ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸಗಳ ಪ್ರವೇಶಕ್ಕಾಗಿ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ಭಾನುವಾರ ಆಯೋ ಜಿಸಿದ್ದ ನೀಟ್ ಪರೀಕ್ಷೆಯು ಅತ್ಯಂತ ಕಟ್ಟುನಿಟ್ಟಿನಿಂದ ನಡೆಯಿತು.
65 ಸಾವಿರ ವೈದ್ಯಕೀಯ ಮತ್ತು 25 ಸಾವಿರ ದಂತ ವೈದ್ಯಕೀಯ ಸೀಟುಗಳಿಗೆ ದೇಶದ 103 ನಗರಗಳಲ್ಲಿ 2,200 ಪರೀಕ್ಷಾ ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ನಡೆದಿದ್ದು, ಒಟ್ಟು 11,35,104 ಅಭ್ಯರ್ಥಿಗಳು ಹಾಜರಾಗಿದ್ದರು. ಇದರಲ್ಲಿ 1,522 ಅನಿವಾಸಿ ಭಾರತೀಯ ಹಾಗೂ 613 ವಿದೇಶಿ ವಿದ್ಯಾರ್ಥಿಗಳು ಸೇರಿದ್ದಾರೆ.
ರಾಜ್ಯದಲ್ಲಿ ನೀಟ್ ಪರೀಕ್ಷೆ
ರಾಜ್ಯದ 8 ಜಿಲ್ಲೆಯ 156 ಕೇಂದ್ರಗಳಲ್ಲಿ 77,393 ಅಭ್ಯರ್ಥಿಗಳು ಪರೀಕ್ಷೆ ಬರೆದರು. ಬೆಂಗಳೂರು, ಬೆಳಗಾವಿ, ಗುಲ್ಬರ್ಗ, ಮಂಗಳೂರು, ಹುಬ್ಬಳ್ಳಿ, ಮೈಸೂರು, ದಾವಣಗೆರೆ ಮತ್ತು ಉಡುಪಿ ಕೇಂದ್ರಗಳಲ್ಲಿ ಪರೀಕ್ಷೆಯು ನಡೆಯಿತು.
2013ರಲ್ಲಿ ಮೊದಲ ಬಾರಿಗೆ ನೀಟ್ ಪರೀಕ್ಷೆ ನಡೆಸಲಾಗಿತ್ತು. ಇದಾದ ನಂತರ ನಿಂತಿದ್ದ ಪರೀಕ್ಷೆಯನ್ನು 2016ರಲ್ಲಿ ಮತ್ತೆ ಪುನರಾರಂಭಿಸಲಾಗಿತ್ತು. 2016ರಲ್ಲಿ ಎರಡು ಹಂತದಲ್ಲಿ ಪರೀಕ್ಷೆ ನಡೆಸಲಾಗಿತ್ತು. ಆದರೆ ಈ ಬಾರಿ ಒಂದೇ ಹಂತದಲ್ಲಿ ಪರೀಕ್ಷೆ ನಡೆಸಲಾಗಿದೆ.
ಕಟ್ಟುನಿಟ್ಟಿನ ನೀಟ್
ನೀಟ್ ಪರೀಕ್ಷೆಯು ಸಾಕಷ್ಟು ಕಟ್ಟೆಚ್ಚರದಿಂದ ನಡೆದಿದ್ದು, ಪರೀಕ್ಷಾ ಕೊಠಡಿ ಒಳಗೆ ಪ್ರವೇಶಿಸುವಾಗಲೇ ವಿದ್ಯಾರ್ಥಿಗಳು ಪರದಾಡಿದರು. ಹಲವು ಪರೀಕ್ಷಾ ಕೇಂದ್ರಗಳಲ್ಲಿ ಸಿಬಿಎಸ್ಇ ನಿಯಮಗಳನ್ನು ತಿಳಿಯದ ಅನೇಕ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಪಡಬೇಕಾಯಿತು.
ಡ್ರೆಸ್ ಕೋಡ್
ಪರೀಕ್ಷೆಯಲ್ಲಿ ಅಕ್ರಮ ತಡೆಯಲು ಸಿಬಿಎಸ್ಇ ಮುಂಚಿತವಾಗಿಯೇ ವಿದ್ಯಾರ್ಥಿಗಳಿಗೆ ಉಡುಪಿನ ಬಗ್ಗೆ ಮಾಹಿತಿ ನೀಡಿತ್ತು. ಆದರೆ ಅದನ್ನು ನಿರ್ಲಕ್ಷಿಸಿದ ಅನೇಕರು ತೊಂದರೆ ಅನುಭವಿಸಬೇಕಾಯಿತು. ಪರೀಕ್ಷಾ ಕೊಠಡಿಯಲ್ಲಿ ಅರ್ಧ ತೋಳಿನ ಅಂಗಿ ಮಾತ್ರ ಧರಿಸಬೇಕೆಂಬ ನಿಯಮವಿದ್ದ ಕಾರಣ, ಉದ್ದ ತೋಳಿನ ಅಂಗಿಯ ತೋಳನ್ನೇ ಕತ್ತರಿಸಿಕೊಂಡ ಘಟನೆ ಚೆನ್ನೈನಲ್ಲಿ ನಡೆದಿದೆ.
ಆಭರಣಗಳಾದ ಕಿವಿಯೋಲೆ, ಮೂಗುತಿಯಂಥ ಮತ್ತು ಹೇರ್ ಪಿನ್‌ಗಳನ್ನು ತೆಗೆದು ಪರೀಕ್ಷೆ ನಡೆಸಲಾಗಿದೆ. ಪರೀಕ್ಷಾ ಕೇಂದ್ರದಲ್ಲೇ ಪೆನ್ನುಗಳನ್ನು ಒದಗಿಸಲಾಗುವುದು ಎಂದು ಮಂಡಳಿ ಹೇಳಿದ್ದರೂ ಪೆನ್ನು, ಪೆನ್ಸಿಲ್‌ಗಳನ್ನು ಅದನ್ನು ಕೊಠಡಿಯ ಹೊರಗಿಟ್ಟು ಪರೀಕ್ಷೆ ಬರೆದರು. ಇನ್ನು ಕೆಲವೆಡೆ ಬೂಟುಗಳನ್ನು ತೆಗೆದು ಬರಿಗಾಲಲ್ಲಿ ಪರೀಕ್ಷೆ ಬರೆಯಲಾಗಿದೆ.
ಆಧಾರ್ ಮತ್ತು ಬರಹ ದೃಢೀಕರಣ
ಬದಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದನ್ನು ತಡೆಯಲು ಎಲ್ಲ ವಿದ್ಯಾರ್ಥಿಗಳಿಗೂ ಆಧಾರ್ ಕಾರ್ಡ್ ತರುವುದನ್ನು ಕಡ್ಡಾಯಗೊಳಿಸಲಾಗಿತ್ತು. ಅಷ್ಟೇ ಅಲ್ಲದೇ 'ಎಲ್ಲ ಪ್ರಶ್ನೆಗಳಿಗೆ ನಾನೇ ಉತ್ತರಿಸಿದ್ದೇನೆ. ಇದು ನನ್ನದೇ ಕೈ ಬರಹ ಎಂದು ದೃಢೀಕರಿಸುತ್ತೇನೆ' ಎಂದು ಒಎಂಆರ್ ಶೀಟ್ನಲ್ಲಿ ಬರೆದು ವಿದ್ಯಾರ್ಥಿಗಳು ಸಹಿ ಮಾಡಬೇಕಿತ್ತು.
ಪ್ರಶ್ನೆಪತ್ರಿಕೆಯಲ್ಲಿ ಕನ್ನಡ
ಇದೇ ಮೊದಲ ಬಾರಿಗೆ ಇಂಗ್ಲಿಷ್ ಹಾಗೂ ಕನ್ನಡ ಸೇರಿ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಪ್ರಶ್ನೆಪತ್ರಿಕೆ ಮುದ್ರಿಸಲಾಗಿತ್ತು. ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳನ್ನ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಇಂಗ್ಲಿಷ್, ಹಿಂದಿ ಮತ್ತು ಕನ್ನಡದ ಭಾಷೆಯ ಪ್ರಶ್ನೆಪತ್ರಿಕೆ ನೀಡಲಾಗಿತ್ತು.
ನೀಟ್ ಪರೀಕ್ಷೆ ಸುಲಭವಲ್ಲ
ಈ ಬಾರಿಯ ನೀಟ್ ಪರೀಕ್ಷೆ ನಿರೀಕ್ಷೆಯಂತೆ ಸಾಕಷ್ಟು ಕಷ್ಟದ ಪ್ರಶ್ನೆಗಳಿಂದ ಕೂಡಿತ್ತು. ಎನ್‌ಸಿಇಆರ್‌ಟಿ ಪಠ್ಯಕ್ರಮದ ಪ್ರಕಾರ ಪ್ರಶ್ನೆಗಳನ್ನು ಕೇಳಲಾಗಿದ್ದು, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ಪ್ರಶ್ನೆಪತ್ರಿಕೆಗಳು ತುಂಬಾ ಕಷ್ಟವಾಗಿದ್ದವು ಎಂದು ವಿದ್ಯಾರ್ಥಿಗಳು ಮತ್ತು ಕೆಲವು ಶಿಕ್ಷಕರು ತಿಳಿಸಿದರು. ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಯು ಒಂದು ಸವಾಲಿನ ರೀತಿ ಪರಿಣಮಿಸಿತ್ತು.
ಸದ್ಯದಲ್ಲೇ ಅಧಿಕೃತ ಉತ್ತರ ಪತ್ರಿಕೆಯನ್ನು ಸಿಬಿಎಸ್ಇ ಬಿಡುಗಡೆ ಮಾಡಲಿದ್ದು ಜೂನ್ 8ರಂದು ಫಲಿತಾಂಶ ಹೊರ ಬೀಳಲಿದೆ.