ಪ್ರಿ-ಪ್ರೈಮರಿಯಿಂದ ಪಿಎಚ್.ಡಿ ವರೆಗೂ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ಘೋಷಿಸಿದ ಪಂಜಾಬ್ ಸರ್ಕಾರ

Posted By:

ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಕುರಿತಾಗಿ ಪಂಜಾಬ್ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ನರ್ಸರಿಯಿಂದ ಪಿ.ಎಚ್ ಡಿವರೆಗೆ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಘೋಷಿಸಿದೆ.

ರಾಜ್ಯ ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಈ ವಿಚಾರವನ್ನು ಹೇಳಿದ್ದಾರೆ. ಅಲ್ಲದೇ ಸರ್ಕಾರಿ ಶಾಲೆಗಳಲ್ಲಿ ನರ್ಸರಿ ಹಾಗೂ ಎಲ್ ಕೆಜಿ ತರಗತಿಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಾದ ಮಹಿಳಾ ಸಶಕ್ತೀಕರಣದ ಭಾಗವಾಗಿ ಪಂಜಾಬ್ ಸರ್ಕಾರ ಈ ಮಹತ್ವಪೂರ್ಣ ಹೆಜ್ಜೆ ತೆಗೆದುಕೊಂಡಿದೆ.

ಪ್ರತಿ ಹೆಣ್ಣು ಮಗುವು ಉನ್ನತ ಶಿಕ್ಷಣದವರೆಗೂ ಶಿಕ್ಷಣ ಪಡೆಯಬೇಕು ಎನ್ನುವುದು ಇದರ ಉದ್ದೇಶವಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಕಲಿಯುತ್ತಿರುವ ಎಲ್ಲಾ ಹೆಣ್ಣು ಮಕ್ಕಳು ಉಚಿತ ಶಿಕ್ಷಣ ಪಡೆಯಲಿದ್ದಾರೆ.

ಪ್ರಿ-ಪ್ರೈಮರಿಯಿಂದ ಪಿಎಚ್.ಡಿ ವರೆಗೂ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ

ಹೆಚ್ಚಿದ ಮೀಸಲಾತಿ ಸಂಖ್ಯೆ

ಶಿಕ್ಷಣದ ರೀತಿಯಲ್ಲಿ ಉದ್ಯೋಗದಲ್ಲೂ ಮಹಿಳೆಯರಿಗೆ ಹೆಚ್ಚಿನ ಮೀಸಲಾತಿಯನ್ನು ಪಂಜಾಬ್ ನಲ್ಲಿ ನೀಡಲಾಗಿದೆ. ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಪಂಜಾಬ್ ಸರ್ಕಾರ ಈಗಾಗಲೇ ಶೇಕಡಾ 33ರಿಂದ ಶೇಕಡಾ 50ಕ್ಕೆ ಹೆಚ್ಚಿಸಿದೆ.

ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆ

ಚುನಾವಣಾ ಪೂರ್ವ ಭರವಸೆಗಳಲ್ಲಿ ಮತ್ತೊಂದನ್ನು ಈಡೇರಿಸಿದ ಮುಖ್ಯಮಂತ್ರಿ, 13,000 ಪ್ರಾಥಮಿಕ ಶಾಲೆಗಳು ಮತ್ತು ಎಲ್ಲಾ 48 ಸರ್ಕಾರಿ ಶಾಲೆಗಳಿಗೆ ಉಚಿತ ವೈಫೈ ಸೇವೆ ಒದಗಿಸಲಾಗುವುದು ಎಂದು ಹೇಳಿದ್ದಾರೆ.

ಮುಂದಿನ ತಿಂಗಳಿನಿಂದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಭಾಷೆಯನ್ನು ಪ್ರಚುರಪಡಿಸಲು ಮುಖ್ಯಮಂತ್ರಿಗಳು ಮಹತ್ವದ ಪ್ರಾಯೋಗಿಕ ಯೋಜನೆಯನ್ನು ಘೋಷಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 5 ಹೊಸ ಕಾಲೇಜುಗಳ ಸ್ಥಾಪನೆ ಮಾಡಲಾಗುವುದು ಎಂದು ಕೂಡ ಮುಖ್ಯಮಂತ್ರಿ ಘೋಷಿಸಿದ್ದಾರೆ.

ಚುನಾವಣೆ ವೇಳೆ ನೀಡಿದ್ದ ಭರವಸೆಗಳು

ಅಧಿಕಾರಕ್ಕೆ ಬಂದರೆ 30 ದಿನಗಳಲ್ಲಿ ರಾಜ್ಯವನ್ನು ಮಾದಕ ವಸ್ತುಗಳಿಂದ ಮುಕ್ತಗೊಳಿಸುವ, ದಲಿತರಿಗೆ ಉಚಿತ ಮನೆ ಹಾಗೂ ಹೆಣ್ಣು ಮಕ್ಕಳಿಗೆ ಒಂದನೇ ತರಗತಿಯಿಂದ ಪಿಎಚ್‌.ಡಿ ವರೆಗೆ ಉಚಿತ ಶಿಕ್ಷಣ ನೀಡುವ ಭರವಸೆಯನ್ನು ಕಾಂಗ್ರೆಸ್ ನೀಡಿತ್ತು.

ಫೆಬ್ರುವರಿ 4ರಂದು ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು, ಆ ವೇಳೆ ಕಾಂಗ್ರೆಸ್ ಪಕ್ಷವು ತನ್ನಾ ಪ್ರಣಾಳಿಕೆಯಲ್ಲಿ ಭರವಸೆಯ ಮಹಾಪೂರ ಹರಿಸಿತ್ತು. ರೈತರ ಸಾಲ ಸಂಪೂರ್ಣ ಮನ್ನಾ, ನಿರುದ್ಯೋಗಿಗಳಿಗೆ ಮಾಸಿಕ ₹2500 ಭತ್ಯೆ, ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಐದು ವರ್ಷಗಳಲ್ಲಿ ಪ್ರತಿಯೊಂದು ಮನೆಗೂ ಕನಿಷ್ಠ ಒಂದು ಉದ್ಯೋಗ ಇತರೆ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.

English summary
Punjab government has announced free education for girls from nursery to PhD in government schools and colleges.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia