ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಕನ್ನಡ ಕಡ್ಡಾಯಕ್ಕೆ ಆದೇಶ

Posted By:

ಕನ್ನಡ ಏನಿದ್ದರೂ ಹೇಳಿಕೊಳ್ಳುವುದಕಷ್ಟೇ ಆಡಳಿತ ಭಾಷೆ ಎನ್ನುವ ಅಭಿಪ್ರಾಯ ಜನಮಾನಸದಲ್ಲಿ ಮೂಡುವ ಮುನ್ನವೇ ಅಧಿಕಾರಿಗಳನ್ನು ಎಚ್ಚರಿಸಿ ಆಡಳಿತದಲ್ಲಿ ಕಡ್ಡಾಯವಾಗಿ ಕನ್ನಡವನ್ನು ಅನುಷ್ಠಾನಗೊಳಿಸಲು ನಿರ್ದೇಶಿಸಲಾಗಿದೆ.

ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತಿದ್ದರೂ ಕನ್ನಡವನ್ನು ಆಡಳಿತದ ಎಲ್ಲ ಹಂತಗಳಲ್ಲಿಯೂ ಸಮರ್ಪಕವಾಗಿ ಬಳಕೆ ಮಾಡದ ಅಧಿಕಾರಿಗಳ ಕಾರ್ಯವೈಖರಿಯನ್ನು ಗಂಭೀರವಾಗಿ ಪರಿಗಣಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕಡ್ಡಾಯವಾಗಿ ಆಡಳಿತದಲ್ಲಿ ಕನ್ನಡ ಬಳಕೆ ಮಾಡುವಂತೆ ತಾಂತ್ರಿಕ ಶಿಕ್ಷಣ ಇಲಾಖೆಗೆ ಆದೇಶ ನೀಡಿದೆ.

ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಇಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್, ಕಿರಿಯ ತಾಂತ್ರಿಕ ಶಾಲೆಗಳು, ಚಿತ್ರಕಲಾ ಕಾಲೇಜುಗಳು ಮತ್ತು ಶಾಲೆಗಳ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆಡಳಿತದಲ್ಲಿ ಕಡ್ಡಾಯವಾಗಿ ಕನ್ನಡವನ್ನು ಅನುಷ್ಠಾನಗೊಳಿಸಲು ತಾಂತ್ರಿಕ ಶಿಕ್ಷಣ ಇಲಾಖೆಗೆ ಆದೇಶಿಸಲಾಗಿದೆ.

ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಕನ್ನಡ ಕಡ್ಡಾಯ

ಕನ್ನಡ ಬಳಕೆ

ಕಡತಗಳ ಮೇಲೆ ಬರೆಯುವ ಟಿಪ್ಪಣಿಗಳು, ಪತ್ರವ್ಯವಹಾರ, ಸಭೆಯ ನಡಾವಳಿಗಳು, ಪ್ರಕಟಣೆಗಳು, ನಮೂನೆಗಳು, ಜಾಹೀರಾತುಗಳು, ತಿಳುವಳಿಕೆಗಳು, ರಹದಾರಿ, ಬಿಲ್ಲುಗಳು, ಪ್ರಮಾಣ ಪತ್ರಗಳು, ಎಲ್ಲ ಕಾಗದದ ಬರಹಗಳು , ಕಚೇರಿ ಲೆಕ್ಕ ಪತ್ರಗಳು, ಮೊಹರುಗಳು, ವಿಸಿಟಿಂಗ್ ಕಾರ್ಡ್​ಗಳು ಹಾಗೂ ಇಲಾಖೆ ಅಂತರ್ಜಾಲ ತಾಣಗಳಲ್ಲಿ ಪ್ರಧಾನ ಭಾಷೆಯಾಗಿ ಕನ್ನಡವನ್ನು ಕಟ್ಟುನಿಟ್ಟಾಗಿ ಎಲ್ಲ ಹಂತಗಳಲ್ಲೂ ಬಳಸಬೇಕಿದೆ.

ಕನ್ನಡ ಬಳಸದಿದ್ದರೆ ಕಠಿಣ ಕ್ರಮ

ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದಿಂದ ಅಧಿಕಾರಿಗಳು ಸಂಸ್ಥೆಗಳ ತನಿಖೆಗಾಗಿ ಭೇಟಿ ನೀಡಿದಾಗ ಮೇಲೆ ತಿಳಸಿರುವಂತೆ ಆಡಳಿತದಲ್ಲಿ ಕನ್ನಡವನ್ನು ಅನುಷ್ಠಾನಗೊಳಿಸಲು ಕ್ರಮ ತೆಗೆದುಕೊಳ್ಳಲಾಗಿದೆಯೇ ಎಂಬ ಬಗ್ಗೆ ಪರಿಶೀಲಿಸಲಾಗುವುದು ಹಾಗೂ ಕನ್ನಡವನ್ನು ಅನುಷ್ಠಾನಗೊಳಿಸದಿರುವಂತಹ ಅಧಿಕಾರಿ/ಸಿಬ್ಬಂದಿಗಳ ವಿರುದ್ಧ ಶಿಸ್ತುಕ್ರಮಗಳಾದ ವಾಗ್ದಂಡನೆ ಅಥವಾ ವಾರ್ಷಿಕ ವೇತನ ಬಡ್ತಿಯನ್ನು ತಡೆಹಿಡಿಯುವುದು ಅಥವಾ ಪದೋನ್ನತಿಯನ್ನು ತಡೆಹಿಡಿಯುವುದು ಅಥವಾ ಕಾಲವೇತನ ಶ್ರೇಣಿಯಲ್ಲಿ ಕೆಳಗಿನ ಹಂತಕ್ಕೆ ಇಳಿಸುವ ಕುರಿತು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಕನ್ನಡ ಕಡ್ಡಾಯಕ್ಕೆ ಶಿಫಾರಸ್ಸು

ತಾಂತ್ರಿಕ ಮತ್ತು ವೈದ್ಯ ಶಿಕ್ಷಣ ಸೇರಿದಂತೆ ಎಲ್ಲಾ ವಿಶ್ವವಿದ್ಯಾಲಯಗಳ ಪದವಿ ತರಗತಿಗಳಲ್ಲಿ ಕನ್ನಡ ಕಡ್ಡಾಯಗೊಳಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದ ಹಿ ಚಿ ಬೋರಲಿಂಗಯ್ಯ ನೇತೃತ್ವದ ತಜ್ಞರ ಸಮಿತಿ ರಾಜ್ಯ ಸರಕಾರಕ್ಕೆ ಕಳೆದ ವರ್ಷ ಶಿಫಾರಸು ಮಾಡಿತ್ತು.

ವರದಿ ಸ್ವೀಕರಿಸಿದ್ದ ಅಂದಿನ ಉನ್ನತ ಶಿಕ್ಷಣ ಸಚಿವ ಟಿ ಬಿ ಜಯಚಂದ್ರ, ಉನ್ನತ ಶಿಕ್ಷಣ ಪರಿಷತ್‌ನಲ್ಲಿ ಈ ವಿಷಯ ಪ್ರಸ್ತಾಪಿಸಿ ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳ ಅಭಿಪ್ರಾಯ ಪಡೆದು ವರದಿಯ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ತಿಳಸಿದ್ದರು.

English summary
Government orders department of technical education to adopt kannada compulsory

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia