ಇದು ಕೇವಲ ಗ್ರಾಮವಲ್ಲ, ಗ್ರಾಮ ಗ್ರಂಥಾಲಯ!

Posted By:

ಗ್ರಾಮಗಳಲ್ಲಿ ಗ್ರಂಥಾಲಯಗಳಿರಬೇಕು ಎನ್ನುವುದು ಎಲ್ಲೆಡೆ ಇರುವ ಸಾಮಾನ್ಯ ಸಂಗತಿ ಆದರೆ ಗ್ರಾಮವೇ ಗ್ರಂಥಾಲಯವಾದರೇ.. ಅಬ್ಬಾ ಊಹಿಸಿದರೆ ಸಾಕು ಕಣ್ಣಮುಂದೆ ಬರಿ ಪುಸ್ತಕದ ಸಾಲುಗಳೆ ಕಾಣುತ್ತವೆ. ಆದರೆ ಇಲ್ಲೊಂದು ಗ್ರಾಮ ಊಹೆಗೂ ಮೀರಿ ಪುಸ್ತಕಗಳಿಂದ ತುಂಬಿ ಹೋಗಿದೆ. ಅಲ್ಲದೇ ಭಾರತದ ಮೊದಲ ಗ್ರಾಮ ಗ್ರಂಥಾಲಯ ಎಂಬ ಹಿರಿಮೆಗೆ ಪಾತ್ರವಾಗಿದೆ.

ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಭಿಲರ್ ಗ್ರಾಮ ಪುಸ್ತಕದ ಸಂಗ್ರಹದ ಮೂಲಕ ಇಡೀ ದೇಶದ ಗಮನ ಸೆಳೆದಿದೆ. ಮರಾಠಿ ಪುಸ್ತಕಗಳಿಂದ ತುಂಬಿ ಹೋಗಿರುವ ಈ ಗ್ರಾಮಕ್ಕೆ ಪುಸ್ತಕಾಂಚೆಗಾವ್ ಎಂದು ಹೆಸರಿಡಲಾಗಿದೆ. ಸ್ಟ್ರಾಬೆರ್ರಿ ಬೆಳೆಯಿಂದ ಖ್ಯಾತಿ ಹೊಂದಿದ್ದ ಈ ಗ್ರಾಮ ಈಗ ಪುಸ್ತಕ ಗ್ರಾಮವಾಗಿ ಹೊರಹೊಮ್ಮಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ಪುಸ್ತಕ ಗ್ರಾಮವನ್ನು ಲೋಕಾರ್ಪಣೆ ಮಾಡಿದ್ದಾರೆ. ಪುಸ್ತಕಗಳ ಗ್ರಾಮವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಫಡ್ನವಿಸ್, ದೇಶದ ಸಾಮಾಜಿಕ ಮತ್ತು ಸಾಂಸ್ಕøತಿಕ ಸಾಧನೆಯಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಿದೆ ಎಂದು ಬಣ್ಣಿಸಿದ್ದಾರೆ.

15000 ಪುಸ್ತಕಗಳು

ಭಿಲರ್ ಗ್ರಾಮದಲ್ಲಿ 15000 ಸಾವಿರಕ್ಕೂ ಅಧಿಕ ಪುಸ್ತಕಗಳು ಲಭ್ಯವಿದ್ದು ಮುಂದಿನ ದಿನಗಳಲ್ಲಿ ಇದನ್ನು ಒಂದುವರೆ ಲಕ್ಷಕ್ಕೆ ಕೊಂಡೊಯ್ಯುವ ಯೋಜನೆಯಲ್ಲಿದ್ದಾರೆ ಗ್ರಾಮಸ್ಥರು. ಈ ಗ್ರಾಮದಲ್ಲಿ ಸದ್ಯ ಮರಾಠಿ ಪುಸ್ತಕಗಳ ದೊಡ್ಡ ಬಂಡಾರವೇ ಇದ್ದು ಪುಸ್ತಕ ಪ್ರಿಯರಿಗೆ ಅಕ್ಷರ ಗಂಗೆಯನ್ನೇ ಹರಿಸುತ್ತಿದೆ. ಮುಂಬರುವ ದಿನಗಳಲ್ಲಿ ಇಂಗ್ಲಿಷ್ ಮತ್ತು ಹಿಂದಿ ಪುಸ್ತಕಗಳನ್ನು ಅಳವಡಿಸಲು ಚಿಂತನೆ ನಡೆದಿದೆ.

ಭಾರತದ ಮೊದಲ ಪುಸ್ತಕ ಗ್ರಾಮ

ಕೇವಲ ಪುಸ್ತಕದ ಜೋಡಣೆಯಲ್ಲದೇ ಈ ಗ್ರಂಥಾಲಯವನ್ನು ಅತ್ಯಾಕರ್ಷಕವಾಗಿ ರೂಪಿಸಲು ಸುಮಾರು 25 ಕಲಾವಿದರು ತಮ್ಮ ಕಲಾಪ್ರೌಢಿಮೆಯನ್ನು ಧಾರೆ ಎರೆದಿದ್ದಾರೆ.  ಈ ಗ್ರಂಥಾಲಯ ಈಗ ಗ್ರಾಮದ ಆಕರ್ಷಣೆಯ ಕೇಂದ್ರ ಬಿಂದುವೂ ಆಗಿದೆ.

ಬ್ರಿಟನ್‍ನ ವೇಲ್ಸ್ ಪಟ್ಟಣದಲ್ಲಿ ಹೇ-ಆನ್-ವೇ ಎಂಬ ಪರಿಕಲ್ಪನೆಯಿಂದ ಪ್ರೇರಿತವಾಗಿರುವ ಈ ಗ್ರಂಥಾಲಯ ಗ್ರಾಮದ ಹಿಂದಿರುವುದು ಶಿಕ್ಷಣ ಸಚಿವ ವಿನೋದ್‍ತಾವ್ಡೆ. ಮರಾಠಿ ಭಾಷೆ, ಸಾಹಿತ್ಯವನ್ನು ಮತ್ತಷ್ಟು ವೃದ್ಧಿಗೊಳಿಸುವ ಪ್ರಯತ್ನ ಇದಾಗಿದ್ದು, ಈ ಯೋಜನೆ ದೇಶಕ್ಕೆ ಮಾದರಿಯಾಗಿದೆ.

ಸಾಹಿತ್ಯ, ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸೇರಿದಂತೆ ಎಲ್ಲಾ ಕ್ಷೇತ್ರಗಳ ಪುಸ್ತಕಗಳು ಒಂದೇ ಸೂರಿನಡಿ ಲಭಿಸುತ್ತಿವೆ. ಈ ಮೂಲಕ ಮರಾಠಿ ಭಾಷೆಯ ಸಂರಕ್ಷಣೆ ಮತ್ತು ಉತ್ತೇಜನಕ್ಕೆ ನೆರವಾಗಿದೆ ಎಂದು ವಿನೋದ್‍ತಾವ್ಡೆ ಹೆಮ್ಮೆಯಿಂದ ಹೇಳುತ್ತಾರೆ.

2 ಕಿ.ಮೀ. ವಿಸ್ತಾರವಿರುವ ಈ ಗ್ರಾಮವು ಪಂಚಗಣಿ ಗಿರಿಧಾಮದಿಂದ ಕೇವಲ 8 ಕಿ.ಮೀ. ದೂರದಲ್ಲಿದೆ. ಶಿಕ್ಷಣದಲ್ಲಿ ಮಾದರಿ ಗ್ರಾಮವೆಂದು ಹೆಸರಾಗಿರುವ ಭಿಲರ್‍ನಲ್ಲಿ ಐದು ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಮರಾಠಿ ಭಾಷೆಯ 15 ಸಾವಿರಕ್ಕೂ ಹೆಚ್ಚು ಅಪರೂಪದ ಪುಸ್ತಕಗಳು ಮತ್ತು ನಿಯತಕಾಲಿಕೆಗಳು ಒಂದೇ ವೇದಿಕೆಯಲ್ಲಿ ಲಭಿಸುತ್ತಿರುವುದು ವಿಶೇಷ.

ಸಾಹಿತಿಗಳು, ಸಾಹಿತ್ಯಾಸಕ್ತರು, ಪುಸ್ತಕ ಪ್ರಿಯರು, ಮಕ್ಕಳು, ಮುದುಕರು ಹೀಗೆ ಎಲ್ಲರನ್ನು ಇದು ತನ್ನತ್ತ ಕೈಬೀಸಿ ಕರೆಯುತ್ತಿದೆ. ಭಿಲರ್ ಗ್ರಾಮದ ಪುಸ್ತಕ ಬಂಡಾರವನ್ನು ಕಣ್ತುಂಬಿಕೊಳ್ಳಬೇಕೆಂದರೆ ನೀವು ಗ್ರಾಮಕ್ಕೆ ಭೇಟಿ ನೀಡಲೇಬೇಕು.

English summary
A hamlet in Satara district of Maharashtra, popular for its strawberries is now has the tag of India's first 'village of books'.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia