ಹಾಸ್ಟೆಲ್ ಮಕ್ಕಳಿಗೂ ಸಿಕ್ತು ಬೈಸಿಕಲ್ ಭಾಗ್ಯ

Posted By:

ಈವರೆಗೂ ಸರ್ಕಾರಿ, ಅನುದಾನಿತ ಹೈಸ್ಕೂಲು ಮಕ್ಕಳಿಗೆ ಮಾತ್ರವಿದ್ದ ಸೈಕಲ್ ಭಾಗ್ಯ ಈಗ ಹಾಸ್ಟೆಲ್ ಮಕ್ಕಳಿಗೂ ಒಲಿದಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲೆಗಳ ಮಕ್ಕಳು, ಹಾಸ್ಟೆಲ್ ಮಕ್ಕಳು, ಬಸ್ ಪಾಸ್ ಸೌಲಭ್ಯ ಹೊಂದಿದ ಮಕ್ಕಳನ್ನು ಈ ಯೋಜನೆಯಿಂದ ಹೊರಗಿಡಲಾಗಿತ್ತು. ಒಂದಷ್ಟು ವರ್ಷ ತಡವಾಗಿಯಾದರು ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ಗಳಿಗೂ ಅದು ಈಗ ವಿಸ್ತರಣೆಯಾಗಿದೆ. ಈ ವರ್ಷದಿಂದ ಹಾಸ್ಟೆಲ್ನಲ್ಲಿರುವ ಎಂಟನೇ ತರಗತಿ ಬಾಲಕ, ಬಾಲಕಿಯರಿಗೂ ಈ ಸೌಲಭ್ಯ ಸಿಗಲಿದೆ.

ಹಾಸ್ಟೆಲ್  ಮಕ್ಕಳಿಗೆ ಬೈಸಿಕಲ್ ಭಾಗ್ಯ

ಮಾರ್ಚ್ ತಿಂಗಳಾಂತ್ಯಕ್ಕೆ ವಿತರಣೆ

2016 -17 ನೇ ಶೈಕ್ಷಣಿಕ ವರ್ಷದಿಂದಲೇ ಹಾಸ್ಟೆಲ್ ಮಕ್ಕಳಿಗೆ ಉಚಿತ ಬೈಸಿಕಲ್ ವಿತರಣೆಗೆ ಮುಂದಾದ ಸರ್ಕಾರ ಜ.23 ರಂದು ಈ ಕುರಿತು ಆದೇಶ ಹೊರಡಿಸಿತ್ತು. ಹಾಗಾಗಿ ಶಿಕ್ಷಣ ಇಲಾಖೆ ಗುರುತಿಸಿದ ಏಜೆನ್ಸಿಯೊಂದರ ಮೂಲಕ ಹಾಸ್ಟೆಲ್ಗಳಿಗೆ ಈಗಾಗಲೇ ಸೈಕಲ್ಗಳು ಬಂದಿವೆ. ಮಾರ್ಚ್ ಅಂತ್ಯದ ಒಳಗೆ ಮಕ್ಕಳಿಗೆ ವಿತರಣೆಯಾಗಲಿವೆ.

ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಯೋಜನೆ ವಿಸ್ತರಿಸಲು ಕಾರಣ

ಸೈಕಲ್ ವಿತರಣೆಯ ಯೋಜನೆ ಆರಂಭವಾದ ನಂತರ ರಾಜ್ಯದಲ್ಲಿ ಕೆಲವು ಬದಲಾವಣೆಗಳಾಗಿದ್ದವು. ಹಾಸ್ಟೆಲ್ಗೆ ಪ್ರವೇಶ ಪಡೆಯುವ ಮಕ್ಕಳ ಸಂಖ್ಯೆ ಪ್ರತಿ ವರ್ಷ ಇಳಿಮುಖ ಆಗುತ್ತಿರುವ ವಿಷಯವನ್ನು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ಗಮನಕ್ಕೆ ತಂದಿದ್ದರು. ಅಲ್ಲದೇ ಅನೇಕ ಹಾಸ್ಟೆಲ್ಗಳು ಶಾಲೆಗಳಿಂದ ದೂರವಿದ್ದು ವಿದ್ಯಾರ್ಥಿಗಳು ಸೂಕ್ತ ಸಮಯಕ್ಕೆ ಶಾಲೆ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಸೈಕಲ್ ವಿತರಣೆಯಿಂದ ಹಾಸ್ಟೆಲ್ ಸೇರುವ ಮಕ್ಕಳ ಸಂಖ್ಯೆ ಮತ್ತೆ ಹೆಚ್ಚಬಹುದು ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಈಗ ಹಾಸ್ಟೆಲ್ ಮಕ್ಕಳಿಗೂ ಸೈಕಲ್ ಭಾಗ್ಯ ಒಲಿದುಬಂದಿದೆ.

ಸೈಕಲ್ ವಿತರಣಾ ವಿವರ

ರಾಜ್ಯದಲ್ಲಿ ಒಟ್ಟು 1445 ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಿವೆ, ಅವುಗಳಲ್ಲಿ  1,02,103 ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ಈ ವರ್ಷ ಎಂಟನೇ ತರಗತಿ ಓದುತ್ತಿರುವ 14 ,107 ಮಕ್ಕಳಿಗೆ ಸೈಕಲ್ ವಿತರಿಸಲಾಗುತ್ತಿದೆ. ಸಾಮಾನ್ಯ ವರ್ಗದಲ್ಲಿ 4,92,500 ಬೈಸಿಕಲ್ಗಳನ್ನು ಈ ವರ್ಷ ವಿತರಿಸಲಾಗಿದೆ.

ಈ ವರ್ಷ ಸಾಮಾನ್ಯ ವರ್ಗದ ಮಕ್ಕಳಿಗೂ ಸೈಕಲ್ ವಿತರಣೆ ವಿಳಂಭವಾಗಿತ್ತು. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಬೈಸಿಕಲ್ ನೀಡುವ ಆದೇಶವು ತಡವಾಗಿದ್ದರಿಂದ ಈಗ ಒಟ್ಟಿಗೆ ವಿತರಣೆ ಆಗುತ್ತಿದೆ.

ಬೈಸಿಕಲ್ ಯೋಜನೆ

2006-07 ರಲ್ಲಿ ಸಮ್ಮಿಶ್ರ ಸರ್ಕಾರದ ಆಢಳಿತಾವಧಿಯಲ್ಲಿ ಶಾಲಾ ಮಕ್ಕಳಿಗಾಗಿ ಸೈಕಲ್ ಭಾಗ್ಯ ಶುರುವಾಯಿತು. ಇದು ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಮಕ್ಕಳಿಗೆ ಅದರಲ್ಲೂ ಗ್ರಾಮೀಣ ಭಾಗಗಳಲ್ಲಿ ಮತ್ತು ಸಾರಿಗೆ ಸಂಪರ್ಕ ಇಲ್ಲದ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಯಿತು. ಮುಖ್ಯವಾಗಿ ಶಾಲಾ ವಿದ್ಯಾರ್ಥಿನಿಯರನ್ನು ಗಮನದಲ್ಲಿಟ್ಟು ಈ ಯೋಜನೆ ರೂಪಿಸಲಾಗಿತ್ತು. ವಿದ್ಯಾರ್ಥಿನಿಯರಿಗಾಗಿ ಆರಂಭವಾದ ಈ ಯೋಜನೆಯನ್ನು 2007-08 ರಲ್ಲಿ ಬಾಲಕರಿಗೂ ವಿಸ್ತರಿಸಲಾಯಿತು.

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಲು, ಹಳ್ಳಿಗಳಲ್ಲಿ ಶಾಲೆಗೆ ವಿದ್ಯಾರ್ಥಿಗಳು ಸೂಕ್ತ ಸಮಯಕ್ಕೆ ತಲುಪಲು, ಶಿಕ್ಷಣದ ಮೌಲ್ಯವನ್ನು ಹೆಚ್ಚಿಸವ ಗುರಿಯನ್ನು  ಈ ಯೋಜನೆ ಹೊಂದಿದ್ದು, ಈಗ  ಹಾಸ್ಟೆಲ್ ವಿದ್ಯಾರ್ಥಿಗಳಿಗೂ ಸೌಲಭ್ಯ ಸಿಗಲಿದೆ.

English summary
The scheme of distribution of free bicycles to the students residing hostels .

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia