ಯುಪಿಎಸ್ಸಿ ಕೇಡರ್ ಹಂಚಿಕೆಗೆ ಕೇಂದ್ರ ಸರ್ಕಾರದ ನೂತನ ನೀತಿ

Posted By:

ಐಎಎಸ್‌, ಐಪಿಎಸ್‌ ಹಾಗೂ ಇತರ ಅಧಿಕಾರಿಗಳಿಗೆ ಕೇಡರ್‌ ಹಂಚಿಕೆಗೆ ಸಂಬಂಧಿಸಿದಂತೆ ಹೊಸ ನೀತಿಯಲ್ಲಿ ಕೇಂದ್ರ ಸರ್ಕಾರ ಹೊಸ ಬದಲಾವಣೆ ಮಾಡಿದೆ.

'ರಾಷ್ಟ್ರೀಯ ಐಕ್ಯತೆ' ಕಾಯ್ದುಕೊಳ್ಳುವ ಉದ್ದೇಶದಿಂದ ಕೇಡರ್‌ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ಮಾಡಲಾಗಿದ್ದು, ನೂತನ ನೀತಿಯು ಈ ವರ್ಷವೇ ಜಾರಿಗೊಳ್ಳುವ ಸಾಧ್ಯತೆಯಿದೆ.

ಈ ನೀತಿಯ ಪ್ರಕಾರ, ಐಎಎಸ್‌, ಐಪಿಎಸ್‌ ಮತ್ತು ಐಎಫ್‌ಒಎಸ್‌ ಅಧಿಕಾರಿಗಳು ರಾಜ್ಯಗಳಿಗೆ ಬದಲಾಗಿ ವಲಯವಾರು ಆಧಾರದ ಮೇಲೆ ಕೇಡರ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ಯುಪಿಎಸ್ಸಿ ಕೇಡರ್ ಹಂಚಿಕೆಗೆ ನೂತನ ನೀತಿ

ಈ ಮೂರು ಸೇವೆಗಳ ಅಧಿಕಾರಿಗಳ ಕಾರ್ಯನಿರ್ವಹಣೆಗಾಗಿ ಪ್ರಸ್ತುತ ನಿರ್ದಿಷ್ಟ ರಾಜ್ಯ ಅಥವಾ ಹಲವು ರಾಜ್ಯಗಳ ಗುಂಪನ್ನು ಆಯ್ದುಕೊಳ್ಳಲು ಅವಕಾಶ ನೀಡಲಾಗುತ್ತಿದೆ. ಕೆಲವು ಅರ್ಹತೆಗಳನ್ನು ಪೂರೈಸಿದ್ದಾದಲ್ಲಿ, ಈ ಅಧಿಕಾರಿಗಳನ್ನು ಕೇಂದ್ರೀಯ ನಿಯೋಜನೆ ಮೇರೆಗೆ ಬೇರೆಡೆಗೆ ಕಳುಹಿಸಲು ಅವಕಾಶವಿದೆ.

''ಹೊಸ ನೀತಿಯು ಅಧಿಕಾರಿಶಾಹಿಯಲ್ಲಿ ರಾಷ್ಟ್ರೀಯ ಏಕತೆ ಕಾಯ್ದುಕೊಳ್ಳಲು ನೆರವಾಗುತ್ತದೆ. ಯಾವುದೇ ಅಧಿಕಾರಿ ತಮ್ಮ ತವರು ರಾಜ್ಯದ ಹೊರಗೆ ಕಾರ್ಯನಿರ್ವಹಿಸುವ ಅವಕಾಶ ಪಡೆಯಲಿದ್ದಾರೆ,'' ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

26 ಕೇಡರ್ ಗಳಿಗೆ 5 ವಲಯ

ಆಡಳಿತ ಮತ್ತು ಸಿಬ್ಬಂದಿ ಸಚಿವಾಲಯದ ಪ್ರಸ್ತಾವದ ಮೇರೆಗೆ ಹಾಲಿ ಇರುವ 26 ಕೇಡರ್‌ಗಳನ್ನು 5 ವಲಯಗಳಾಗಿ ವಿಂಗಡಿಸಲಾಗಿದೆ.

ವಲಯ-1 (ಎಜಿಎಂಯುಟಿ'): ಅರುಣಾಚಲ ಪ್ರದೇಶ-ಗೋವಾ, ಮಿಜೋರಾಂ ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 7 ಕೇಡರ್‌ಗಳನ್ನು ಇದು ಒಳಗೊಂಡಿದೆ.

ವಲಯ-2: ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್‌, ಮತ್ತು ಒಡಿಶಾ ರಾಜ್ಯಗಳನ್ನು ಒಳಗೊಂಡಿದೆ.

ವಲಯ-3: ಗುಜರಾತ್‌, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯಗಳನ್ನು ಒಳಗೊಂಡಿದೆ.

ವಲಯ-4: ಪಶ್ಚಿಮ ಬಂಗಾಳ, ಅಸ್ಸಾಂ-ಮೇಘಾಲಯ, ಮಣಿಪುರ, ತ್ರಿಪುರ ಮತ್ತು ನಾಗಾಲ್ಯಾಂಡ್‌ ಈ ವಲಯದಲ್ಲಿವೆ.

ವಲಯ-5ರಲ್ಲಿ: ದಕ್ಷಿಣದ ರಾಜ್ಯಗಳಾದ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳವನ್ನು ಸೇರಿಸಲಾಗಿದೆ.

ಪ್ರತಿವರ್ಷ ಯುಪಿಎಸ್‌ಸಿ ನಡೆಸುವ ನಾಗರಿಕ ಸೇವಾ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಮೊದಲೇ ವಲಯಗಳನ್ನು ಆದ್ಯತೆಯ ಮೇರೆಗೆ ಆರೋಹಣ ಪದ್ಧತಿಯಡಿ ಆಯ್ಕೆ ಮಾಡಬೇಕು. ಆ ಬಳಿಕ, ಆಯ್ಕೆ ಮಾಡಿಕೊಂಡ ಪ್ರತಿ ವಲಯದಲ್ಲೂ ಇರುವಂತಹ ರಾಜ್ಯಗಳನ್ನು ಆದ್ಯತೆ ಮೇರೆಗೆ ಗುರುತಿಸಬೇಕು. ಒಬ್ಬ ಅಭ್ಯರ್ಥಿಗೆ ಎಲ್ಲಾ 26 ಕೇಡರ್‌ಗಳನ್ನೂ ಆಯ್ಕೆ ಮಾಡುವ ಅವಕಾಶ ಇದರಿಂದ ಲಭ್ಯವಾಗಲಿದೆ.

ಆದರೆ, ಒಮ್ಮೆ ವಲಯಗಳ ಆಯ್ಕೆ ಮತ್ತು ಆದ್ಯತೆ ಸೂಚಿಸಿದರೆ, ನಂತರದ ಹಂತದಲ್ಲಿ ಬದಲಾವಣೆಗೆ ಅವಕಾಶವಿರುವುದಿಲ್ಲ.

ಒಂದು ವೇಳೆ ಅಭ್ಯರ್ಥಿಯು ಯಾವುದೇ ವಲಯ/ಕೇಡರ್‌ ಆಯ್ಕೆ ಮಾಡದಿದ್ದರೆ, ಅವರಿಗೆ ಯಾವುದೇ ಆಯ್ಕೆಯಿಲ್ಲ ಎಂದು ಭಾವಿಸಲಾಗುತ್ತದೆ. ಅಭ್ಯರ್ಥಿಗಳ ಮೆರಿಟ್‌ ಆಧಾರದ ಮೇಲೆ ಅವರಿಗೆ ತಮ್ಮ ತವರು ರಾಜ್ಯದ ಕೇಡರ್‌ ಹಂಚಿಕೆ ಮಾಡಲಾಗುತ್ತದೆ.

English summary
A new policy for cadre allocation has been finalised by the Central government for Indian Administrative Service (IAS), Indian Police Service (IPS) and other officers, aimed at ensuring “national integration” in the country’s top bureaucracy.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia