ಐಐಎಂ (ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್) ಮತ್ತು ಬ್ಯುಸಿನೆಸ್ ಸ್ಕೂಲ್‌ಗಳ ಪ್ರವೇಶಕ್ಕಾಗಿ ನಡೆಸುವ ಸಾಮಾನ್ಯ ದಾಖಲಾತಿ ಪರೀಕ್ಷೆ (ಕ್ಯಾಟ್) ನವೆಂಬರ್ 24 ರಂದು ಅಂದರೆ ಇಂದು ದೇಶಾದ್ಯಂತ ಸುಸೂತ್ರವಾಗಿ ನಡೆಯಿತು. ಆದರೆ ಈ ಬಾರಿ ಪರೀಕ್ಷೆ ಬರೆದ ಅಭ್ಯರ್ಥಿಗಳ ಸಂಖ್ಯೆ ಕೊಂಚ ಇಳಿಮುಖ ಕಂಡಿತ್ತು.

ಇಂದು ನಡೆದ ಪರೀಕ್ಷೆಯಲ್ಲಿ ಮೂವತ್ತೊಂದು ಸಾವಿರಕ್ಕೂ ಅಧಿಕ ಮಂದಿ ಪರೀಕ್ಷೆಗೆ ಗೈರು ಹಾಜರಾಗಿದ್ದರು. ಈ ಬಾರಿ ಒಟ್ಟು 2,44,169 ಮಂದಿ ಪರೀಕ್ಷೆ ತೆಗೆದುಕೊಂಡಿದ್ದು, ಅದರಲ್ಲಿ 34,253 ಮಂದಿ ಪರೀಕ್ಷೆಗೆ ಹಾಜರಾಗಿಲ್ಲ ಎಂದು ಐಐಎಂ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಪರೀಕ್ಷೆ ಸುಸೂತ್ರ:
ರಾಜ್ಯದಲ್ಲಿಯೂ ಕ್ಯಾಟ್ ಪರೀಕ್ಷೆ ಸುಸೂತ್ರವಾಗಿ ನಡೆದಿರುವ ಬಗ್ಗೆ ವರದಿಯಾಗಿದೆ. ಬೆಳಿಗ್ಗೆ 9ರಿಂದ ಮಧ್ಯಾಹ್ನ 12 ಹಾಗೂ ಮಧ್ಯಾಹ್ನ 2.30ರಿಂದ ಸಂಜೆ 5.30ರವರೆಗೆ ಎರಡು ಪರೀಕ್ಷೆಗಳು ನಡೆದವು. ಈ ಬಾರಿಯ ಕ್ಯಾಟ್ ಪರೀಕ್ಷೆಯನ್ನು ಐಐಎಂ-ಕೊಜಿಕೋಡ್ ಆಯೋಜಿಸಿತ್ತು. ದೇಶದ 376 ಪರೀಕ್ಷಾ ಕೇಂದ್ರಗಳಲ್ಲಿ ಏಕಕಾಲಕ್ಕೆ ಪರೀಕ್ಷೆ ಆಯೋಜಿಸಲಾಗಿತ್ತು. ದೇಶದ 20 ಐಐಎಂ ಹಾಗೂ ಎಫ್‌ಎಂಎಸ್, ಎಸ್‌ಪಿಜೆಐಎಂಆರ್, ಎಂಡಿಎಸ್, ಎನ್ಐಟಿಐಇ, ಟಿಎಪಿಎಂಐ ಸೇರಿ ದೇಶದ ಪ್ರಮುಖ 100 ಬ್ಯುಸಿನೆಸ್ ಸ್ಕೂಲ್‌ಗಳ ಪ್ರವೇಶಕ್ಕೆ ಕ್ಯಾಟ್ ಮೆರಿಟ್ ಪರಿಗಣಿಸಲಾಗುತ್ತದೆ.
ಸಿಎಟಿ ಪರೀಕ್ಷೆ:
ಸಿಎಟಿ ಅಥವಾ ಸಾಮಾನ್ಯ ಪ್ರವೇಶ ಪರೀಕ್ಷೆಯು ದೇಶದಲ್ಲಿ ನಡೆಯುವ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದೆನಿಸಿದೆ. ಪ್ರತಿಷ್ಠಿತ ಐಐಎಂಗಳು ಮತ್ತು ಎಫ್‌ಎಂಎಸ್, ಎಂಡಿಐ, ಎಸ್‌ಪಿ ಜೈನ್, ಐಐಟಿಗಳು ಸೇರಿದಂತೆ ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾವಹಾರಿಕ (ಬಿಸಿನೆಸ್) ಪದವಿಗೆ ಪ್ರವೇಶ ಪಡೆಯಲು ಸಿಎಟಿ ಅರ್ಹತೆ ಕಡ್ಡಾಯ.
ಒಟ್ಟು ಎರಡು ವಿಭಾಗಗಳಲ್ಲಿ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಲಾಗಿರುತ್ತದೆ. ಮೊದಲ ವಿಭಾಗದಲ್ಲಿ ಗುಣಾತ್ಮಕ ಸಾಮರ್ಥ್ಯ ಮತ್ತು ಮಾಹಿತಿ ವಿಶ್ಲೇಷಣೆ, ಇನ್ನೊಂದರಲ್ಲಿ ಮೌಖಿಕ ಸಾಮರ್ಥ್ಯ ಮತ್ತು ವಿಶ್ಲೇಷಣಾ ಸಾಮರ್ಥ್ಯದ ಪರೀಕ್ಷೆ ನಡೆಯುತ್ತದೆ.
ಎಂಬಿಎ ಕಲಿಕೆಗೆ ಇದು ಪ್ರವೇಶ ಪರೀಕ್ಷೆ ಆಗಿರುವುದರಿಂದ ಗುಣಾತ್ಮಕ ಸಾಮರ್ಥ್ಯ, ವಿಶ್ಲೇಷಣೆ ಮತ್ತು ತಾರ್ಕಿಕ ಮನೋಭಾವ, ಮಾಹಿತಿ ವಿಶ್ಲೇಷಣೆ ಮತ್ತು ಮೌಖಿಕ ಸಂವಹನ ಕ್ಷೇತ್ರದಲ್ಲಿ ಅಭ್ಯರ್ಥಿ ದಕ್ಷನಾಗಿರಬೇಕಾಗುತ್ತದೆ. ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲು ಕ್ಯಾಟ್ ಪರೀಕ್ಷೆ ಸಹಕಾರಿಯಾಗಲಿದೆ.