ಕೊರೋನಾ ಸಮಸ್ಯೆಯಿಂದಾಗಿ ಮುಂದೂಡಲಾಗಿದ್ದ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಇದೇ ಜುಲೈ 1ರಿಂದ ನಡೆಸುವುದಾಗಿ ಸಿಬಿಎಸ್ಇ ತಿಳಿಸಿತ್ತು. ಆದರೆ ನಿನ್ನೆ 10 ಮತ್ತು 12 ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡುವುದಾಗಿ ಸಿಬಿಎಸ್ಇ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿತ್ತು.
ಇದಕ್ಕೆ ಸಂಬಂಧಿಸಿದಂತೆ 10ನೇ ತರಗತಿ ಮತ್ತು 12ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿ ಅಧಿಸೂಚನೆ ಹೊರಡಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಅನುಮತಿ ನೀಡಿದೆ. ಸಿಬಿಎಸ್ಇ ಈಗಾಗಲೇ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಿರುವ ಪರೀಕ್ಷೆಗಳಲ್ಲಿ ಪಡೆದಿರುವ ಅಂಕಗಳು ಮತ್ತು ಆಂತರಿಕ ಮೌಲ್ಯಮಾಪನ ಆಧಾರದ ಮೇಲೆ ಮೌಲ್ಯಮಾಪನ ಮಾಡಿ ಫಲಿತಾಂಶ ನೀಡಲಿದೆ. ಸಿಬಿಎಸ್ಇ ಫಲಿತಾಂಶವು ಜುಲೈ 15ರೊಳಗೆ ಪ್ರಕಟವಾಗಲಿದೆ.
ನಾವೆಲ್ ಕೊರೋನಾ ವೈರಸ್ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಹತ್ತು ಮತ್ತು ಹನ್ನೆರಡೇ ತರಗತಿಯ ಉಳಿದ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ಕೊರೋನಾ ಸಮಸ್ಯೆ ನಿಯಂತ್ರಣಕ್ಕೆ ಬಂದ ಬಳಿಕ ಮಂಡಳಿ ನಡೆಸುವ ಪರೀಕ್ಷೆಯನ್ನು ವಿದ್ಯಾರ್ಥಿಗಳು ತೆಗೆದುಕೊಳ್ಳಬಹುದು ಆದರೆ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಈ ಆಯ್ಕೆ ಇರುವುದಿಲ್ಲ ಎಂದು ತಿಳಿಸಿದೆ.