ಧಾರ್ಮಿಕ ಅಲ್ಪಸಂಖ್ಯಾತರಿಗಾಗಿ ಹೆಚ್ಚಿನ ನವೋದಯ ಶಾಲೆಗಳು

Posted By:

ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಹೆಚ್ಚಿರುವ ಕಡೆಗಳಲ್ಲಿ 100 ನವೋದಯ ಮಾದರಿ ಶಾಲೆಗಳನ್ನು ಮತ್ತು ಐದು ಉನ್ನತ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ದೇಶದಲ್ಲಿ ಆರು ಅಧಿಸೂಚಿತ ಅಲ್ಪಸಂಖ್ಯಾತ ಧರ್ಮಗಳಿವೆ (ಮುಸ್ಲಿಂ, ಭೌದ್ಧ, ಜೈನ, ಕ್ರೈಸ್ತ, ಪಾರ್ಸಿ ಮತ್ತು ಸಿಖ್‌). ಈ ಸಮುದಾಯಗಳನ್ನು ಶಿಕ್ಷಣದ ಮೂಲಕ ಸಶಕ್ತಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಇಲ್ಲಿ ಶೇ 40ರಷ್ಟು ಸೀಟುಗಳನ್ನು ವಿದ್ಯಾರ್ಥಿನಿಯರಿಗೆ ಮೀಸಲಿಡಲಾಗುತ್ತದೆ ಎಂದು ಕೇಂದ್ರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ರಾಜ್ಯ ಖಾತೆ ಸಚಿವ ಮುಖ್ತಾರ್‌ ಅಬ್ಬಾಸ್‌ ನಕ್ವಿ ತಿಳಿಸಿದ್ದಾರೆ.

ಧಾರ್ಮಿಕ ಅಲ್ಪಸಂಖ್ಯಾತರಿಗಾಗಿ ನವೋದಯ ಶಾಲೆಗಳು

ನವೋದಯ ಮಾದರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣದ ಜತೆಗೆ ಉಚಿತ ಆಹಾರ ಮತ್ತು ವಸತಿ ಸೌಲಭ್ಯವೂ ಇರುತ್ತದೆ. ಈ ಶಾಲೆಗಳು ಮುಂದಿನ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡಲಿದ್ದು, ಬಹು ಕ್ಷೇತ್ರೀಯ ಅಭಿವೃದ್ಧಿ ಕಾರ್ಯಕ್ರಮದಡಿ (ಎಂಎಸ್‌ಡಿಪಿ) ಶಾಲಾ ಕಟ್ಟಡಗಳನ್ನು ನಿರ್ಮಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರ ನೇಮಿಸಿದ್ದ ಮೌಲಾನಾ ಆಜಾದ್‌ ಎಜುಕೇಷನ್‌ ಫೌಂಡೇಷನ್‌ನ (ಸರ್ಕಾರಿ ಅನುದಾನಿತ ಏಜೆನ್ಸಿ) ಉನ್ನತ ಮಟ್ಟದ ಸಮಿತಿಯು ಇತ್ತೀಚೆಗೆ ಸಲ್ಲಿಸಿದ್ದ ವರದಿಯಲ್ಲಿ, ಅಲ್ಪಸಂಖ್ಯಾತರನ್ನು (ಪ್ರಮುಖವಾಗಿ ಮುಸ್ಲಿಂ) ಶೈಕ್ಷಣಿಕವಾಗಿ ಮುಂದೆ ತರಲು ಮೂರು ಹಂತದ ಶಿಕ್ಷಣ ಮಾದರಿಯನ್ನು ಅನುಸರಿಸಬೇಕು ಎಂದು ಶಿಫಾರಸು ಮಾಡಿತ್ತು.

ಪ್ರಾಥಮಿಕ ಶಾಲೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವುದು, ಮಾಧ್ಯಮಿಕ ಮತ್ತು ಪ್ರೌಢ ಹಂತದಲ್ಲಿ 211 ಶಾಲೆಗಳು, 25 ಕಾಲೇಜುಗಳು ಮತ್ತು ಮೂರು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಬೇಕು. ಈ ಶಾಲೆಗಳು ಕೇಂದ್ರೀಯ ವಿದ್ಯಾಲಯ ಅಥವಾ ನವೋದಯ ವಿದ್ಯಾಲಯದ ಮಾದರಿಯಲ್ಲಿ ಇರಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು ಎಂದು ಸಚಿವರು ವಿವರಿಸಿದ್ದಾರೆ.

ರಾಜಸ್ಥಾನ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಆಸಕ್ತಿ ತೋರಿವೆ ಎಂದು ಅವರು ತಿಳಿಸಿದ್ದಾರೆ.

English summary
The government has decided to proffer 40 percent reservation for girls at 100 Navodaya-type schools and five higher education institutes it plans to setup for minority community students, Union minister Mukhtar Abbas Naqvi has said.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia