ಶಾಲೆಗಳಲ್ಲಿ ಹಿಂದಿ ಕಡ್ಡಾಯಕ್ಕೆ ಒತ್ತಾಯ

Posted By:

ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸುವ ಪ್ರಯತ್ನ ಈಗ ಭರದಿಂದ ಸಾಗಿದೆ. ಆದರೆ ದೇಶದ ಎಲ್ಲಾ ಶಾಲೆಗಳಲ್ಲಿ ಹಿಂದಿ ಭಾಷೆ ಕಡ್ಡಾಯಗೊಳಿಸಲು ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ತಿರಸ್ಕರಿಸಿದ್ದಾರೆ.

ಕೇಂದ್ರ ಸರ್ಕಾರ ನಡೆಸುತ್ತಿರುವ ಶಾಲೆಗಳು ಮತ್ತು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಪಠ್ಯಕ್ರಮದ ಶಾಲೆಗಳಲ್ಲಿ 10ನೇ ತರಗತಿವರೆಗೆ ಹಿಂದಿಯನ್ನು ಕಡ್ಡಾಯಗೊಳಿಸುವ ಶಿಫಾರಸಿಗೆ ಅವರು ತಾತ್ವಿಕ ಒಪ್ಪಿಗೆ ನೀಡಿದ್ದಾರೆ.

ಎಲ್ಲಾ ಶಾಲೆಗಳಲ್ಲು ಹಿಂದಿಯನ್ನು ಕಡ್ಡಾಯಗೊಳಿಸಬೇಕು ಎನ್ನುವುದಕ್ಕೆ  ರಾಜ್ಯಗಳೊಂದಿಗೆ ಚರ್ಚಿಸಿ ನೀತಿಯೊಂದನ್ನು ರೂಪಿಸಬೇಕು ಎಂದು ರಾಷ್ಟ್ರಪತಿ ತಿಳಿಸಿದ್ದಾರೆ. ಉಳಿದಂತೆ ಸಮಿತಿ ಮಾಡಿರುವ ಬಹುತೇಕ ಶಿಫಾರಸುಗಳನ್ನು ಮುಖರ್ಜಿ ಅಂಗೀಕರಿಸಿದ್ದಾರೆ.

ಸಮಿತಿಯ ಬೇಡಿಕೆ

ದೇಶದಾದ್ಯಂತ 14 ಲಕ್ಷಕ್ಕೂ ಹೆಚ್ಚು ಶಾಲೆಗಳಿವೆ. ಆದರೆ ಸಿಬಿಎಸ್‌ಇ ಜೊತೆ ಸಂಯೋಜನೆಗೊಂಡಿರುವ ಶಾಲೆಗಳ ಸಂಖ್ಯೆ 18 ಸಾವಿರ ಮಾತ್ರ.10ನೇ ತರಗತಿವರೆಗೆ ಹಿಂದಿ ಕಡ್ಡಾಯಗೊಳಿಸುವ ಸಂಬಂಧ ಸರ್ಕಾರ ಸಂಸತ್ತಿನಲ್ಲಿ ಪ್ರಸ್ತಾವ ಮಂಡಿಸಬೇಕು ಎಂದು ಅಧಿಕೃತ ಭಾಷೆಗೆ ಸಂಬಂಧಿಸಿದ ಸಂಸದೀಯ ಸಮಿತಿ ಬಯಸಿತ್ತು.

 ಹಿಂದಿ ಕಡ್ಡಾಯಕ್ಕೆ ಒತ್ತಾಯ

ಸಿಬಿಎಸ್ಇ ಹಾಗೂ ಕೇಂದ್ರಿಯ ವಿದ್ಯಾಲಯ ವ್ಯಾಪ್ತಿಗೆ ಸೇರುವ ಶಾಲೆಗಳ ವಿದ್ಯಾರ್ಥಿಗಳಿಗೆ ಇನ್ನು ಮುಂದೆ 10 ನೇ ತರಗತಿ ತನಕ ಹಿಂದಿ ಕಡ್ಡಾಯವಾಗುವಂತೆ ಸಂಸದೀಯ ಸಮಿತಿ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿತ್ತು. ಇದನ್ನು ಪರಿಶೀಲಿಸಿ 'ಎ' ವಲಯದಲ್ಲಿ ಮಾತ್ರ ಕಡ್ಡಾಯಗೊಳಿಸಲು ಅನುಮತಿ ನೀಡಿದ್ದಾರೆ.

'ಎ' ವಲಯ

ದೇಶದ ಎಲ್ಲ ಶಾಲೆಗಳ ಬದಲು 'ಎ' ವಲಯಗಳಲ್ಲಿ ಮಾತ್ರ 10ನೇ ತರಗತಿವರೆಗೆ ಹಿಂದಿ ಕಡ್ಡಾಯಗೊಳಿಸುವುದಕ್ಕೆ ರಾಷ್ಟ್ರಪತಿ ಒಪ್ಪಿದ್ದಾರೆ. ಬಿಹಾರ, ಹರಿಯಾಣ, ಹಿಮಾಚಲ ಪ್ರದೇಶ, ರಾಜಸ್ತಾನ, ಉತ್ತರ ಪ್ರದೇಶ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ, ಅಂಡಮಾನ್‌ ಮತ್ತು ನಿಕೊಬಾರ್‌ ದ್ವೀಪಗಳನ್ನು 'ಎ' ವಲಯ ಎಂದು ಪರಿಗಣಿಸಲಾಗಿದೆ.

ಕಡ್ಡಾಯಕ್ಕೆ ಕಾರಣ

ಹಿಂದಿಯೇತರ ರಾಜ್ಯಗಳ ಅಧಿಕಾರಿಗಳು ಹಿಂದಿ ಭಾಷೆಯ ರಾಜ್ಯಗಳಿಗೆ ಬಂದಾಗ ಸಂವಹನ ನಡೆಸಲು, ಓದಲು ಕಷ್ಟಪಡುತ್ತಾರೆ. ಹಿಂದಿ ಕಲಿಕೆ ಕಡ್ಡಾಯ ಮಾಡುವುದರಿಂದ ಈ ಸಮಸ್ಯೆ ಬಗೆಹರಿಯುವುದು ಎನ್ನುವುದೇ ಪ್ರಮುಖ ಕಾರಣವಾಗಿದೆ.

1968ರ ರಾಷ್ಟ್ರೀಯ ನೀತಿ ನಿರ್ಣಯದ ಅನ್ವಯ ತ್ರಿಭಾಷಾ ಸೂತ್ರವನ್ನು ಎಲ್ಲ ರಾಜ್ಯಗಳೂ ಪಾಲಿಸಬೇಕಿತ್ತು. ಆದರೆ, ಕರ್ನಾಟಕ ಸೇರಿ ದಕ್ಷಿಣ ಭಾರತದ 4 ರಾಜ್ಯಗಳು ತ್ರಿಭಾಷಾ ಸೂತ್ರಗಳನ್ನು ಜಾರಿ ಮಾಡಿಲ್ಲ.

ಸದ್ಯ ಎಲ್ಲಾ ಕೇಂದ್ರೀಯ ವಿದ್ಯಾಲಯ ಮತ್ತು CBSE ಶಾಲೆಗಳಲ್ಲಿ ಪ್ರಥಮ ಭಾಷೆ ಇಂಗ್ಲಿಷ್ ಜೊತೆಯಲ್ಲಿ ಬೇರೆ ಯಾವುದೇ ಎರಡು ಪ್ರಾದೇಶಿಕ ಭಾಷೆಯನ್ನು ಆಯ್ದುಕೊಳ್ಳುವ ಅಧಿಕಾರ ವಿದ್ಯಾರ್ಥಿಗಳಿಗೆ ಇದೆ. ಆದ್ರೆ ಹಿಂದಿ ಕಡ್ಡಾಯ ಮಾಡಿದ್ರೆ ಆಗ ಪ್ರಾದೇಶಿಕ ಭಾಷೆಗಳ ಕಲಿಕೆ ವಿದ್ಯಾರ್ಥಿಗಳಿಂದ ಇನ್ನೊಂದು ಹೆಜ್ಜೆ ಹಿಂದಕ್ಕೆ ಹೋಗುವಂತೆ ಮಾಡುತ್ತದೆ. ಇದು ಭಾಷೆಗಳ ಉಳಿವಿನ ಹೋರಾಟಕ್ಕೆ ದೊಡ್ಡ ಪೆಟ್ಟು ಬಿದ್ದಂತಾಗುತ್ತದೆ ಎನ್ನುವ ಕೂಗು ಎಲ್ಲೆಡೆ ಕೇಳಿಬರುತ್ತಿದೆ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಈಗಾಗಲೇ  ಸಂಸತ್ತಿನ ಒಂದು ವಿಭಾಗ ಸಲ್ಲಿಸಿರುವ ಮನವಿಗೆ ಒಪ್ಪಿಗೆಯ ಮುದ್ರೆ ಒತ್ತಿದ್ದಾರೆ. ಮಾನವ ಸಂಪನ್ಮೂಲ ಇಲಾಖೆಯೂ ಇದಕ್ಕೆ ಅಸ್ತು ಎಂದರೆ ದೇಶದಾದ್ಯಂತ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಹಿಂದಿ ಕಡ್ಡಾಯ ಎನ್ನುವ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ.

English summary
President Pranab Mukherjee has agreed to a parliamentary panel's recommendation to make Hindi compulsory till class tenth in CBSE-affiliated schools and Kendriya Vidyalayas.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia