ಪದವಿ ಕಾಲೇಜು ಸಮಯ ಮತ್ತೆ ಬದಲಾವಣೆ: ಬೆಳಗ್ಗೆ 9 ಕ್ಕೆ ತರಗತಿಗಳು

Posted By:

ಪದವಿ ಕಾಲೇಜುಗಳ ತರಗತಿ ವೇಳಾಪಟ್ಟಿಯಲ್ಲಿ ಶಿಕ್ಷಣ ಇಲಾಖೆ ಮತ್ತೊಮ್ಮೆ ಬದಲಾವಣೆ ತಂದಿದೆ. ಬೆಳಗ್ಗೆ 8ರ ಬದಲಾಗಿ ತರಗತಿಗಳು 9 ಕ್ಕೆ ಆರಂಭಿಸಲು ಸುತ್ತೋಲೆ ಹೊರಡಿಸಿದೆ. ಆಗಸ್ಟ್ 1 ರಿಂದ ಈ ಆದೇಶ ಜಾರಿಗೆ ಬರಲಿದೆ.

ಪದವಿ ಕಾಲೇಜುಗಳಲ್ಲಿ ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಬೇಕು ಎಂಬ ಇಲಾಖೆಯ ಹಿಂದಿನ ಆದೇಶಕ್ಕೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಕಾಲೇಜಿನ ವೇಳಾಪಟ್ಟಿಯನ್ನು ಬದಲಾಯಿಸುವಂತೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಒತ್ತಾಯಿಸಿದ್ದರು. ಒತ್ತಾಯಕ್ಕೆ ಮಣಿದ ಕಾಲೇಜು ಶಿಕ್ಷಣ ಇಲಾಖೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಬೆಳಿಗ್ಗೆ 8ಕ್ಕೆ ಬದಲು 9ರಿಂದ ಪ್ರಾರಂಭಿಸಲು ನಿರ್ಧರಿಸಿದೆ.

ಬೆಳಗ್ಗೆ 9 ಗಂಟೆಗೆ ಪದವಿ ಕಾಲೇಜುಗಳು

'ಈ ಹಿಂದೆ ಪದವಿ ತರಗತಿಗಳನ್ನು ಬೆಳಿಗ್ಗೆ 8ರಿಂದ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಗ್ರಾಮೀಣ ಪ್ರದೇಶ ಅದರಲ್ಲೂ ಮಲೆನಾಡು, ಕರಾವಳಿ ಭಾಗದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂಬ ಕಾರಣಕ್ಕೆ ಬೆಳಿಗ್ಗೆ 9ಕ್ಕೆ ಆರಂಭಿಸಲು ನಿರ್ಧರಿಸಲಾಗಿದೆ' ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಎಂ.ಎನ್. ಅಜಯ್‌ ನಾಗಭೂಷಣ್ ತಿಳಿಸಿದ್ದಾರೆ.

ನೂತನ ಆದೇಶದಂತೆ ಆಗಸ್ಟ್ 1 ರಿಂದ ಪ್ರತಿದಿನ ಬೆಳಗ್ಗೆ 9 ಗಂಟೆಗೆ ತರಗತಿಗಳು ಪ್ರಾರಂಭವಾಗಲಿವೆ. ಅಲ್ಲದೆ ಮೂರು ರೀತಿಯಲ್ಲಿ ಸಮಯ ಬದಲಾವಣೆಗಳನ್ನು ಮಾಡಲಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಮತ್ತು ಈಗಾಗಲೇ ಎರಡು ಪಾಳಿಗಳಲ್ಲಿ ತರಗತಿಗಳನ್ನು ನಡೆಸುತ್ತಿರುವ ಕಾಲೇಜುಗಳಲ್ಲಿ ಬೆಳಗಿನ ತರಗತಿಗಳನ್ನು ಬೆಳಗ್ಗೆ 8 ಗಂಟೆಗೆ ಪ್ರಾರಂಭಿಸಿಲು ಸೂಚಿಸಲಾಗಿದೆ.

ಇನ್ನುಳಿದಂತೆ ಪಠ್ಯೇತರ ಚಟುವಟಿಕೆ, ವಿಶೇಷ ತರಗತಿ , ಕ್ರೀಡಾ ಚಟುವಟಿಕೆಗಳಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ಮಾಡಲಾಗಿಲ್ಲ.

ಸುತ್ತೋಲೆಯಲ್ಲಿನ ಮುಖ್ಯಾಂಶಗಳು

  • ಈಗಾಗಲೇ ಎರಡು ಶಿಫ್ಟ್ ಗಳಲ್ಲಿ ತರಗತಿಗಳನ್ನು ನಡೆಸುತ್ತಿರುವ ಕಾಲೇಜುಗಳಲ್ಲಿ ಬೆಳಗಿನ ಬ್ಯಾಚ್ ಅನ್ನು ಹಿಂದಿನಂತೆಯೇ ಬೆಳಿಗ್ಗೆ 8 ಗಂಟೆಗೆ ಪ್ರಾರಂಭಿಸಬೇಕು.
  • ಪ್ರಯೋಗಾಲಯ ತರಗತಿಗಳನ್ನು ಬೆಳಗ್ಗೆ 8 ಗಂಟೆಗೆ ವೇಳಾಪಟ್ಟಿಯಂತೆ ನಡೆಸಿಕೊಂಡು ಹೋಗಲು ಆದ್ಯತೆ ನೀಡುವುದು.
  • ಇನ್ನುಳಿದ ಎಲ್ಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆಯಲ್ಲಿ ಅನಾನುಕೂಲವಾಗುತ್ತಿರುವುದರಿಂದ ವಿದ್ಯಾರ್ಥಿಗಳ ಹಾಜರಾತಿ ಹಿತದೃಷ್ಟಿಯಿಂದ ಆಗಸ್ಟ್ 01 ರಿಂದ ಪ್ರತಿ ದಿನ ಬೆಳಗ್ಗೆ 9 ಗಂಟೆಗೆ ತರಗತಿಗಳನ್ನು ಪ್ರಾರಂಭಿಸುವುದು.
  • ವೇಳಾಪಟ್ಟಿ ಬದಲಾವಣೆಯಿಂದಾಗಿ ಪಠ್ಯೇತರ ಚಟುವಟಿಕೆಗಳಾದ ಎನ್ ಎಸ್ ಎಸ್, ಎನ್ ಸಿ ಸಿ, ಕೌಶಲ್ಯಾಭಿವೃದ್ಧಿ ತರಬೇತಿ, ವಿಶೇಷ ತರಗತಿಗಳು, ಕ್ರೀಡಾ ಚಟುವಟಿಕೆಗಳನ್ನು ಯಾವುದೇ ರೀತಿಯಿಂದಲೂ ಕಡಿತಗೊಳಿಸತಕ್ಕದ್ದಲ್ಲ.

English summary
The college education department has finally decided to start government first class colleges at 9 instead of 8 in the morning.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia