ಹಿಂದುಸ್ಥಾನವು ಎಂದು ಮರೆಯದ ಭಾರತ ರತ್ನವು ನೀನಾಗು ಎಂಬ ಸಾಲಿನಂತೆ ಬದುಕಿದ್ದವರು ಮಾಜಿ ರಾಷ್ಟ್ರಪತಿ, ಭಾರತ ರತ್ನ ಡಾ.ಎಪಿಜೆ ಅಬ್ದುಲ್ ಕಲಾಂ.ಇಂದು ಕ್ಷಿಪಣಿ ಪಿತಾಮಹ ಎಂದೆನಿಸಿಕೊಂಡಿದ್ದ ಕಲಾಂರ ಜನ್ಮ ದಿನ.
ಭವ್ಯ ಭಾರತದ ಬಗ್ಗೆ ಅದೆಷ್ಟೋ ಕನಸುಗಳನ್ನು ಹೊತ್ತಿದವರು ಕಲಾಂ. ಬಡ ಕುಟುಂಬದಿಂದ ಬಂದ ಕಲಾಂ ರವರು ಶಿಕ್ಷಣದ ಮಹತ್ವವನ್ನು ಇಡೀ ಜಗತ್ತಿಗೆ ಸಾರಿದವರು. ತಮ್ಮ ಕನಸುನ್ನು ನನಸಾಗಿಸಿಕೊಳ್ಳಲು 'ಅಗ್ನಿಯ ರೆಕ್ಕೆ' (ವಿಂಗ್ಸ್ ಆಫ್ ಫೈರ್) ಗಳನ್ನು ಕಟ್ಟಿಕೊಂಡು ಕ್ಷಿಪಣಿಯಂತೆ ಮುಗಿಲಿನತ್ತ ಸಾಗಿದವರು.

ಅಕ್ಟೋಬರ್ 15, 1931ರಲ್ಲಿ ತಮಿಳುನಾಡಿನ ಪುಣ್ಯಕ್ಷೇತ್ರ ರಾಮೇಶ್ವರದಲ್ಲಿ ಜನಿಸಿದ ಆವುಲ್ ಪಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂ ಒಬ್ಬ ವಿಜ್ನಾನಿಯಾಗಿ, ವೈಜ್ನಾನಿಕ ಸಲಹೆಗಾರನಾಗಿ, ಭಾರತದ ಬಾಹ್ಯಾಕಾಶ ಸಂಶೋಧನೆಗಳ ನಾಯಕತ್ವ ವಹಿಸಿ, ಅದರಲ್ಲೂ ಅತ್ಯಾಧುನಿಕ ಕ್ಷಿಪಣಿಗಳ ಸಂಶೋಧನೆ ಹಾಗೂ ತಯಾರಿಕೆಯಲ್ಲಿ ಮಹತ್ವವಾದ ಪಾತ್ರವಹಿಸಿ ವಿಶ್ವದಲ್ಲೇ ಭಾರತದ ಹೆಸರು ಮಂಚೂಣಿಗೆ ಬರುವಂತೆ ಮಾಡಿ, ಮುಂದೆ 2002ರಿಂದ 2007ರವರೆಗೆ ಭಾರತದ 11ನೇ ರಾಷ್ಟ್ರಪತಿಯಾಗಿ ಜನ ಮೆಚ್ಚುಗೆ ಗಳಿಸಿದ ಡಾ. ಕಲಾಂ ಅವರ ಜೀವನ ಚರಿತ್ರೆ ಯಾರಿಗಾದರೂ ಪ್ರೇರಣೆ ನೀಡುವಂಥದ್ದು.
ಭಾರತದ ವಿಜ್ಞಾನ ಕ್ಷೇತ್ರದಲ್ಲಿ ದೃವತಾರೆಯಾಗಿ ಮೆರೆದ ಕಲಾಂ ರವರು ತಮ್ಮ ಕನಸಿನ ಭಾರತವನ್ನು ನಿರ್ಮಾಣ ಮಾಡುವ ಪ್ರಯತ್ನದಲ್ಲಿದ್ದರು. ಯುವಜನತೆ, ವಿಜ್ಞಾನ, ಶಿಕ್ಷಣದ ಬಗ್ಗೆ ಬಲವಾದ ನಂಬಿಕೆ ಇಟ್ಟುಕೊಂಡಿದ್ದ ಕಲಾಂರವರು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಲೇ ತಮ್ಮ ಕೊನೆಯುಸಿರು ಎಳೆದರು.
ಕಲಾಂ ನಮ್ಮೊಂದಿಗಿಲ್ಲವಾದರು ಕೂಡ ಅವರ ಚಿಂತನೆ, ಕನಸು, ಕಲ್ಪನೆ ಎಲ್ಲವು ಕೂಡ ಕೃತಿ ರೂಪದಲ್ಲಿ ವಿದ್ಯಾರ್ಥಿಗಳಿಗೆ ಇಂದಿಗೂ ಪಾಠ ಮಾಡುತ್ತಲೇ ಇವೆ. ಮಿಸೈಲ್ ಮ್ಯಾನ್ ಎಂದೇ ಖ್ಯಾತಿ ಪಡೆದ ಕಲಾಂರವರು ಉತ್ತಮ ಲೇಖಕರು ಹೌದು. ತಮ್ಮ ಜೀವನದ ಅನುಭವಗಳು, ಭಾರತ ನಿರ್ಮಾಣದ ಕನಸು, ವಿದ್ಯಾರ್ಥಿಗಳ ಬಗೆಗಿನ ಕಾಳಜಿ ಎಲ್ಲವನ್ನು ಕಲಾಂ ಪುಸ್ತಕ ರೂಪದಲ್ಲಿ ತೆರೆದಿಟ್ಟಿದ್ದಾರೆ.
ಇವರು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹತ್ತಾರು ಗ್ರಂಥಗಳನ್ನು ರಚಿಸಿದ್ದಾರೆ. 'ವಿಂಗ್ಸ್ ಆಫ್ ಫೈರ್' ಎಂಬುದು ಇವರ ಆತ್ಮಕಥೆ. ಇವರು ತಮ್ಮ 'ಇಂಡಿಯಾ ಮೈ ಡ್ರೀಮ್', 'ಇಂಡಿಯಾ 2020' ಎಂಬ ಗ್ರಂಥಗಳಲ್ಲಿ ಭವ್ಯ ಭಾರತ ನಿರ್ಮಾಣದ ಬಗ್ಗೆ ರೂಪುರೇಷೆಗಳನ್ನು ಹಾಕಿಕೊಟ್ಟಿದ್ದಾರೆ.
ಅಬ್ದುಲ್ ಕಲಾಂರ ಪುಸ್ತಕಗಳು:

ವಿಂಗ್ಸ್ ಆಫ್ ಫೈಯರ್:
ವಿಂಗ್ಸ್ ಆಫ್ ಫೈಯರ್ (ಕನ್ನಡ ಅನುವಾದ - ಅಗ್ನಿಯ ರೆಕ್ಕೆಗಳು)-ಅರುಣ್ ತಿವಾರಿಯವರ ಜತೆ ಬರೆದ ಈ ಪುಸ್ತಕವು ಇವರ ಆತ್ಮಕಥೆಯಾಗಿದ್ದು, ಇವರ ಸರಳ ಹಾಗೂ ಮಾದರಿ ಜೀವನದ ಅನೇಕ ಘಟನೆಗಳನ್ನು ಓದುಗರಿಗೆ ತೆರೆದಿಡುತ್ತದೆ. ಇಂದಿನ ಯುವ ಪೀಳಿಗೆಗೆ ಇದೊಂದು ಅನುರೂಪವಾದ ಮಾರ್ಗದರ್ಶಿ.

ಇಂಡಿಯಾ 2020:
ಈ ಪುಸ್ತಕದಲ್ಲಿ ಕಲಾಮ್ ರವರು 2020 ನೇ ಇಸವಿಯಲ್ಲಿ ಭಾವಿ ಭಾರತವು ಹೇಗಿರಬೇಕೆಂದು ತಮ್ಮ ಕನಸನ್ನು ಬಿಚ್ಚಿಡುತ್ತಾರೆ. ಯುವ ಜನಾಂಗಕ್ಕೆ ಸ್ಪೂರ್ತಿಯಾಗಬಲ್ಲಂತಹ ಕೃತಿ.

ಇಗ್ನೈಟೆಡ್ ಮೈಂಡ್ಸ್:
ಮಕ್ಕಳಿಗಾಗಿ ಬರೆದಿರುವ ಈ ಪುಸ್ತಕವು ಅವರು ಮುಂದಿನ ನಾಗರೀಕರಾಗಿದ್ದು ದೇಶವನ್ನು ಹೇಗೆ ಬೆಳಸಬಹುದು ಎಂದು ಹೇಳುತ್ತದೆ.

ಎನ್ವಿಶನಿಂಗ್ ಅನ್ ಎಂಪವರ್ಡ್ ನೇಷನ್:
ಸಾಮಾಜಿಕ ಬದಲಾವಣೆಗಾಗಿ ತಂತ್ರಜ್ಞಾನದ ಬಗ್ಗೆ ಎ.ಶಿವತನು ಪಿಳ್ಳೈರವರ ಜತೆ ಬರೆದಿರುವ ಪುಸ್ತಕ.

ಮೈ ಜರ್ನಿ:
ಇದು ಅವರ ಎರಡನೇ ಆತ್ಮಕಥೆ. ಇಲ್ಲಿ ಅವರ ಜೀವನದ ಇಷ್ಟ-ಕಷ್ಟಗಳ ಬಗ್ಗೆ ಹೇಳಿದ್ದಾರೆ. ಇದನ್ನು ವಿ.ಸತ್ಯನಾರಾಯಣ ಮೂರ್ತಿ ಪ್ರಕಟಿಸಿದ್ದಾರೆ.

ದಿ ಲೈಫ್ ಟ್ರೀ:
ಕಲಾಂ ಅವರು ಬರೀ ವಿಜ್ಞಾನಿಯಲ್ಲದೆ ಒಳ್ಳೆಯ ಕವಿಯೂ ಆಗಿದ್ದಾರೆ. ದಿ ಲೈಫ್ ಟ್ರೀ ಅವರ ಕವನ ಸಂಕಲನವಾಗಿದ್ದು ವಿಜ್ಞಾನ ಮತ್ತು ಸಾಹಿತ್ಯವನ್ನು ಒಂದು ಮಾಡುವ ಪುಸ್ತಕ ಇದು. ಇವರ ಕವನಗಳು ಇವರ ದೇಶಭಕ್ತಿ ಹಾಗು ಮಾತೃಭಕ್ತಿಯನ್ನು ತೋರಿಸುತ್ತದೆ ಮತ್ತು ದೇವರ ಮೇಲೆ ಇವರಿಗಿರುವ ಶ್ರದ್ಧಾ ಭಕ್ತಿಯನ್ನು ತೋರಿಸುತ್ತದೆ.

ಚಿಲ್ಡ್ರನ್ ಆಸ್ಕ್ ಕಲಾಂ:
ಮಕ್ಕಳು ಕಲಾಂರವರಿಗೆ ಬರೆದ ಪತ್ರಗಳ ಪ್ರಶ್ನೆಗಳಿಗೆ ಪ್ರತ್ಯುತ್ತರ ಪತ್ರಗಳ ಸಂಕಲನ ಈ ಪುಸ್ತಕ. ಇದರಲ್ಲಿ ಮಕ್ಕಳ ವಿಷಯಗಳು, ಭಾರತೀಯತೆ, ವಿದ್ಯಾಭ್ಯಾಸ, ಸಾಮಾನ್ಯ ವಿಷಯಗಳು, ವಿಜ್ಞಾನ ಮತ್ತು ಆಧ್ಯಾತ್ಮದ ಬಗ್ಗೆ ಮಕ್ಕಳಿಗೆ ತಿಳಿಸುತ್ತದೆ.