕ್ಷಕಿಯಾಗಲು ಆಸೆ ಪಟ್ಟಿದ್ದರು.

'ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದೆ. ಅಲ್ಲಿ ಮೂರು ತಿಂಗಳಾದರೂ ಸಂಬಳ ಕೊಡುತ್ತಿರಲಿಲ್ಲ. ಹೈರಾಣಾಗಿ ಹೋಗಿದ್ದೆ. ಇದು ಸರ್ಕಾರಿ ಕೆಲಸವಾಗಿರುವ ಕಾರಣ ಇಲ್ಲಿಗೆ ಬಂದಿದ್ದೇನೆ' ಎಂದು ಸುಮಾ ಹೇಳಿದ್ದಾರೆ.

ಕೆ.ಆರ್‌.ಪೇಟೆ ತಾಲ್ಲೂಕು ಕುಪ್ಪಹಳ್ಳಿ ಗ್ರಾಮದ ಕೆ.ಸಿ.ದೇವರಾಜು ಭೂಗೋಳ ವಿಜ್ಞಾನದಲ್ಲಿ ಎಂಎಸ್‌ಸಿ ಪದವಿ ಪಡೆದಿದ್ದಾರೆ. ಹಲವು ಸ್ಪರ್ಧಾತ್ಮಕ ಪದವಿ ಪರೀಕ್ಷೆ ಎದುರಿಸಿದ್ದಾರೆ. 'ಭೂಗೋಳ ವಿಜ್ಞಾನದಲ್ಲಿ ಅವಕಾಶಗಳು ಕಡಿಮೆ. ಹೆಚ್ಚಿನ ಕಾಲೇಜುಗಳಲ್ಲಿ ಐಚ್ಚಿಕ ವಿಷಯವಾಗಿ ಭೂಗೋಳ ವಿಜ್ಞಾನ ಇಲ್ಲ. ಹೀಗಾಗಿ ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದೆ. ಜೀವನ ನಿರ್ವಹಣೆಗೆ ಕೆಲಸವೊಂದು ಬೇಕಷ್ಟೆ' ಎಂಬ ಹೇಳಿಕೆ ನೀಡಿದ್ದಾರೆ.

ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದ ಸಿದ್ದರಾಜು ಮೈಸೂರು ವಿ.ವಿಯಲ್ಲಿ ಸಮಾಜಶಾಸ್ತ್ರದಲ್ಲಿ ಎಂಎ ಪೂರೈಸಿದ್ದಾರೆ. ಹುಣಸೂರಿನ ಮಧುಕುಮಾರ್‌ ಇತಿಹಾಸದಲ್ಲಿ ಎಂಎ, ಮಳವಳ್ಳಿ ತಾಲ್ಲೂಕಿನ ಪಿ.ಎಸ್‌.ಅನಿಲ್‌ಕುಮಾರ್‌ ಎಂಕಾಂ, ಕುಣಿಗಲ್‌ ತಾಲ್ಲೂಕಿನ ಅಮೃತೂರು ಗ್ರಾಮದ ಶ್ರುತಿ ಬಿಇಡಿ, ಕೆ.ಆರ್‌.ನಗರದ ಶೋಭಾ ಎಂಕಾಂ, ತುಮಕೂರಿನ ರಮೇಶ್‌ ಬಿಬಿಎಂ, ಮಂಡ್ಯದ ಯೋಗಲಕ್ಷ್ಮಿ ಡಿಪ್ಲೊಮಾ ಶಿಕ್ಷಣ ಪಡೆದಿದ್ದಾರೆ.

ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಕಂಪೆನಿಯೊಂದರಲ್ಲಿ ವ್ಯವಸ್ಥಾಪಕ (ಕ್ವಾಲಿಟಿ ಮ್ಯಾನೇಜರ್‌) ಆಗಿರುವ ಮಂಡ್ಯದ ಪಿ.ಸುದರ್ಶನ್‌ ಡಿಪ್ಲೊಮಾ ಓದಿದವರು. ನಾಲ್ಕೈದು ವರ್ಷಗಳ ಅನುಭವ ಹೊಂದಿದ್ದು, ರಾತ್ರಿ ಕಾವಲುಗಾರ ಹುದ್ದೆಯ ಪರೀಕ್ಷೆಗೆ ಹಾಜರಾಗಿದ್ದರು.

ಅಧಿಕಾರಿಗಳ ಮಾತು

'ಸೋಮವಾರ ನಡೆದ ಅಡುಗೆ ಸಹಾಯಕ ಹುದ್ದೆ ಪರೀಕ್ಷೆಯಲ್ಲೂ ಬಿಇ ಓದಿದ್ದವರು ಬಂದಿದ್ದರು. ಇಲ್ಲಿ ಭಾಗವಹಿಸಿದ್ದ ಶೇ 90ರಷ್ಟು ಅಭ್ಯರ್ಥಿಗಳು ಉನ್ನತ ವಿದ್ಯಾಭ್ಯಾಸ ಮಾಡಿದ್ದಾರೆ. ಕೆಲವರು ಹೇಳಿಕೊಳ್ಳಲು ಅಂಜುತ್ತಿದ್ದಾರೆ. ಎಲ್ಲರಿಗೂ ಉದ್ಯೋಗ ಸಿಗುವುದಿಲ್ಲ. ಜಿಲ್ಲೆಯಲ್ಲಿ 33 ಹುದ್ದೆಗಳಷ್ಟೇ ಖಾಲಿ ಇವೆ' ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸರ್ಕಾರಿ ಕೆಲಸದಲ್ಲಿ ಜೀವನ ಭದ್ರತೆ ಸಿಗುತ್ತದೆ ಎಂಬ ಕಾರಣಕ್ಕೆ ಯುವಜನರು ಸರ್ಕಾರಿ ಸೇವೆಗೆ ಸೇರಲು ಇಚ್ಛೆ ಪಡುತ್ತಿದ್ದಾರೆ. ಸಣ್ಣ ಹುದ್ದೆಯಾದರೂ ಸರಿ, ಅವರಿಗೆ ಸರ್ಕಾರಿ ಕೆಲಸವೇ ಬೇಕಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಬಿ.ಮಾಲತಿ ಹೇಳಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
Many BE holders and post graduate candidates appeared for physical test held in Mandya for group D watchmen posts.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X