ಶಾಲಾ ಸಿಬ್ಬಂದಿಗಳಿಗೆ ಮನೋಮಾಪನ ಪರೀಕ್ಷೆಗೆ ಸಿಬಿಎಸ್ಇ ಆದೇಶ

Posted By:

ಶಾಲೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ 'ಮನೋಮಾಪನ ಪರೀಕ್ಷೆ' ನಡೆಸಲು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ನಿರ್ದೇಶನ ನೀಡಿದೆ.

ಗುರುಗ್ರಾಮದಲ್ಲಿ ಇತ್ತೀಚೆಗೆ ನಡೆದ ಶಾಲಾ ವಿದ್ಯಾರ್ಥಿಯ ಹತ್ಯೆ ಮತ್ತು ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿ ನಡೆಯುತ್ತಿರುವ ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಸಿಬಿಎಸ್‌ಇ ಈ ಕ್ರಮ ಕೈಗೊಂಡಿದೆ.

ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ 'ಮನೋಮಾಪನ ಪರೀಕ್ಷೆ' ನಡೆಸುವುದೂ ಸೇರಿದಂತೆ ಭದ್ರತೆಗೆ ಸಂಬಂಧಿಸಿದ ಅನೇಕ ಹೊಸ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಶಾಲಾ ಆಡಳಿತ ಮಂಡಳಿಗಳಿಗೆ ಸಿಬಿಎಸ್‌ಇ ನಿರ್ದೇಶನ ನೀಡಿದೆ.

ಶಾಲಾ ಸಿಬ್ಬಂದಿಗಳಿಗೆ ಮನೋಮಾಪನ ಪರೀಕ್ಷೆ

ಸಿಬಿಎಸ್ಇ ಗೆ ಒಳಪಡುವ 19500 ಶಾಲೆಗಳಲ್ಲಿ ಇರುವ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಎರಡು ತಿಂಗಳೊಳಗೆ ಮನೋಮಾಪನ ಪ್ರಕ್ರಿಯೆ ಮುಗಿಸಿ ಉಳಿದ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಬೇಕು. ತಪ್ಪಿದಲ್ಲಿ ಶಾಲೆಗಳ ಮಾನ್ಯತೆ ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಲಾಗಿದೆ.

ಒಟ್ಟು 26 ದೇಶಗಳಲ್ಲಿ ಸಿಬಿಎಸ್ಇ ಶಾಲೆಗಳಿದ್ದು, ಹತ್ತು ಲಕ್ಷ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ 1100 ಕೇಂದ್ರಿಯ ವಿದ್ಯಾಲಯ, 600 ಜವಹಾರ್ ನವೋದಯ ವಿದ್ಯಾಲಯಗಳು ಸೇರಿವೆ.

ಸುರಕ್ಷಿತ ಲೆಕ್ಕಪರಿಶೋಧನೆ, ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ, ಪೊಲೀಸರಿಂದ ಪರಿಶೀಲನೆ, ಮಂಡಳಿ ಸೂಚಿಸಿದ ಸುರಕ್ಷತಾ ಕ್ರಮಗಳನ್ನು ಸೂಕ್ತ ರೀತಿಯಲ್ಲಿ ಪಾಲಿಸಲಾಗುತ್ತಿದೆಯೇ ಎಂಬುದನ್ನು ತಿಳಿದು ಪಾಲಕರಿಂದ ಸಲಹೆ ಪಡೆಯುವುದಕ್ಕಾಗಿ ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನೊಳಗೊಂಡ ಸಮಿತಿ ರಚನೆ ಇವು ಶಾಲಾ ಆಡಳಿತ ಮಂಡಳಿಗಳಿಗೆ ಸಿಬಿಎಸ್‌ಇ ಸೂಚಿಸಿದ ಮಾರ್ಗಸೂಚಿಗಳಲ್ಲಿ ಪ್ರಮುಖವಾದವುಗಳು.

ಶಾಲಾ ಕಟ್ಟಡಕ್ಕೆ ಹೊರಗಿನವರ ಪ್ರವೇಶ ನಿಯಂತ್ರಿಸುವಂತೆಯೂ, ಸಂದರ್ಶಕರ ಮೇಲೆ ನಿಗಾ ಇಡುವಂತೆಯೂ ಸೂಚಿಸಲಾಗಿದೆ. ಅಲ್ಲದೆ, ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಕಿರುಕುಳವಾಗದಂತೆ ರಕ್ಷಿಸುವ ಜವಾಬ್ದಾರಿಯನ್ನು ಮನದಟ್ಟು ಮಾಡಿಕೊಳ್ಳುವ ನಿಟ್ಟಿನಲ್ಲಿ ಶಾಲಾ ಸಿಬ್ಬಂದಿಗೆ ತರಬೇತಿ ಕೊಡಿಸುವಂತೆಯೂ ಕಟ್ಟುನಿಟ್ಟಿನ ಸೂಚನೆ ರವಾನೆಯಾಗಿದೆ.

English summary
The Central Board of Secondary Education (CBSE) ordered 19,500 affiliated schools to put all its staff through a psychometric evaluation.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia