ಬೆಂಗಳೂರಿನಲ್ಲಿ ಬೆಳಗ್ಗೆ 8ಕ್ಕೆ ಕಾಲೇಜು, 110 ದಿನಗಳಿಗೆ ಒಂದು ಸೆಮಿಸ್ಟರ್!

Posted By:

ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಪದವಿ ಕಾಲೇಜು ಸಮಯ ಮತ್ತು ಅವಧಿಯಲ್ಲಿ ಮಾರ್ಪಾಡು ಮಾಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

ತರಗತಿಗಳನ್ನು ಬೆಳಗ್ಗೆ 8 ಗಂಟೆಗೆ ಆರಂಭಿಸುವುದರ ಜೊತೆಗೆ 90 ದಿನಗಳ ಸೆಮಿಸ್ಟರ್ಗಳನ್ನು 110 ದಿನಗಳಿಗೆ ವಿಸ್ತರಿಸುವ ಯೋಜನೆಯನ್ನು ಉನ್ನತ ಶಿಕ್ಷಣ ಇಲಾಖೆಯ ಮುಂದಿಡಲಾಗಿದೆ.

ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಅತಿ ಚುರುಕಿನಿಂದ ಕೂಡಿದ್ದು, ಹೇಳಿಕೊಟ್ಟಿದ್ದನ್ನು ವೇಗವಾಗಿ ಗ್ರಹಿಸ ಬಲ್ಲವರಾಗಿದ್ದಾರೆ. ಇಂದಿನ ಮಕ್ಕಳ ಐಕ್ಯೂ ಶಕ್ತಿಯು ಬಹಳಷ್ಟಿದೆ, ಇದರಿಂದ ಅವರು ಮತ್ತಷ್ಟು ವಿಷಯಗಳನ್ನು ಕಲಿಯಬಹುದಾಗಿದೆ. ವಿದೇಶಿ ಭಾಷೆಗಳನ್ನು ಕಲಿತು ಮುಂದಿನ ವಿದ್ಯಾಭ್ಯಾಸಕ್ಕೆ ವಿದೇಶಗಳಿಗೂ ಹೋಗಬಹುದು ಮತ್ತು ಅವರ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿ ಅಜಯ್ ನಾಗಭೂಷಣ್ ಹೇಳಿದ್ದಾರೆ.

ಬದಲಾಗಲಿದೆ ಡಿಗ್ರಿ ಕಾಲೇಜುಗಳ ದಿನಚರಿ

ಬೆಂಗಳೂರಿನಲ್ಲಿ ಬಹುತೇಕ ಕಾಲೇಜುಗಳು ಬೆಳಗ್ಗೆ 9 ಅಥವಾ 10 ಕ್ಕೆ ಆರಂಭಗೊಳ್ಳುತ್ತವೆ, ಇನ್ನು ಕೆಲವು ಕಾಲೇಜುಗಳಲ್ಲಿ ಬೆಳಗಿನ ಮತ್ತು ಸಂಜೆಯ ಶಿಕ್ಷಣ ನೀಡಲಾಗುತ್ತಿದ್ದು, ಕಾಲೇಜಿನ ಸಮಯಗಳಲ್ಲಿ ಏಕಸ್ವಾಮ್ಯತೆ ತರಬೇಕು ಎಂದು ಅವರು ಹೇಳಿದ್ದಾರೆ.

ಕಲಿಕೆಯ ಸಾಮರ್ಥ್ಯ ಮತ್ತು ಗುಣಮಟ್ಟವನ್ನು ಹೆಚ್ಚಿಸ ಬೇಕೆಂದರೆ ಈಗಿನ ಕಾಲೇಜು ವೇಳೆ ಮತ್ತು ಅವಧಿಯನ್ನು ವಿಸ್ತರಿಸುವುದು ಅನಿವಾರ್ಯ ಎಂದು ಅವರು ವಿವರಿಸಿದ್ದಾರೆ. ಅಲ್ಲದೇ ಬೆಳಗಿನ ಸಮಯದಲ್ಲಿ ವಿದ್ಯಾರ್ಥಿಗಳು ಹುಮ್ಮಸ್ಸಿನಿಂದ ಇರುತ್ತಾರೆ. ಆ ವೇಳೆಯಲ್ಲಿ ಪಾಠಗಳು ಬೇಗನೆ ಅರ್ಥವಾಗುತ್ತವೆ. ಇದರಿಂದ ಕಲಿಕೆಗೆ ಹೆಚ್ಚು ಅನುಕೂಲವಾದಂತೆ ಎಂದು ಅವರು ಹೇಳಿದ್ದಾರೆ.

ಬೆಳಗ್ಗೆ 8 ಕ್ಕೆ ರಿಂದ ಮಧ್ಯಾಹ್ನ 2:30 ರವರೆಗೂ ಕಾಲೇಜುಗಳು ನಡೆಯಲಿವೆ, ಕಾಲೇಜು ಮುಗಿದ ನಂತರ ವಿದ್ಯಾರ್ಥಿಗಳು ಬೇರೆ ವಿಷಯಗಳನ್ನು ಅಭ್ಯಸಿಸಬಹುದು, ಅಲ್ಲದೇ ಪಾರ್ಟ್ ಟೈಂ ಕೆಲಸ ಮಾಡುತ್ತ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೂ ಇದು ಸಾಕಷ್ಟು ಅನುಕೂಲವಾಗುತ್ತದೆ ಎಂದು ಅವರು ವಿವರಿಸಿದರು.

ಕಾಲೇಜು ನಡೆಯವ ಅವಧಿಯ ವಿಸ್ತರಣೆ ಕೂಡ ಅನಿವಾರ್ಯವಾಗಿದೆ. ಪ್ರಸ್ತುತ 90 ದಿನಗಳಿಗೆ ಸೆಮಿಸ್ಟರ್ ಗಳು ನಡೆಯುತ್ತಿದ್ದು ಅದುನ್ನು 110 ದಿನಗಳಿಗೆ ವಿಸ್ತರಿಸುವ ವಿಚಾರವನ್ನು ಶಿಕ್ಷಣ ಇಲಾಖೆಯ ಮುಂದಿಡಲಾಗಿದೆ. ಈಗಿರುವ 90 ದಿನಗಳಲ್ಲಿ ಪರೀಕ್ಷೆಗಳು, ಮೌಲ್ಯಮಾಪನ ಮತ್ತು ಫಲಿತಾಂಶಗಳಲ್ಲೇ ಕಳೆದು ಹೋಗುತ್ತದೆ. ಅಲ್ಲದೇ ರಜಾ ದಿನಗಳು ಕಾಲೇಜು ಕಾರ್ಯಕ್ರಮಗಳು ಎಂದು ಇನ್ನರ್ಧ ದಿನಗಳು ಕಳೆದು ಹೋಗುತ್ತವೆ ಹಾಗಾಗಿ 20 ದಿನಗಳನ್ನು ಹೆಚ್ಚಿಸುವುದು ಅನಿವಾರ್ಯ ಎಂದು ಹೇಳಿದ್ದಾರೆ.

ಸೆಮಿಸ್ಟರ್ ಗಳ ದಿನವನ್ನು ಹೆಚ್ಚಿಸುವ ಬಗ್ಗೆ ಸಾಕಷ್ಟು ಚಿಂತನೆಗಳು ನಡೆದಿವೆ. ಈಗಾಗಲೇ ಹಿರಿಯ ಶಿಕ್ಷಣ ತಜ್ಞರುಗಳ ಬಳಿ ಸಲಹೆಗಳನ್ನು ಕೇಳಲಾಗಿದೆ. ಈ ಕುರಿತು ಸರಿಯಾದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

English summary
The Department of Collegiate Education has sent a set of recommendations to the Higher Education Council to 'improve' the learning process of students. This includes classes starting before 8 am, and a 110-day semester (against the current 90-day period), among other points.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia