ಸಿಇಟಿ 2017: ವಿದ್ಯಾರ್ಥಿಗಳಿಗೆ ಎರಡು ಗ್ರೇಸ್ ಮಾರ್ಕ್ಸ್

Posted By:

ಪ್ರಸಕ್ತ ಸಾಲಿನ ಸಿಇಟಿ ಬರೆದ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಲ್ಲಿ ತಲಾ ಒಂದು ಕೃಪಾಂಕ ದೊರೆಯಲಿದೆ.

ಭೌತಶಾಸ್ತ್ರ ವಿಷಯದ ಪರೀಕ್ಷೆಯಲ್ಲಿ ಮೊದಲನೇ ಪ್ರಶ್ನೆ ಮತ್ತು ರಸಾಯನಶಾಸ್ತ್ರ ಪರೀಕ್ಷೆಯ 48 ನೇ ಪ್ರಶ್ನೆಗೆ ಈ ಗ್ರೇಸ್ ಅಂಕ ದೊರೆತಿದೆ. ಈ ಎರಡೂ ಪ್ರಶ್ನೆಗಳು ಕೊಂಚ ಉದ್ದ ಹಾಗೂ ಅಸ್ಪಷ್ಟತೆಯಿಂದ ಕೂಡಿದ್ದವು. ಇದರಿಂದ ಉತ್ತರ ಬರೆಯಲು ಗೊಂದಲ ಉಂಟಾದ ಕಾರಣ ವಿದ್ಯಾರ್ಥಿಗಳು ಮತ್ತು ಕಾಲೇಜು ಉಪನ್ಯಾಸಕರು ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಆಕ್ಷೇಪದ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ತಜ್ಞರೊಂದಿಗೆ ಚರ್ಚೆ ನಡೆಸಿದರು. ಗ್ರೇಸ್ ಅಂಕ ನೀಡುವ ಮಾಹಿತಿಯನ್ನು ಪ್ರಾಧಿಕಾರ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ತಾತ್ಕಾಲಿಕ ಸರಿ ಉತ್ತರದಲ್ಲೂ ನೀಡಲಾಗಿದೆ ಎಂದು ಪ್ರಾಧಿಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಎರಡೂ ಪ್ರಶ್ನೆ ಪತ್ರಿಕೆಗಳಲ್ಲಿ ತಲಾ ಒಂದು ಪ್ರಶ್ನೆಯನ್ನು ಅಸ್ಪಷ್ಟವಾಗಿ ಕೇಳಲಾಗಿದ್ದ ಕಾರಣ ತಜ್ಞರ ಸಲಹೆಯಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2 ಕೃಪಾಂಕ ನೀಡಲಿದೆ.

ಸಿಇಟಿ ಎರಡು ಗ್ರೇಸ್ ಮಾರ್ಕ್ಸ್

ಭೌತಶಾಸ್ತ್ರ ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆ ಸಂಖ್ಯೆ 1 ಹಾಗೂ ರಸಾಯನಶಾಸ್ತ್ರದಲ್ಲಿ ಪ್ರಶ್ನೆ ಸಂಖ್ಯೆ 48 ಗೊಂದಲದಿಂದ ಕೂಡಿದ್ದವು. ಈ ಬಗ್ಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಪ್ರಾಧಿಕಾರ ಆಹ್ವಾನ ನೀಡಿತ್ತು. ಆದರೆ ಆಕ್ಷೇಪಣೆ ಸಲ್ಲಿಕೆಯಾಗುವ ಮುನ್ನವೇ ಕೃಪಾಂಕ ನೀಡಲು ತೀರ್ಮಾನಿಸಿದೆ. ವಿದ್ಯಾರ್ಥಿಗಳು ಮೇ. 10 ರೊಳಗೆ ದಾಖಲೆ ಸಮೇತ ಆಕ್ಷಪಣೆ ಕಳುಹಿಸಬಹುದು.

ಕೃಪಾಂಕ ಇದೇ ಮೊದಲೇನಲ್ಲ

2015 ನೇ ಸಾಲಿನಲ್ಲೂ ಪ್ರಾಧಿಕಾರ 8 ಕೃಪಾಂಕಗಳನ್ನು ನೀಡಿತ್ತು. ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರದ ಪ್ರಶ್ನೆಪತ್ರಿಕೆಯಲ್ಲಿ ತಪ್ಪು ಪ್ರಶ್ನೆಗಳನ್ನು ನೀಡಿದ್ದ ಕಾರಣ, ವಿದ್ಯಾರ್ಥಿಗಳಿಗೆ 8 ಅಂಕಗಳು ಸಿಕ್ಕಿದ್ದವು.

ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಯಾವುದೇ ಕೃಪಾಂಕ ಇಲ್ಲ

2017 ನೇ ಸಾಲಿನ ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಯಲ್ಲಿ ಮೌಲ್ಯಮಾಪನ ಹಂತದಲ್ಲಿ ಯಾವುದೇ ಕೃಪಾಂಕ ದೊರೆಯುವುದಿಲ್ಲ ಎಂದು ಮಂಡಳಿಯು ತಿಳಿಸಿದೆ.

ಎಸ್ಎಸ್ಎಲ್ ಸಿ ಯ 137 ವಿದ್ಯಾರ್ಥಿಗಳು ಹಾಗೂ ದ್ವಿತೀಯ ಪಿಯುಸಿಯ 175 ವಿದ್ಯಾರ್ಥಿಗಳು ಕೆಲ ಪ್ರಶ್ನೆಗಳ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಆದರೆ ಬಹುತೇಕ ಆಕ್ಷೇಪಣೆಗಳು ಊಹಾ ಪೋಹಗಳಿಂದ ಕೂಡಿದ್ದು, ಸಮರ್ಥಿಸಿಕೊಳ್ಳಲು ಯಾವುದೇ ಉಲ್ಲೇಖಗಳು ಇರಲಿಲ್ಲ. ಇದರಿಂದಾಗಿ ಕೃಪಾಂಕ ನೀಡದಿರಲು ಪಿಯು ಮತ್ತು ಎಸ್ಎಸ್ಎಲ್ ಸಿ ಪರೀಕ್ಷಾ ಮಂಡಳಿಗಳು ನಿರ್ಧರಿಸಿವೆ ಎಂದು ತಿಳಿದು ಬಂದಿದೆ.

English summary
Students will get two grace marks in cet 2017. Both Physics and Chemistry papers contain one wrong question.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia