ಡಾ.ಮೌಲಾನಾ ಅಬ್ದುಲ್ ಕಲಾಂ ಆಜಾದ್ ಜನ್ಮದಿನ: ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲು ಕರೆ

Posted By:

ಭಾರತದ ಮೊಟ್ಟ ಮೊದಲ ಶಿಕ್ಷಣ ಸಚಿವರಾದ ಭಾರತರತ್ನ ಡಾ.ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ ಜನ್ಮದಿನವನ್ನು 'ರಾಷ್ಟ್ರೀಯ ಶಿಕ್ಷಣ ದಿನ'ವನ್ನಾಗಿ ಆಚರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ.

ನವೆಂಬರ್ 11 ರಂದು ಡಾ.ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ ಜನ್ಮದಿನವಾಗಿದ್ದು, ಅವರ ಜೀವನ ಮತ್ತು ಸಾಧನೆಯ ಬಗ್ಗೆ ಮಕ್ಕಳಿಗೆ ತಿಳಿಸುವುದು ಮುಖ್ಯ ಕರ್ತವ್ಯವಾಗಿದೆ. ಹಾಗಾಗಿ ದಿನಾಂಕ 11-11-2017 ರ ದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ನವೆಂಬರ್ 11 ರಾಷ್ಟ್ರೀಯ ಶಿಕ್ಷಣ ದಿನ

ಆಚರಣೆ ಹೇಗೆ?

  • ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಭಾರತರತ್ನ ಡಾ.ಮೌಲಾನಾ ಅಬ್ದುಲ್ ಕಲಾಂ ಆಜಾದ್ ರವರ ಜನ್ಮದಿನದ ಅಂಗವಾಗಿ ಅವರ ಬಗ್ಗೆ ವಿಚಾರ ಸಂಕೀರ್ಣಗಳು, ಪ್ರಬಂಧ ರಚನೆ, ಕಾರ್ಯಗಾರಗಳು ಹಾಗೂ ಜಾಥಾಗಳನ್ನು ಹಮ್ಮಿಕೊಳ್ಳುವುದು.
  • ಸಾಕ್ಷರತೆ ಪ್ರಾಮುಖ್ಯತೆ ಹಾಗೂ ಶಿಕ್ಷಣದ ಬಗ್ಗೆ ರಾಷ್ಟ್ರದ ಬದ್ಧತೆಗಳ ಹೇಳಿಕೆಗಳ ಮೂಲಕ ಬಿತ್ತಿ ಪತ್ರಗಳನ್ನು ಪ್ರದರ್ಶಿಸುವುದು.
  • ರಾಷ್ಟ್ರದ ಶಿಕ್ಷಣ ಸಂಸ್ಥೆಗಳನ್ನು ಬಲಗೊಳಿಸುವುದು ಹಾಗೂ ಶಿಕ್ಷಣದ ಗುಣಮಟ್ಟವನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
  • ಡಾ.ಮೌಲಾನಾ ಅಬ್ದುಲ್ ಕಲಾಂ ಆಜಾದ್ ರವರು ಶೈಕ್ಷಣಿಕ ಪದ್ಧತಿಗೆ ತಮ್ಮ ಅಮೂಲ್ಯವಾದ ಕೊಡುಗೆಗಳ ಮೂಲಕ ಭದ್ರ ಬುನಾದಿ ಹಾಕಿರುವುದನ್ನು ಪುನರ್ ನೆನಪಿಸಿಕೊಳ್ಳುವುದು.

ಡಾ.ಮೌಲಾನಾ ಅಬ್ದುಲ್ ಕಲಾಂ ಆಜಾದ್

ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಾತ್ಮಗಾಂಧಿಯವರ ಜೊತೆಗಾರರಾಗಿದ್ದ ಪ್ರಮುಖರಲ್ಲಿ ಮೌಲಾನಾ ಅಬ್ಬುಲ್ ಕಲಾಂ ಒಬ್ಬರು. ಅವರು ಜನಿಸಿದ್ದು ನವೆಂಬರ್ 11, 1888ರಲ್ಲಿ.

ಉರ್ದು ವಿದ್ವಾಂಸರಾಗಿದ್ದ ಅವರು ತಮ್ಮ ಬರವಣಿಗೆಗಾಗಿ 'ಆಜಾದ್' ಎಂಬ ನಾಮಾಂಕಿತವನ್ನು ಬಳಸುತ್ತಿದ್ದರು. ಹೀಗಾಗಿ ಅವರು ಮೌಲಾನಾ ಆಜಾದ್ ಎಂದೇ ಪ್ರಸಿದ್ದರು.

ಪತ್ರಕರ್ತರಾಗಿ ಬ್ರಿಟಿಷ್ ಆಡಳಿತ ವಿರುದ್ಧ ಬರೆಯುತ್ತಿದ್ದ ಲೇಖನಗಳಿಂದ ಮೌಲಾನಾ ಆಜಾದರು ಪ್ರಸಿದ್ಧಿ ಪಡೆದಿದ್ದರು. ಖಿಲಾಫತ್ ಚಳುವಳಿಯ ನೇತೃತ್ವ ವಹಿಸಿದ್ದ ಆಜಾದರು ಮಹಾತ್ಮ ಗಾಂಧೀಜಿಯವರ ನಿಕಟವರ್ತಿಗಳಾದರು. ಮಹಾತ್ಮರು ಆಯೋಜಿಸಿದ್ದ ಅಸಹಕಾರ ಚಳುವಳಿಯಲ್ಲಿ ಅತ್ಯಂತ ಕ್ರಿಯಾಶೀಲ ಯುವಕ ಎಂದು ಹೆಸರಾದರು.

ಗಾಂಧೀಜಿಯವರ 'ಸ್ವದೇಶಿ', 'ಸ್ವರಾಜ್' ಚಿಂತನೆಗಳಿಗೆ ಮಾರು ಹೋಗಿ ಅವರ ಜೊತೆ ನಿರಂತರವಾಗಿದ್ದ ಅಬ್ದುಲ್ ಕಲಾಂ 1923ರ ವರ್ಷದಲ್ಲಿ ತಮ್ಮ 35ನೇ ವಯಸ್ಸಿನಲ್ಲಿಯೇ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಅತ್ಯಂತ ಕಿರು ವಯಸ್ಸಿನವರಾಗಿದ್ದರು.

1931ರ ವರ್ಷದಲ್ಲಿ 'ದರ್ಶನ ಸತ್ಯಾಗ್ರಹ'ದ ಪ್ರಮುಖ ಆಯೋಜಕರಾಗಿದ್ದ ಮೌಲಾನ ಹಲವಾರು ಕಠಿಣ ಸೆರೆವಾಸಗಳನ್ನು ಕಂಡರು. ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಮೂರು ವರ್ಷಗಳ ಕಾಲ ಸತತವಾಗಿ ಸೆರೆಯಲ್ಲಿಯೇ ಇದ್ದರು. ಸ್ವಾತಂತ್ರ್ಯದ ಸಮಯದಲ್ಲಿ ದೇಶದ ವಿಭಜನೆಯ ಕೂಗನ್ನು ಬೆಂಬಲಿಸದಿದ್ದ ಅವರು ಭಾರತದ ಪರವಾಗಿಯೇ ಇದ್ದರು.

English summary
Education department of Karnataka has sent circular to all schools to celebrate National Education Day in the memory of Dr Maulana Abul Kalam Azad.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia