ಪ್ರಾಥಮಿಕ ಶಿಕ್ಷಕರ ನೇಮಕಾತಿ: ದಿನಕ್ಕೊಂದು ಸಮಸ್ಯೆ

Posted By:

ಸರ್ಕಾರಿ ಶಾಲೆಯ 6ರಿಂದ 8ನೇ ತರಗತಿಗೆ ನೇಮಕಾತಿ ಸಂಬಂಧಿಸಿದಂತೆ ದಿನಕ್ಕೊಂದು ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ.

ಪದವೀಧರರ ಸಮಸ್ಯೆ ಒಂದು ಕಡೆಯಾದರೆ ಕಿರಿಯ ಪ್ರಾಥಮಿಕ ಶಿಕ್ಷಕರ ನೇಮಕಾತಿ ಕೈಬಿಟ್ಟಿರುವುದು ಮತ್ತೊಂದು ಸಮಸ್ಯೆಯಾಗಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 6ರಿಂದ 8ನೇ ತರಗತಿಗೆ ಬೋಧಿಸಲು, 10 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಈ ಪೈಕಿ, ಗಣಿತ-ವಿಜ್ಞಾನ ವಿಷಯಕ್ಕೆ 4,233 ಹುದ್ದೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಆದರೆ ಇದರಲ್ಲಿ ಸಿಬಿಝಡ್‌ (ರಸಾಯನ, ಜೀವಶಾಸ್ತ್ರ ಹಾಗೂ ಪ್ರಾಣಿಶಾಸ್ತ್ರ) ಅಭ್ಯರ್ಥಿಗಳಿಗೆ ಅವಕಾಶ ಇಲ್ಲದಿರುವುದರಿಂದ ಅನ್ಯಾಯ ಮಾಡಿದಂತಾಗಿದೆ ಎಂದು ಸಿಬಿಝಡ್ ಅಭ್ಯರ್ಥಿಗಳು ಆರೋಪಿಸಿದ್ದಾರೆ.

ಪ್ರಾಥಮಿಕ ಶಿಕ್ಷಕರ ನೇಮಕಾತಿ ಸಮಸ್ಯೆ

ಇನ್ನು ಬಿಎಸ್‌ಸಿಯಲ್ಲಿ ಕಂಪ್ಯೂಟರ್‌ಸೈನ್ಸ್‌, ಎಲೆಕ್ಟ್ರಾನಿಕ್ಸ್‌, ಸಂಖ್ಯಾಶಾಸ್ತ್ರ ವ್ಯಾಸಂಗ ಮಾಡಿದವರಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿಲ್ಲ ಎಂದು ಟಿಇಟಿ ಪಾಸ್ ಮಾಡಿರುವ ಅನೇಕ ಅಭ್ಯರ್ಥಿಗಳು ದೂರಿದ್ದಾರೆ.

ಪದವಿಯಲ್ಲಿ ಪಿಸಿಎಂ (ಭೌತವಿಜ್ಞಾನ, ರಸಾಯನವಿಜ್ಞಾನ ಮತ್ತು ಗಣಿತ) ಓದಿದವರು ಮಾತ್ರ ಗಣಿತ-ವಿಜ್ಞಾನ ಶಿಕ್ಷಕರಿಗೆ ಅರ್ಜಿ ಸಲ್ಲಿಸಲು ಅರ್ಹರು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಇದರಿಂದಾಗಿ, ಟಿಇಟಿ ಪಾಸು ಮಾಡಿಕೊಂಡು ಮೂರು ವರ್ಷಗಳಿಂದ ಕಾದಿದ್ದ ತಮಗೆ ನಿರಾಸೆಯಾಗಿದೆ, ಮರುಅಧಿಸೂಚನೆ ಹೊರಡಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಆಕಾಂಕ್ಷಿಗಳು ಎಚ್ಚರಿಸಿದ್ದಾರೆ.

ಅಲ್ಲದೆ ಎನ್‌ಸಿಟಿಇ ನಿಯಮದ ಪ್ರಕಾರ, ವಿಜ್ಞಾನ ಶಿಕ್ಷಕರು ಬಿಎಸ್‌ಸಿಯಲ್ಲಿ ರಸಾಯನವಿಜ್ಞಾನ, ಸಸ್ಯವಿಜ್ಞಾನ, ಪ್ರಾಣಿವಿಜ್ಞಾನದ ಪೈಕಿ ಯಾವುದಾದರೂ ಎರಡು ವಿಷಯಗಳನ್ನು ಕಡ್ಡಾಯವಾಗಿ ಅಧ್ಯಯನ ಮಾಡಿರಬೇಕು ಎಂದಿದೆ. ಆದರೆ, ಸರ್ಕಾರ ಈ ನಿಯಮವನ್ನು ಪಾಲಿಸಿಲ್ಲ' ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

ಪ್ರಾಥಮಿಕ ಶಿಕ್ಷಣ ಇಲಾಖೆ ಉತ್ತರ

ನೇಮಕಾತಿ ಆದೇಶಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸುವುದಕ್ಕೂ ಮುನ್ನ ಮೇ 23ರಂದು ರಾಜ್ಯಪತ್ರದಲ್ಲಿ ಆಕ್ಷೇಪಣೆ ಆಹ್ವಾನಿಸಲಾಗಿತ್ತು. ಅಲ್ಲದೆ, ಎಲ್ಲ ಪತ್ರಿಕೆಗಳಲ್ಲಿ ಜಾಹೀರಾತನ್ನೂ ನೀಡಲಾಗಿದೆ. ಈಗಲೂ, ಇಲಾಖೆಯ www.Schooleducation.kar.nic.in ವೆಬ್‌ಸೈಟ್‌ನಲ್ಲಿಯೂ ಈ ಪ್ರಕಟಣೆ ಹಾಕಲಾಗಿದೆ. ಯಾವುದೇ ಆಕ್ಷೇಪಣೆ ಬಾರದಿರುವುದರಿಂದ ಆಗಸ್ಟ್‌ 7ಕ್ಕೆ ಅಧಿಸೂಚನೆ ಹೊರಡಿಸಲಾಗಿದೆ' ಆದರೆ, ಸಿಬಿಝಡ್‌ ಅಭ್ಯರ್ಥಿಗಳು ಯಾರೂ ಆಕ್ಷೇಪಣೆ ಸಲ್ಲಿಸಿಲ್ಲ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆ ತಿಳಿಸಿದೆ.

ಸಿಬಿಝಡ್‌ ಅಭ್ಯರ್ಥಿಗಳು ಅಧಿಸೂಚನೆ ಕುರಿತು ಅಸಮಾಧಾನ ವ್ಯಕ್ತಪಡಿಸಿರುವುದು ನನ್ನ ಗಮನಕ್ಕೂ ಬಂದಿದೆ. ಶೀಘ್ರದಲ್ಲಿ ಅಧಿಕಾರಿಗಳ ಸಭೆ ನಡೆಸಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಹೇಳಿದ್ದಾರೆ

ಕಿರಿಯ ಪ್ರಾಥಮಿಕ ಶಿಕ್ಷಕರ ಗೋಳು

1ರಿಂದ 5ನೇ ತರಗತಿವರೆಗೆ ಖಾಲಿಯಿರುವ ಹುದ್ದೆಗಳನ್ನು ಕೈಬಿಟ್ಟಿರುವುದು ಶಿಕ್ಷಕ ಹುದ್ದೆಗಳ ನಿರೀಕ್ಷೆಯಲ್ಲಿರುವ ಲಕ್ಷಾಂತರ ಆಕಾಂಕ್ಷಿಗಳಲ್ಲಿ ತಳಮಳ ಮೂಡಿಸಿದೆ. ಗ್ರಾಮೀಣ, ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಹೆಚ್ಚಿನ ಉದ್ಯೋಗ ಒದಗಿಸಿಕೊಡುತ್ತಿದ್ದ ಶಿಕ್ಷಣ ಕ್ಷೇತ್ರದಲ್ಲಿಯೇ ಹುದ್ದೆಗಳು ಕಡಿತಗೊಳ್ಳುತ್ತಿರುವುದು ಮತ್ತೊಂದು ಸಮಸ್ಯೆಯಾಗಿದೆ.

English summary
There are many complaints against education department regarding the primary school teachers recruitment.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia