ವೃತ್ತಿಪರ ಕೋರ್ಸ್ ಪ್ರವೇಶ: ಆನ್ಲೈನ್ ಮೂಲಕ ದಾಖಲೆ ಪರಿಶೀಲನೆಗೆ ಚಿಂತನೆ

Posted By:

ಪ್ರಸಕ್ತ ವರ್ಷದಿಂದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮೂಲಕ ವೃತ್ತಿಪರ ಕೋರ್ಸುಗಳಿಗೆ ಸೇರುವ ವಿದ್ಯಾರ್ಥಿಗಳ ದಾಖಲೆಗಳ ಪರಿಶೀಲನೆಯನ್ನು ಆನ್ಲೈನ್ ಮೂಲಕ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಂದಾಗಿದೆ.

ಆನ್ಲೈನ್ ಮೂಲಕ ದಾಖಲೆಗಳ ಪರಿಶೀಲನೆ ನಡೆಸುವ ಬಗ್ಗೆ ಪ್ರಾಧಿಕಾರವು ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.

ದಾಖಲೆ ಪರಿಶೀಲನೆಗೆ ಆನ್ಲೈನ್ ವ್ಯವಸ್ಥೆ

ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಪಡೆಯಲಿರುವ ವಿಜ್ಞಾನದ ವಿಭಾಗದ ವಿದ್ಯಾರ್ಥಿಗಳ ವ್ಯಾಸಂಗ, ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ಪ್ರಮಾಣ ಪತ್ರಗಳನ್ನು ಶಿಕ್ಷಣ ಇಲಾಖೆ ನೀಡಲು ಸಮ್ಮತಿ ಸೂಚಿಸಿದಲ್ಲಿ ಈ ವರ್ಷದಿಂದಲೇ ಆನ್-ಲೈನ್ ಮೂಲಕ ದಾಖಲೆಗಳನ್ನು ಪರಿಶೀಲಿಸಲು ಪ್ರಯತ್ನಸಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಉಜ್ವಲ್ ಕುಮಾರ್ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಮೂಲ ದಾಖಲೆಗಳ ಪರಿಶೀಲನೆಗಾಗಿ ಪರದಾಡುವುದನ್ನು ತಪ್ಪಿಸಲು ಪ್ರಾಧಿಕಾರವು ಆನ್ಲೈನ್ ಮೂಲಕ ಪರಿಶೀಲನೆ ನಡೆಸುವ ಚಿಂತನೆ ಕೈಗೊಂಡಿದೆ. ಕಳೆದ ಮೂರು ವರ್ಷಗಳಿಂದಲೂ ಇದರ ಪ್ರಯತ್ನ ಸಾಗಿದ್ದು, ಸರಿಯಾಗಿ ಸ್ಪಂದನೆ ಸಿಗದೆ ಪ್ರಯತ್ನಗಳು ವಿಫಲವಾಗಿದ್ದವು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯದ 16 ಕೇಂದ್ರಗಳಲ್ಲಿ ಆಫ್ಲೈನ್ ಮೂಲಕ ದಾಖಲಾತಿ ಪರಿಶೀಲನೆ ಪ್ರಕ್ರಿಯೆ ನಡೆಸುತ್ತಿದೆ. ವಿದ್ಯಾರ್ಥಿಗಳು ಸಮೀಪದ ಯಾವುದಾದರೂ ಒಂದು ಕೇಂದ್ರಕ್ಕೆ ಹಾಜರಾಗಿ ದಾಖಲಾತಿ ಪರಿಶೀಲನೆ ಮುಗಿಸಬೇಕಾಗುತ್ತದೆ.

ಪ್ರತಿ ವರ್ಷ ಲಕ್ಷಾಂತರ ಮಕ್ಕಳು ಸಿಇಟಿ ಬರೆಯಲಿರುವುದರಿಂದ ಆಫ್ಲೈನ್ ನಲ್ಲಿ ದಾಖಲೆ ಪರಿಶೀಲನೆ ನಡೆಸುವುದು ಪ್ರಾಧಿಕಾರಕ್ಕೆ ಪ್ರಹಸನದಂತಾಗಿದೆ. ಆನ್-ಲೈನ್ ನಲ್ಲೇ ಪರಿಶೀಲನೆ ನಡೆಸುವಂತಾದರೆ ವಿದ್ಯಾರ್ಥಿಗಳು ಪ್ರಾಧಿಕಾರಕ್ಕೆ ಬರುವುದು ತಪ್ಪುತ್ತದೆ.

ವಿದ್ಯಾರ್ಥಿಗಳು 1 ರಿಂದ 10 ನೇ ತರಗತಿವರೆಗೂ ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿದ್ದರೆ ಈ ಎರಡೂ ಪ್ರಮಾಣ ಪತ್ರಗಳನ್ನು ಶಿಕ್ಷಣ ಇಲಾಖೆ ನೀಡಬೇಕಾಗುತ್ತದೆ. ಆದರೆ, ಪ್ರಸ್ತುತ ಶಿಕ್ಷಣ ಇಲಾಖೆಯಲ್ಲಿ ಮಕ್ಕಳ ದಾಖಲೆಯನ್ವಯ ಕೇವಲ ಮೂರ್ನಾಲ್ಕು ವರ್ಷಗಳಿಗೆ ಸೀಮಿತವಾಗಿ ವ್ಯಾಸಂಗದ ಅವಧಿಯ ಪ್ರಮಾಣ ಪತ್ರದ ಮಾಹಿತಿ ಸಿಗಲಿದೆ. ಇನ್ನುಳಿದ ವರ್ಷಗಳ ಮಾಹಿತಿ ಕ್ರೋಢೀಕರಿಸುವುದು ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎನ್ನುವುದು ಶಿಕ್ಷಣ ಇಲಾಖೆಯ ಅಧಿಕಾರಿಗಳ ಅಭಿಪ್ರಾಯ.

ಪಿಯುಸಿಗೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ಕನ್ನಡ ಮಾಧ್ಯಮ, ಗ್ರಾಮೀಣ ಹಾಗೂ ವ್ಯಾಸಂಗ ಪ್ರಮಾಣ ಪತ್ರ ಪಡೆಯಲಾಗುತ್ತದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯು ಸಂಬಂಧಪಟ್ಟ ಕಾಲೇಜುಗಳ ಪ್ರಾಂಶುಪಾಲರ ಮೂಲಕ ವಿದ್ಯಾರ್ಥಿಗಳ ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ದೃಢೀಕರಿಸಿ ಕೊಟ್ಟಲ್ಲಿ ಆನ್-ಲೈನ್‌ ದಾಖಲೆ ಪರಿಶೀಲನೆಗೆ ಸಹಾಯಕವಾಗಲಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಸಿಇಟಿ ನಂತರ ಮೂಲ ದಾಖಲೆ ಪರಿಶೀಲನೆ ಪ್ರಕ್ರಿಯೆಯನ್ನು ಮೇ ಕೊನೆ ವಾರ ಅಥವಾ ಜೂನ್ ಮೊದಲ ವಾರ ಆರಂಭಿಸಲಾಗುತ್ತದೆ. ಇನ್ನೂ ಆರು ತಿಂಗಳು ಕಾಲಾವಕಾಶ ಇರುವದರಿಂದ ಶಿಕ್ಷಣ ಇಲಾಖೆ ಒಪ್ಪಿದಲ್ಲಿ ಆದರ ಆಧಾರದ ಮೇರೆಗೆ ಆನ್ಲೈನ್ ದಾಖಲೆ ಪರಿಶೀಲನೆ ಪ್ರಕ್ರಿಯೆ ನಡೆಸುವ ಬಗ್ಗೆ ಚಿಂತಿಸಲಾಗುವುದು ಎಂದು ಪ್ರಾಧಿಕಾರದ ನಿರ್ದೇಶಕರು ಹೇಳಿದರು.

English summary
The Karnataka Examination Authority has decided to conduct online document verification of students who are taking professional courses through CET.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia