ಸಹಾಯಕ ಪ್ರಾಧ್ಯಾಪಕರ ನೇಮಕಾತಿ: 1,654 ಮಂದಿಗೆ ನೇಮಕಾತಿ ಆದೇಶ

Posted By:

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕ ಆದೇಶ ನೀಡುವ ಪ್ರಕ್ರಿಯೆ ಮುಗಿದಿದೆ.

ಈಗಾಗಲೇ 1,654 ಮಂದಿಗೆ ನೇಮಕಾತಿ ಆದೇಶ ನೀಡಲಾಗಿದ್ದು, ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾದವರ ಪೈಕಿ 380 ಅಭ್ಯರ್ಥಿಗಳ ದಾಖಲೆಗಳ ಬಗ್ಗೆ ಗೊಂದಲ ಇರುವುದರಿಂದ ಅವರನ್ನು ಕೈ ಬಿಡಲಾಗಿದೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ 2,160 ಸಹಾಯಕ ಪ್ರಾಧ್ಯಾಪಕರ ನೇಮಕ ಪ್ರಕ್ರಿಯೆ ನಡೆಸಲಾಗಿತ್ತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನೇಮಕಾತಿ ಪ್ರಕ್ರಿಯೆ ನಡೆಸಿ 2,034 ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಕಾಲೇಜು ಶಿಕ್ಷಣ ಇಲಾಖೆಗೆ ನೀಡಿತ್ತು.

ಸಹಾಯಕ ಪ್ರಾಧ್ಯಾಪಕರ ನೇಮಕಾತಿ

ನೇಮಕಾತಿ ಆದೇಶಗಳನ್ನು ನೀಡುವುದಕ್ಕೂ ಮುನ್ನ ಎಲ್ಲ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಮಾನ್ಯತೆ ಇಲ್ಲದ ವಿಶ್ವವಿದ್ಯಾಲಯಗಳಲ್ಲಿ ಪದವಿ ಪಡೆದಿರುವುದು, ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಬೇರೆ ಬೇರೆ ವಿಷಯ ಆಯ್ಕೆ ಮಾಡಿಕೊಂಡಿರುವುದು, ದೂರ ಶಿಕ್ಷಣದಲ್ಲಿ ಪದವಿಗಳನ್ನು ಪಡೆದಿರುವಂತಹ ಒಟ್ಟಾರೆ 380 ಅಭ್ಯರ್ಥಿಗಳನ್ನು ಗುರುತಿಸಲಾಗಿದ್ದು ಈ ಬಗ್ಗೆ ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ.

ಇದಲ್ಲದೆ, ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್), ಪಿ.ಎಚ್‌ಡಿ ನಕಲಿ ಪ್ರಮಾಣ ಪತ್ರಗಳನ್ನು ನೀಡಿರುವಂತಹ 40 ಅಭ್ಯರ್ಥಿಗಳು, ಸಿಕ್ಕಿಂ, ಹರಿಯಾಣ, ಗುಜರಾತ್ ಹಾಗೂ ರಾಜಸ್ಥಾನ ಸೇರಿದಂತೆ ಹೊರ ರಾಜ್ಯದ ವಿವಿಗಳಲ್ಲಿ  ಮತ್ತು  ಮಾನ್ಯತೆ ಇಲ್ಲದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಸುಮಾರು 80 ಅಭ್ಯರ್ಥಿಗಳು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಂತೆ ಮಾನ್ಯತೆ ರದ್ದಾದಂತಹ ಅಭ್ಯರ್ಥಿಗಳನ್ನು ಕೈ ಬಿಡಲು ನಿರ್ಧರಿಸಲಾಗಿದೆ.

ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳು ಬೇರೆ ಬೇರೆ ಇದ್ದು ನೇಮಕಾತಿ ಆದೇಶ ಪಡೆಯದ  ಸುಮಾರು 150 ಪ್ರಕರಣಗಳು ಇದ್ದು ಇವರೆಲ್ಲರ ಭವಿಷ್ಯ ಈಗ ಅತಂತ್ರವಾಗಿದೆ.

380 ಅಭ್ಯರ್ಥಿಗಳ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಸರ್ಕಾರ ಕೈಗೊಳ್ಳುವ ನಿರ್ಧಾರದ ಮೇಲೆ ಅಭ್ಯರ್ಥಿಗಳ ಭವಿಷ್ಯ ನಿಂತಿದೆ.ಇಂತಹ ಪದವಿಗಳನ್ನು ಪರಿಗಣಿಸಬೇಕೇ ಅಥವಾ ಕೈಬಿಡಬೇಕೇ ಎಂಬುದನ್ನು ಸರ್ಕಾರ ನಿರ್ಧರಿಸಬೇಕಿದೆ.

ಗುಜರಾತ್‌ನ ಸರ್ಕಾರಿ ಕಾಲೇಜುಗಳಿಗೆ ಇದೇ ರೀತಿ ನೇಮಕಾತಿ ಪ್ರಕ್ರಿಯೆ ನಡೆದಾಗ ಪದವಿ ಮತ್ತು ಸ್ನಾತಕೋತ್ತರ ಪದವಿ ಬೇರೆ ಬೇರೆ ವಿಷಯಗಳಿದ್ದಂತಹ ಅಭ್ಯರ್ಥಿಗಳನ್ನು ನೇಮಕಾತಿ ಆಯೋಗ ಕೈಬಿಟ್ಟಿತ್ತು. ಇದನ್ನು ಗುಜರಾತ್ ಹೈಕೋರ್ಟ್‌ ಸಹ ಎತ್ತಿಹಿಡಿದಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯಿಂದ ಯಾವ ಅಭ್ಯರ್ಥಿಗಳನ್ನೂ ಕೈಬಿಡುವ ಉದ್ದೇಶ ಇಲ್ಲ. ಆದರೆ, ಕೆಲವರು ನೀಡಿರುವ ಪ್ರಮಾಣ ಪತ್ರಗಳು ಕ್ರಮಬದ್ಧವಾಗಿರದ ಕಾರಣ ವಿಳಂಬ ಆಗುತ್ತಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಎಂ.ಎನ್. ಅಜಯ್‌ನಾಗಭೂಷಣ್ ಹೇಳಿದ್ದಾರೆ.

English summary
government first grade college assistant professor recruitment work order copy issued to 1654 candidates and 380 candidates future is in govt hand.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia