ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲು ಸೃಷ್ಟಿಸಲು ಸಜ್ಜಾಗಿದ್ದ ಚಂದ್ರಯಾನ -2 ಚಂದ್ರನ ಮೇಲೆ ಲ್ಯಾಂಡ್ ಆಗುವ ಸಂದರ್ಭದಲ್ಲಿ ಸಂಪರ್ಕ ಕಡಿತದಿಂದಾಗಿ ಪ್ರಯತ್ನ ವಿಫಲಗೊಂಡಿತು. ಈ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಬೇಸರದ ಛಾಯೆ ಆವರಿಸಿತ್ತು. ಆದರೆ ನಿನ್ನೆ ಲಭ್ಯವಾದ ಮಾಹಿತಿಗಳ ಪ್ರಕಾರ ವಿಕ್ರಮ್ ಲ್ಯಾಂಡರ್ ಅನ್ನು ಪತ್ತೆ ಹಚ್ಚಲಾಗಿದೆ ಹಾಗೂ ಅತೀ ಶೀಘ್ರದಲ್ಲಿ ಅದರ ಸಂಪರ್ಕ ಪಡೆಯುವ ಪ್ರಯತ್ನ ನಡೆಸಲಾಗುವುದು ಎಂದು ಇಸ್ರೋ ಮುಖ್ಯಸ್ಥ ಶಿವನ್ ಹೇಳಿದ್ದಾರೆ.

ಚಂದ್ರಯಾನ -2 ಚಂದ್ರನ ಮೇಲೆ ಲ್ಯಾಂಡಿಂಗ್ :
ಶನಿವಾರ ಬೆಳಗ್ಗೆ 1.53ಕ್ಕೆ ಚಂದ್ರನ ಮೇಲೆ ಲ್ಯಾಂಡ್ ಆಗಬೇಕಿದ್ದ ವಿಕ್ರಮ್, ಚಂದ್ರನ ಮೇಲ್ಮೈನಿಂದ 2.1 ಕಿ.ಮೀ. ಅಂತರವಿರುವಾಗಲೇ ಬೆಂಗಳೂರಿನ ಕೇಂದ್ರದೊಡನೆ ಸಂಪರ್ಕ ಕಳೆದುಕೊಂಡಿತ್ತು.

ವಿಕ್ರಮ್ ಲ್ಯಾಂಡರ್ ಪತ್ತೆ :
ನಿನ್ನೆ ಚಂದ್ರನ ಮೇಲ್ಮೈನಲ್ಲೇ ವಿಕ್ರಮ್ ಪತ್ತೆಯಾಗಿದ್ದು, ಲ್ಯಾಂಡರ್ ನಾಶವಾಗಿಲ್ಲ ಎಂದು ಸ್ಪಷ್ಟವಾಗಿದೆ. "ವಿಕ್ರಮ್ ಇರುವ ಜಾಗವನ್ನು ಆರ್ಬಿಟರ್ ಪತ್ತೆ ಮಾಡಿ ಚಿತ್ರ ಕಳಿಸಿದೆ " ಎಂದು ಇಸ್ರೋ ಮುಖ್ಯಸ್ಥ ಕೆ. ಶಿವನ್ ತಿಳಿಸಿದ್ದಾರೆ.

ಆರ್ಬಿಟರ್ ಮೂಲಕ ಅಧ್ಯಯನ :
ವಿಕ್ರಂ ಲ್ಯಾಂಡರ್ ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲ. ಹಾಗಾಗಿ 12 ದಿನಗಳ ಕಾಲ ನಿರಂತರವಾಗಿ ಸಂಪರ್ಕ ಪಡೆಯುವ ಪ್ರಯತ್ನ ನಡೆಯಲಿದೆ. ಅದಲ್ಲದೆಯೇ ಚಂದ್ರನ ಸುತ್ತ ಸುತ್ತುತ್ತಿರುವ ಆರ್ಬಿಟರ್ ಇನ್ನೂ 7 ವರ್ಷ ಅಲ್ಲೇ ಇರುತ್ತದೆ. ಅದರ ಮೂಲಕ ಫೋಟೋಗಳನ್ನು ತೆಗೆದುಕೊಂಡು ವಿಶ್ಲೇಷಣೆ ಮಾಡಬಹುದು.

ಚಂದ್ರಯಾನ -2 :
ಜುಲೈ 22 ರಂದು ನಭಕ್ಕೆ ಹಾರಿದ ಚಂದ್ರಯಾನ-2 ನೌಕೆಯು ಆರ್ಬಿಟರ್, ವಿಕ್ರಂ ಹೆಸರಿನ ಲ್ಯಾಂಡರ್, ಪ್ರಜ್ಞಾನ್ ಹೆಸರಿನ ರೋವರ್ ಅನ್ನು ಹೊತ್ತು ಚಂದ್ರನಲ್ಲಿಗೆ ಸಾಗಿತ್ತು. ಆರ್ಬಿಟರ್ ನಿಂದ ಯಶಸ್ವಿಯಾಗಿ ಬೇರ್ಪಟ್ಟ ಲ್ಯಾಂಡರ್, ರೋವರ್ ಅನ್ನು ಹೊತ್ತು ಚಂದ್ರನ ಅಂಗಳಕ್ಕೆ ಇಳಿಯಲು ಪ್ರಾರಂಭಿಸಿತ್ತು.

ಚಂದ್ರಯಾನ -2 ಯೋಜನೆ :
ಸೆಪ್ಟೆಂಬರ್ 7 ರಂದು ಬೆಳಗ್ಗಿನ ಜಾವ ಚಂದ್ರನನ್ನು ತಲುಪಲು ಇನ್ನೂ 2.1 ಕಿ.ಮೀ. ಅಂತರ ಇರುವಾಗಲೇ ಲ್ಯಾಂಡರ್ ಆರ್ಬಿಟರ್ ನೊಂದಿಗೆ ಸಂಪರ್ಕ ಕಳೆದುಕೊಂಡಿತ್ತು. ಚಂದ್ರನ ಮೇಲೆ ಲ್ಯಾಂಡರ್ ತಲುಪಿದೆಯೋ ಇಲ್ಲವೋ, ಸುರಕ್ಷಿತವಾಗಿದೆಯೋ ಇಲ್ಲವೋ ಎನ್ನುವ ಪ್ರಶ್ನೆಗಳಿಗೆ ನಿನ್ನೆ ಉತ್ತರ ಸಿಕ್ಕಿದೆ.