ವಿಶ್ವವಿದ್ಯಾಲಯ ನೇಮಕಾತಿ ತಾತ್ಕಾಲಿಕ ತಡೆಗೆ ಸರ್ಕಾರದ ಆದೇಶ

Posted By:

ವಿಶ್ವವಿದ್ಯಾಲಯಗಳಲ್ಲಿ ನೇಮಕಾತಿಗೆ ಸಂಬಂಧಿಸಿದಂತೆ ಪ್ರೊ.ವಿ.ಬಿ ಕೊಟಿನ್ಹೊ ನೇತೃತ್ವದಲ್ಲಿ ರಚನೆಯಾಗಿದ್ದ ಸಮಿತಿ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ.

ಸಮಿತಿಯ ವರದಿಯನ್ನು ಪರಿಶೀಲಿಸಿದ ಸರ್ಕಾರ ರಾಜ್ಯದ 17 ವಿಶ್ವವಿದ್ಯಾಲಯಗಳಲ್ಲಿ ಇನ್ನು ಮುಂದೆ ಬೋಧಕ-ಬೋಧಕೇತರ ಹುದ್ದೆಗಳ ನೇರ ನೇಮಕಾತಿಗೆ ಸರಕಾರ ತಾತ್ಕಾಲಿಕ ತಡೆ ಹಾಕಿದೆ.

ನೇರ ನೇಮಕಾತಿಗೆ ಸಂಬಂಧಿಸಿದಂತೆ ಎಲ್ಲ ವಿಶ್ವವಿದ್ಯಾಲಯಗಳು ಯುಜಿಸಿ ಮಾರ್ಗಸೂಚಿಯನ್ವಯ ಅಗತ್ಯ ನಿಯಮಾವಳಿಗಳನ್ನು ರಚಿಸಿ ಕುಲಾಧಿಪತಿಗಳಿಂದ ಒಪ್ಪಿಗೆ ಪಡೆಯದ ಹೊರತು ನೇಮಕ ಪ್ರಕ್ರಿಯೆ ಕೈಗೊಳ್ಳುವಂತಿಲ್ಲ ಎಂದು ರಾಜ್ಯ ಸರಕಾರ ಆದೇಶಿಸಿದೆ.

ವಿಶ್ವವಿದ್ಯಾಲಯ ನೇಮಕಾತಿ

ನೇರ ನೇಮಕಾತಿಯಲ್ಲಿ ಅಕ್ರಮ, ಸ್ವಜನಪಕ್ಷಪಾತ, ನಿಯಮ ಉಲ್ಲಂಘಿಸಿ ಅನರ್ಹರಿಗೆ ಮಣೆ ಹಾಕುವುದು ಸೇರಿದಂತೆ ನಿಯಮ ಬಾಹಿರವಾಗಿ ಬೋಧಕ-ಬೋಧಕೆತರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ದಿಟ್ಟ ಕ್ರಮ ಕೈಗೊಂಡಿದೆ.

ಅವಶ್ಯಕ ಪರಿನಿಯಮಗಳನ್ನು ರಚಿಸಿಕೊಳ್ಳದೆ ಕೆಲವು ವಿಶ್ವವಿದ್ಯಾಲಯಗಳು ಮಂಜೂರಾದ ಹುದ್ದೆಗಳ ನೇಮಕಕ್ಕೆ ಜಾಹೀರಾತು ಪ್ರಕಟಿಸುವ ಮೂಲಕ ಆರಂಭಿಸಿರುವ ನೇಮಕ ಪ್ರಕ್ರಿಯೆಯನ್ನು ಕೂಡ ತಕ್ಷಣದಿಂದ ಜಾರಿಗೆ ಬರುವಂತೆ ತಡೆಹಿಡಿಯುವಂತೆ ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಯ-1) ಅಧೀನ ಕಾರ್ಯದರ್ಶಿ ಎನ್.ವೀರಬ್ರಹ್ಮಚಾರಿ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ರಾಜ್ಯದ ಹಲವು ವಿವಿಗಳು ಅಳವಡಿಸಿಕೊಂಡಿದ್ದ ನೇರ ನೇಮಕಾತಿ ನಿಯಮಾವಳಿಗಳು ಯುಜಿಸಿ ಹಾಗೂ ಇತರೆ ನಿಯಂತ್ರಣ ನಿಕಾಯಗಳ ಮಾರ್ಗಸೂಚಿಗಳಿಗೆ ವ್ಯತಿರಿಕ್ತವಾಗಿತ್ತು. ಆದುದರಿಂದ ನೇಮಕ ಕುರಿತ ಕಾರ್ಯನೀತಿ ರೂಪಿಸಲು ರಾಜ್ಯ ಸರ್ಕಾರ ಗುಲ್ಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ವಿ.ಬಿ.ಕುಟಿನ್ಹೊ ನೇತೃತ್ವದಲ್ಲಿ ಶಿಕ್ಷಣ ತಜ್ಞರ ಸಮಿತಿ ರಚಿಸಿತ್ತು. ಈ ಸಮಿತಿಯ ವರದಿಯನ್ನು ಕೂಲಂಕುಷವಾಗಿ ಹಾಗೂ ವಸ್ತುನಿಷ್ಠವಾಗಿ ಪರಿಶೀಲಿಸಿದ ನಂತರ ಬೋಧಕ-ಬೋಧಕೇತರ ಹುದ್ದೆಗಳ ನೇರ ನೇಮಕಕ್ಕೆ ಹಲವು ಮಾರ್ಗಸೂಚಿಗಳನ್ನು ವಿವಿಗಳು ಅನುಸರಿಸುವಂತೆ ಸೂಚಿಸಿದೆ.

ಯುಜಿಸಿ ಮಾನ್ಯತೆ ಇದ್ದರಷ್ಟೆ ನೇಮಕಾತಿ

ಯುಜಿಸಿಯಿಂದ ಮಾನ್ಯತೆ ಹೊಂದಿರುವ ಪ್ರವರ್ಗಗಳ ಬೋಧಕ ಹುದ್ದೆಗಳಿಗೆ ಮಾತ್ರ ನೇರ ನೇಮಕ ಪ್ರಕ್ರಿಯೆ ಕೈಗೊಳ್ಳಬೇಕು. ಯುಜಿಸಿ ಮಾನ್ಯತೆ ಪಡೆಯದ ಹುದ್ದೆಗಳಿಗೆ ಯಾವುದೇ ಸನ್ನಿವೇಶದಲ್ಲಿಯೂ ನೇಮಕ ಮಾಡಿಕೊಳ್ಳವಂತಿಲ್ಲ.

ಯುಜಿಸಿಯಿಂದ ನಿಗದಿಪಡಿಸಲಾಗಿರುವ ಅರ್ಹತಾ ಮಾನದಂಡವನ್ನು ಯಾವುದೇ ಸಂದರ್ಭದಲ್ಲೂ ಸಡಿಲಗೊಳಿಸುವಂತಿಲ್ಲ ಎಂದು ಕುಲಪತಿಗಳು ಹಾಗೂ ಕುಲಸಚಿವರಿಗೆ ನಿರ್ದೇಶನ ನೀಡಲಾಗಿದೆ.

ಹೊಸದಾಗಿ ಸ್ಥಾಪನೆಗೊಂಡಿರುವ ವಿಶ್ವವಿದ್ಯಾಲಯಗಳು ತಮ್ಮದೇ ಆದ ನೇಮಕ ಪರಿನಿಯಮಾವಳಿಗಳನ್ನು ರಚಿಸಿ, ಕುಲಾಧಿಪತಿಗಳಿಂದ ಅನುಮೋದನೆ ಪಡೆಯಬೇಕು.

ಯುಜಿಸಿ ಹಾಗೂ ರಾಜ್ಯ ಸರಕಾರದ ಮಾರ್ಗಸೂಚಿಗಳು ಮತ್ತು ನಿಯಮಾವಳಿಗಳು ಒಳಗೊಂಡಂತಹ ತಂತ್ರಾಂಶವನ್ನು ಅಭಿವೃದ್ಧಿಪಡಿಸುವ ಮೂಲಕ ನೇರ ನೇಮಕ ಪ್ರಕ್ರಿಯೆ ವಿಧಾನ ಅಳವಡಿಸಿಕೊಳ್ಳಲು ವಿಶ್ವವಿದ್ಯಾಲಯಗಳು ಪ್ರಯತ್ನಿಸಬೇಕು. ಅಲ್ಲದೇ ನೇಮಕ ಜಾಹೀರಾತು ಪ್ರಕಟಣೆಯ ಆರಂಭಿಕ ಹಂತದಿಂಧ ಅಧಿಸೂಚನೆ ಹೊರಡಿಸುವ ಹಂತದವರೆಗೆ ಅಂದರೆ, ಅನ್-ಲೈನ್ ಪ್ರಕ್ರಿಯೆಯು ಅರ್ಜಿಗಳ ಆಹ್ವಾನ, ಮೀಸಲು ನೀತಿಯ ಅನುಷ್ಠಾನ ಹಾಗೂ ಇತರೆ ಎಲ್ಲಾ ಕ್ರಮಾನುಸರಣೆ ಒಳಗೊಂಡಿರಬೇಕು.

English summary
After examining the report of Prof.V.B Kotinho report Government of Karnataka passed orders to all state universities to stop recruitment.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia