ಅನುದಾನಿತ ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ನಿರ್ಧಾರ

Posted By:

ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲು ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದೆ.

ಈ ಸಂಬಂಧ ಅನುದಾನಿತ ಪ್ರಥಮ ದರ್ಜೆ (ಪದವಿ) ಕಾಲೇಜುಗಳಲ್ಲಿ ಖಾಲಿ ಹುದ್ದೆಗಳ ವಿವರ ನೀಡುವಂತೆ ಶಿಕ್ಷಣ ಇಲಾಖೆ ಕಾಲೇಜುಗಳಿಗೆ ಸುತ್ತೋಲೆ ಕಳುಹಿಸಿದೆ.

ನಿವೃತ್ತಿ, ರಾಜಿನಾಮೆ, ನಿಧನ ಹಾಗೂ ಇನ್ನಿತರ ಕಾರಣಗಳಿಂದ ತೆರವಾಗಿರುವ ಬೋಧಕ ಹುದ್ದೆಗಳನ್ನು ನಿಯಮಾನುಸಾರ ನಿಗದಿತ ವಿದ್ಯಾರ್ಥಿಗಳ ಸಂಖ್ಯೆ, ಮೀಸಲಾತಿ ಮತ್ತು ಅಗತ್ಯ ಕಾರ್ಯಭಾರದ ಆಧಾರದ ಮೇಲೆ ಕೆಲವೊಂದು ಷರತ್ತುಗಳನ್ನು ಪೂರೈಸಿರುವ ಬಗ್ಗೆ ಖಚಿತಪಡಿಸಿಕೊಂಡ ನಂತರ ಭರ್ತಿ ಮಾಡಿಕೊಳ್ಳಲಾಗುವುದು. ಹೀಗೆ ನೇಮಕವಾದ ಸಹಾಯಕ ಪ್ರಾಧ್ಯಾಪಕರಿಗೆ ಕಾಲೇಜು ಶಿಕ್ಷಣ ಇಲಾಖೆಯೇ ವೇತನ ಪಾವತಿಸುತ್ತದೆ.

ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ನಿರ್ಧಾರ

ರಾಜ್ಯದಲ್ಲಿ 315 ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಿದ್ದು, ಹತ್ತು ವರ್ಷಗಳಿಂದ ಈ ಕಾಲೇಜುಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಅತಿಥಿ ಉಪನ್ಯಾಸಕರುಗಳಿಂದಲೇ ತರಗತಿಗಳನ್ನು ನಡೆಸಲಾಗುತಿತ್ತು.

ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ

ಅನುದಾನಿತ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕ ಅಧಿಕಾರ ಇಲ್ಲಿಯವರೆಗೆ ಆಯಾ ಕಾಲೇಜುಗಳಿಗೆ ಇತ್ತು. ಈಗ ಅದನ್ನು ಬದಲಿಸಿ ಸರ್ಕಾರದಿಂದಲೇ ಕೇಂದ್ರೀಕೃತ ಕೌನ್ಸೆಲಿಂಗ್ ಮೂಲಕ ಆಯ್ಕೆ ಮಾಡಬೇಕೆಂಬ ಚರ್ಚೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸದ್ಯದ ನಿಯಮಗಳ ಪ್ರಕಾರ ಕಾಲೇಜುಗಳು ಖಾಲಿ ಹುದ್ದೆಗಳ ವಿವರಗಳನ್ನು ಇಲಾಖೆಗೆ ಸಲ್ಲಿಸಬೇಕು. ಇಲಾಖೆ ಅನುಮೋದನೆ ದೊರೆತ ಬಳಿಕ ಕಾಲೇಜಿನಲ್ಲಿಯೇ ಸಮಿತಿ ರಚಿಸಿ, ಮೀಸಲಾತಿ, ರೋಸ್ಟರ್ ಹಾಗೂ ಯುಜಿಸಿ ನಿಯಮಾವಳಿ ಪ್ರಕಾರ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಬೇಕು. ಅನಂತರ ಸರ್ಕಾರದಿಂದ ಅದಕ್ಕೆ ಅನುಮೋದನೆ ಪಡೆಯಬೇಕು.

ಮಂಜೂರಾಗಿರುವ ಹುದ್ದೆಗಳ ಪೈಕಿ 2015ರ ಡಿಸೆಂಬರ್ 31ರವರೆಗೆ ನಿವೃತ್ತಿ, ನಿಧನ ಹಾಗೂ ರಾಜೀನಾಮೆ ಕಾರಣಗಳಿಂದ ಖಾಲಿಯಾಗಿರುವ ಬೋಧಕ ಹುದ್ದೆಗಳ ವಿವರವನ್ನು ಈ ತಿಂಗಳ ಅಂತ್ಯದೊಳಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಈ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಬಹಳಷ್ಟು ಉಪನ್ಯಾಸಕರಿಗೆ ನೇಮಕಾತಿ ಸಂದರ್ಭದಲ್ಲಿ ತಮ್ಮನ್ನು ಪರಿಗಣಿಸಬಹುದು ಎಂಬ ನಿರೀಕ್ಷೆ ಇದೆ.

English summary
Department of collegiate education has sent circular to all 315 aided first grade colleges to recruit assistant professor.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia