ಕುಳಿತಲ್ಲಿಯೇ ಪಾಠ ಕೇಳಲು ಬರಲಿದೆ ಗೂಗಲ್ ಹ್ಯಾಂಗ್ ಔಟ್ ಲೈವ್ ಟೀಚಿಂಗ್

Posted By:

ಸರ್ಕಾರಿ ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳು ಈಗ ಪಾಠ ಕೇಳಲು ತರಗತಿಗೆ ಹೋಗಬೇಕೆಂದೇನಿಲ್ಲ. ತಾವು ಇದ್ದಲ್ಲಿಯೇ ಇಂಟರ್ನೆಟ್ ನಲ್ಲಿ ಪಾಠ ಕೇಳಬಹುದು.

ಗೂಗಲ್ ಹ್ಯಾಂಗ್ ಔಟ್ ತಂತ್ರಾಂಶದ ಮೂಲಕ ಆನ್-ಲೈನ್ ಮೂಲಕ ನೇರವಾಗಿ ಪಠ್ಯ ಬೋಧನೆ ನೀಡಲು ತಾಂತ್ರಿಕ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

ತಾಂತ್ರಿಕ ಕಾಲೇಜುಗಳಲ್ಲಿ ಬೋಧಕರ ಕೊರತೆ ನೀಗಿಸಲು ಈ ಕಾರ್ಯಕ್ರಮ ತರುತ್ತಿದ್ದು, ವಿದ್ಯಾರ್ಥಿಗಳು ಆನ್​ಲೈನ್​ನಲ್ಲೇ ಪಾಠ ಕೇಳುವುದರ ಜೊತೆಗೆ ಉಪನ್ಯಾಸಕರೊಂದಿಗೆ ಸಂವಾದ ಕೂಡ ನಡೆಸಬಹುದಾಗಿದೆ.

ಗೂಗಲ್ ಹ್ಯಾಂಗ್ ಔಟ್ ಮೂಲಕ ಲೈವ್ ಟೀಚಿಂಗ್

ಒಂದುವರೆ ಸಾವಿರ ಉಪನ್ಯಾಸಕರಿಗೆ ತರಬೇತಿ

ಆನ್-ಲೈನ್ ಶಿಕ್ಷಣಕ್ಕಾಗಿ ರಾಜ್ಯದ 1,500 ಉಪನ್ಯಾಸಕರಿಗೆ ಚಂಡೀ ಗಢದಲ್ಲಿರುವ ರಾಷ್ಟ್ರೀಯ ತಾಂತ್ರಿಕ ಶಿಕ್ಷಕರ ತರಬೇತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ತರಬೇತಿ ಕೊಡಿಸಲಾಗಿದೆ. ಪಠ್ಯಕ್ರಮದ ಪ್ರಕಾರವಾಗಿ ಬೋಧನೆ ನಡೆಯಲಿದ್ದು, ಉಪನ್ಯಾಸಕರು ವಿಡಿಯೋ ತುಣುಕು ಹಾಗೂ ಪಿಪಿಟಿ ಮೂಲಕ ಸರಳವಾಗಿ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಬೋಧನೆ ಮಾಡಲಿದ್ದಾರೆ.

ಶೇಷಾದ್ರಿ ರಸ್ತೆಯಲ್ಲಿರುವ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇದ್ದ ಸಭಾಂಗಣವನ್ನೇ ಸ್ಟುಡಿಯೋವನ್ನಾಗಿ ಮಾರ್ಪಾಡು ಮಾಡಲಾಗಿದೆ. ಅತ್ಯಾಧುನಿಕ ಕ್ಯಾಮರಾ, ಎಲ್​ಸಿಡಿ ಪರದೆ, ದೊಡ್ಡ ಪರದೆಯ ಟಿವಿ ಹಾಗೂ ನಿಯಂತ್ರಣ ಸಾಧನ ಅಳವಡಿಸಲಾಗಿದೆ.

ರಾಜ್ಯದಲ್ಲಿರುವ 11 ಸರ್ಕಾರಿ ಇಂಜಿನಿಯರಿಂಗ್ ಮತ್ತು 81 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಲೈವ್ ಪಾಠದ ವೇಳಾಪಟ್ಟಿ ರೂಪಿಸಲಾಗುತ್ತದೆ. ಆ ಮೂಲಕ ಪಾಠ ನಡೆಯಲಿದೆ. ಪ್ರತಿ ಕಾಲೇಜು ಒಂದು ಲ್ಯಾಪ್​ಟ್ಯಾಪ್ ಹಾಗೂ ಎಲ್​ಸಿಡಿ ಪರದೆ, ಸೌಂಡ್ ಬಾಕ್ಸ್ ಹೊಂದಿರಬೇಕಾಗುತ್ತದೆ. ಮುಖ್ಯವಾಗಿ 1 ಎಂಬಿಪಿಎಸ್ ಸಾಮರ್ಥ್ಯದ ಇಂಟರ್​ನೆಟ್ ಬೇಕಿದೆ. ಈ ಪರಿಕರ ಈಗಾಗಲೇ ಎಲ್ಲ ಕಾಲೇಜುಗಳಲ್ಲೂ ಲಭ್ಯವಿದೆ.

ಗೂಗಲ್ ಹ್ಯಾಂಗ್ ಔಟ್ ಕಾರ್ಯ ವೈಖರಿ

ಗೂಗಲ್ ಹ್ಯಾಂಗ್​ಔಟ್ ಬಳಕೆ ಸಾರ್ವಜನಿಕರಿಗೆ ಮುಕ್ತವಾಗಿದ್ದು, ಇದಕ್ಕಾಗಿ ಹಣ ಸಂದಾಯ ಮಾಡುವ ಅವಶ್ಯಕತೆ ಇಲ್ಲ. ಇಂಟರ್ ಕನೆಕ್ಟಿವಿಟಿ ಸೌಲಭ್ಯವಿರುವುದರಿಂದ ಲೈವ್​ನಲ್ಲೇ ವಿದ್ಯಾರ್ಥಿಗಳು ಉಪನ್ಯಾಸಕರೊಂದಿಗೆ ಸಂವಾದ ನಡೆಸಬಹುದು. ಲೈವ್​ನಲ್ಲಿ ಮಾಡಿದ ಬೋಧನೆಯನ್ನು ಯೂಟ್ಯೂಬ್​ಗೆ ಅಪ್​ಲೋಡ್ ಮಾಡುವುದರಿಂದ ವಿದ್ಯಾರ್ಥಿಗಳು ಮೊಬೈಲ್​ಗಳಲ್ಲೇ ವೀಕ್ಷಣೆ ಮಾಡಬಹುದು.

2017ರ ಮಾಹಿತಿ ಪ್ರಕಾರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 357 ಹುದ್ದೆ, ಪಾಲಿಟೆಕ್ನಿಕ್ ಕಾಲೇಜಿನಲ್ಲಿ 714 ಹುದ್ದೆಗಳು ಖಾಲಿ ಇವೆ. ಗ್ರಾಮೀಣ ಭಾಗದಲ್ಲಿ ಪಾಠ ಮಾಡಲು ಸಾಕಷ್ಟು ವಿಷಯಗಳ ಬೋಧಕರ ಕೊರತೆ ಎದುರಾಗಿದೆ. ಇದನ್ನು ನೀಗಿಸುವ ಉದ್ದೇಶದಿಂದ ಈ ಲೈವ್ ಬೋಧನೆ ಮಾಡಲಾಗುತ್ತದೆ. ಈಗಾಗಲೇ ಪ್ರಾಯೋಗಿಕವಾಗಿ ಲೈವ್ ಬೋಧನೆ ಪ್ರಗತಿಯಲ್ಲಿದೆ. ಅಧಿಕೃತವಾಗಿ ಉನ್ನತ ಶಿಕ್ಷಣ ಸಚಿವರು ಶೀಘ್ರದಲ್ಲೇ ಚಾಲನೆ ನೀಡಲಿದ್ದಾರೆ ಎಂದು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೆಶಕರಾದ ಯು.ಟಿ.ತಳವಾರ್ ತಿಳಿಸಿದ್ದಾರೆ.

English summary
Department of Technical education of Karnataka now planning to Online Teaching through Google Hangout to the polytechnic and engineering students.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia