ಆಕೆಯ 'ಆ ದಿನಗಳನ್ನು' ಅರಿತ ಖಾಸಗಿ ಸಂಸ್ಥೆಗಳು: ಮಹಿಳಾ ಉದ್ಯೋಗಿಗಳಲ್ಲಿ ಸಂತಸ

Posted By:

ಭಾರತೀಯರ ಸಂಪ್ರದಾಯಗಳು ನಿಧಾನವಾಗಿ ಎಲ್ಲರಿಗೂ ಅರ್ಥವಾಗುತ್ತಿವೆ. ಇದಕ್ಕೆ ಸಾಕ್ಷಿ ಎಂದರೆ ಕೇರಳದ ಖಾಸಗಿ ಸಂಸ್ಥೆಯೊಂದು ಮಹಿಳೆಯರಿಗೆ ಋತುಸ್ರಾವದ ಮೊದಲ ದಿನ ರಜೆ ನೀಡಿರುವುದು.

ಕೆಲದಿನಗಳ ಹಿಂದಷ್ಟೇ ಋತುಸ್ರಾವದ ಮೊದಲ ದಿನ ಮಹಿಳೆಯರಿಗೆ ರಜೆ ನೀಡಬೇಕೆಂಬ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ಎರಡು ಕಂಪೆನಿಗಳು ತೆಗೆದುಕೊಂಡ ನಿರ್ಧಾರ ಚರ್ಚೆಗೆ ನಾಂದಿಹಾಡಿದ್ದವು, ಈಗ ಕೇರಳದ ಮಾಧ್ಯಮ ಸಂಸ್ಥೆ ಕೂಡ ಈ ನಿಯಮಕ್ಕೆ ಒತ್ತು ನೀಡಿದೆ.

ಮುಂಬೈ ಮೂಲದ ಕಲ್ಚರಲ್ ಮಷಿನ್ ಕಂಪೆನಿ ಈ ನಿಯಮವನ್ನು ಜಾರಿಗೆ ತಂದಿತ್ತು, ನಂತರ ಗೋಜೋಪ್ ಕಂಪೆನಿ ಸಹ ಈ ನಿಯಮವನ್ನು ಸ್ವಾಗತಿಸಿ, ತಾನೂ ಅಳವಡಿಸಿಕೊಂಡಿತ್ತು.

ಮಹಿಳಾ ಉದ್ಯೋಗಿಗಳಲ್ಲಿ ಸಂತಸ

ಕೇರಳದ ಪ್ರಸಿದ್ಧ ಸುದ್ದಿ ಚಾನಲ್ ಮಾತೃಭೂಮಿಯು ತನ್ನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರಿಗೆ ವರ್ಷದಲ್ಲಿ 12 ದಿನ ವೇತನ ಸಹಿತ ರಜೆ ನೀಡುವ ನಿರ್ಧಾರಮಾಡಿದೆ.

ಹಿರಿಯರ ಸಂಪ್ರದಾಯಕ್ಕೆ ವೈದ್ಯರ ಸಹಮತ

ಋತುಸ್ರಾವದ ಮೂರರಿಂದ ನಾಲ್ಕು ದಿನ ಹೆಣ್ಣುಮಕ್ಕಳಿಗೆ ದೈಹಿಕ ಹಾಗೂ ಮಾನಸಿಕ ಶ್ರಮದ ಕೆಲಸ ಕೊಡಲೇಬಾರದು. ಆ ಕಾರಣಕ್ಕೆ ನಮ್ಮ ಹಿರಿಯರು ಹೆಣ್ಣುಮಕ್ಕಳಿಗೆ ಪ್ರತ್ಯೇಕ ಕೋಣೆ ಬಿಟ್ಟುಕೊಟ್ಟು ಯಾವುದೇ ಕೆಲಸ ಮಾಡಲು ಬಿಡುತ್ತಿರಲಿಲ್ಲ. ಅದರಲ್ಲಿ ಇದ್ದದ್ದು ಆರೋಗ್ಯ ಕಾಳಜಿಯೇ ಹೊರತು ಮೂಢನಂಬಿಕೆಯಲ್ಲ ಎನ್ನುತ್ತಾರೆ ವೈದ್ಯರುಗಳು.

'ಋತುಸ್ರಾವದ ಸಮಯದಲ್ಲಿ ದೇಹದಲ್ಲಾಗುವ ಹಾರ್ಮೋನ್ ವ್ಯತ್ಯಯದಿಂದಾಗಿ ಮಹಿಳೆಯರು ಮಾನಸಿಕ ಹಾಗೂ ದೈಹಿಕವಾಗಿ ತೀರಾ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಕಚೇರಿಗೆ ಬಂದು, ಒತ್ತಡದ ಕೆಲಸ ಮಾಡುವುದು ನಿಜಕ್ಕೂ ಕಷ್ಟದ ವಿಚಾರ. ಆದ್ದರಿಂದಲೇ ಇಂಥ ನಿರ್ಧಾರ ತೆಗೆದುಕೊಂಡಿದ್ದೇವೆ. ನಮ್ಮ ಕಚೇರಿಯಲ್ಲಿ ಕೆಲಸ ಮಾಡುವ ಮಹಿಳೆಯರ ಒಳಿತಿಗೆ ನಾವು ಬದ್ಧ' ಎನ್ನುವುದು ಕಂಪೆನಿಯ ಮುಖ್ಯಸ್ಥರ ಮಾತು.

ಪತ್ರಿಕೋದ್ಯಮ ತುಂಬಾ ಒತ್ತಡದ ಉದ್ಯೋಗ. ಋತುಸ್ರಾವದ ವೇಳೆ ನಮ್ಮ ಮಹಿಳೆಯರು ಅನುಭವಿಸುವ ಕಷ್ಟವನ್ನು ನಾವು ಅರ್ಥಮಾಡಿಕೊಳ್ಳಬೇಕು. ಈ ಹಿಂದೆ ಮಹಿಳೆಯರಿಗೆ ಋತುಸ್ರಾವದ ರಜೆ ತೆಗೆದುಕೊಳ್ಳುವುದು ಕೇವಲ ಆಯ್ಕೆಯಾಗಿತ್ತು. ಮಹಿಳೆಯರಿಗೆ ವರ್ಷದಲ್ಲಿ ನೀಡುವ ರಜೆಗಳನ್ನು ಹೊರತುಪಡಿಸಿ 12 ದಿನಗಳ ರಜೆಯನ್ನು ನೀಡಲಾಗುವುದು ಎಂದು ಮಾತೃಭೂಮಿ ಚಾನೆಲ್‌ನ ಜಂಟಿ ನಿರ್ವಹಣಾ ಮುಖ್ಯಸ್ಥರು ಹೇಳಿದ್ದಾರೆ.

ಈ ಹಿಂದೆ ಹಲವು ರಾಜ್ಯಗಳಲ್ಲಿ ಈ ನಿಯಮವನ್ನು ಜಾರಿಗೆ ತರಲು ಅನೇಕ ಪ್ರಯತ್ನಗಳು ನಡೆದಿದ್ದವು. ಬಿಹಾರ ಸರ್ಕಾರವು ಸಹ ಮಹಿಳೆಯರಿಗೆ ಋತುಸ್ರಾವದ ವೇಳೆ ಎರಡು ದಿನಗಳ ರಜೆ ನೀಡಬೇಕೆಂದು ಮನವಿ ಮಾಡಿತ್ತು. ಈಗ ಖಾಸಗಿ ಸಂಸ್ಥೆಗಳು ಒಂದೊಂದಾಗಿ ಈ ನಿಯಮಗಳನ್ನು ಅಳವಡಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

English summary
Kerala-based media company has introduced a “First Day of Period” leave policy for women employees. Company applied this policy from July this year

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia