ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು (ಸಿಬಿಎಸ್‌ಇ) ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯ ಪರೀಕ್ಷಾ ಶುಲ್ಕವನ್ನು ಏರಿಕೆ ಮಾಡಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಶುಲ್ಕವು ಹೆಚ್ಚು ಏರಿಕೆಯಾಗಿದ್ದು, 50/- ರೂ. ಇದ್ದದ್ದು 1200/- ರೂ ಆಗಿದೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಶುಲ್ಕವು 750/- ರೂ ನಿಂದ 1,500/- ರೂ ವರೆಗೆ ಹೆಚ್ಚಿಸಲಾಗಿದೆ.
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಈ ಮುಂಚೆ ಐದು ವಿಷಯಗಳಿಗೆ 50/- ರೂ ಶುಲ್ಕವನ್ನು ಪಾವತಿಸಬೇಕಿತ್ತು. ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಐದು ವಿಷಯಗಳಿಗೆ 750/- ರೂ ಶುಲ್ಕವನ್ನು ಪಾವತಿಸಬೇಕಿತ್ತು. ಆದರೆ ಈಗ ಸಿಬಿಎಸ್‌ಸಿ ಪರೀಕ್ಷಾ ಶುಲ್ಕವನ್ನು ಏರಿಕೆ ಮಾಡಿರುತ್ತದೆ.
ಸಾಮಾನ್ಯವಾಗಿ 9ನೇ ತರಗತಿಯಲ್ಲಿದ್ದ ವಿದ್ಯಾರ್ಥಿಗಳು10ನೇ ತರಗತಿಗೆ ಮತ್ತು 11ನೇ ತರಗತಿಯಲ್ಲಿದ್ದ ವಿದ್ಯಾರ್ಥಿಗಳು 12ನೇ ತರಗತಿಯ ಪರೀಕ್ಷೆಗೆ ನೊಂದಣಿ ಮಾಡಿಕೊಳ್ಳಬೇಕಿರುತ್ತದೆ. ಸಿಬಿಎಸ್‌ಇ ಮಾನ್ಯತೆ ಪಡೆದ ಶಾಲೆಗಳು ಈಗಾಗಲೇ ಹಳೆಯ ಶುಲ್ಕದ ಅನ್ವಯ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಲ್ಲಿ, ಪರಿಷ್ಕೃತ ಶುಲ್ಕದ ಮೊತ್ತವನ್ನು ವಿದ್ಯಾರ್ಥಿಗಳಿಂದ ಸಂಗ್ರಹಿಸಬೇಕೆಂದು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ.
ಈ ಮುಂಚೆ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಹೆಚ್ಚುವರಿ ವಿಷಯಕ್ಕೆ ಯಾವುದೇ ಶುಲ್ಕವನ್ನು ಪಾವತಿಸಬೇಕಿರಲಿಲ್ಲ. ಆದರೆ ಈಗ 300/- ರೂ ಶುಲ್ಕವನ್ನು ಪಾವತಿಸಬೇಕಿರುತ್ತದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳು 150/- ರೂ ಪಾವತಿಸುವಲ್ಲಿ ಈಗ 300/- ರೂ ಅನ್ನು ಪಾವತಿಸಬೇಕಾಗಿರುತ್ತದೆ. ಹಾಗೆಯೇ ಮೈಗ್ರೇಷನ್ ಶುಲ್ಕವನ್ನು 150/- ರಿಂದ 350/- ರೂ ಗೆ ಏರಿಕೆ ಮಾಡಲಾಗಿದೆ ಎಂದು ಸಿಬಿಎಸ್‌ಇ ಹೇಳಿದೆ.
ವಿದೇಶದಲ್ಲಿರುವ ಸಿಬಿಎಸ್‌ಇ ಶಾಲೆಗಳ ವಿದ್ಯಾರ್ಥಿಗಳು ಈ ಮುಂಚೆ ಐದು ವಿಷಯಗಳಿಗೆ 5000/-ರೂ ಪಾವತಿಸಬೇಕಿತ್ತು, ಆದರೆ ಈಗ ಐದು ವಿಷಯಗಳಿಗೆ 10,000/- ರೂ ಪಾವತಿಸಬೇಕು. ಹೆಚ್ಚುವರಿ ವಿಷಯಕ್ಕೆ 1,000/- ರೂ. ಬದಲು 2,000/- ಪಾವತಿಸಬೇಕಾಗುತ್ತದೆ.
ವಿದ್ಯಾರ್ಥಿಗಳು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೊನೆಯ ದಿನಾಂಕ ಅಕ್ಟೋಬರ್ 15, 2019 ಆಗಿರುತ್ತದೆ. ತಡವಾಗಿ ನೊಂದಣಿ ಮಾಡಿಕೊಳ್ಳುವ ವಿದ್ಯಾರ್ಥಿಗಳು ಅಕ್ಟೋಬರ್ 16 ರಿಂದ ಅಕ್ಟೋಬರ್ 31, 2019 ರೊಳಗೆ 2000/-ರೂ ದಂಡ ಶುಲ್ಕವನ್ನು ಪಾವತಿಸುವ ಮೂಲಕ ನೊಂದಣಿ ಮಾಡಿಕೊಳ್ಳಬಹುದು.