ಅತಿಥಿ ಉಪನ್ಯಾಸಕರಾಗಲು ಅರ್ಹತಾ ಪರೀಕ್ಷೆ ಪಾಸ್ ಆಗಿರಬೇಕು

Posted By:

ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್ಇಟಿ) ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು ಮಾತ್ರ ಅತಿಥಿ ಉಪನ್ಯಾಸಕರ ಹುದ್ದೆಗೆ ಪರಿಗಣಿಸಲಾಗುವುದು ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಎಂ.ಎನ್. ಅಜಯ್‌ ನಾಗಭೂಷಣ್ ಹೇಳಿದ್ದಾರೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಹುದ್ದೆಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ), ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆ (ಎಸ್‌ಎಲ್‌ಇಟಿ) ಮತ್ತು ಪಿಎಚ್‌.ಡಿ ಪೂರ್ಣಗೊಳಿಸಿರಬೇಕು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಿದೆ. ಅದಕ್ಕಾಗಿ ಅತಿಥಿ ಉಪನ್ಯಾಸಕರಿಗಳಿಗೆ ಅರ್ಹತೆಗಳನ್ನು ಕಡ್ಡಾಯ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅತಿಥಿ ಉಪನ್ಯಾಸಕರ ಹುದ್ದೆಗೆ 35 ಸಾವಿರ ಅರ್ಜಿಗಳು

2017-18ನೇ ಸಾಲಿಗೆ ಅತಿಥಿ ಉಪನ್ಯಾಸಕ ಹುದ್ದೆಗೆ 35 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಅದರಲ್ಲಿ 21 ಸಾವಿರ ಅರ್ಜಿಗಳು ಸೇವೆ ಸಲ್ಲಿಸುತ್ತಿರುವ ಅಭ್ಯರ್ಥಿಗಳದ್ದಾಗಿದೆ.

ಅತಿಥಿ ಉಪನ್ಯಾಸಕರಿಗೆ ಎನ್ಇಟಿ ಕಡ್ಡಾಯ

9000 ಅತಿಥಿ ಉಪನ್ಯಾಸಕರು

ಕಳೆದ ವರ್ಷ ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಅತಿಥಿ ಉಪನ್ಯಾಸಕರ ಸಂಖ್ಯೆ 14000 ಸಾವಿರ ಇತ್ತು, ಆದರೆ ಈ ಬಾರಿ ಅದು 9000 ಕ್ಕೆ ಕುಸಿದಿದೆ. ಈ ವರ್ಷದಿಂದ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿ ನಡೆಯುತ್ತಿರುವುದರಿಂದ 9000 ಮಂದಿಯನ್ನು ಮಾತ್ರ ಸೇವೆಗೆ ಪರಿಗಣಿಸಲಾಗುತ್ತಿದೆ ಎಂಬ ಮಾಹಿತಿಯನ್ನು ಅವರು ಹೇಳಿದ್ದಾರೆ.

ಅರ್ಹತಾ ಪರೀಕ್ಷೆ ಕಡ್ಡಾಯಕ್ಕೆ ವಿರೋಧ

ಅತಿಥಿ ಉಪನ್ಯಾಸಕ ಹುದ್ದೆಗೆ ಎನ್‌ಇಟಿ, ಎಸ್‌ಎಲ್‌ಇಟಿ, ಪಿಎಚ್‌.ಡಿ ಕಡ್ಡಾಯ ಮಾಡಿರುವುದಕ್ಕೆ ಕೆಲವೆಡೆ ವಿರೋಧ ವ್ಯಕ್ತವಾಗಿದೆ. ಅನೇಕ ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಇದರಿಂದ ಅನ್ಯಾಯ ಮಾಡಲಾಗುತ್ತಿದೆ ಎಂದು ಹಳಬರು ಆರೋಪಿಸುತ್ತಿದ್ದಾರೆ.

'ಸ್ನಾತಕೋತ್ತರ ಪದವಿ ಮುಗಿಸಿ ಅತಿಥಿ ಉಪನ್ಯಾಸಕರಾಗಿ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವವರು ಇದ್ದಾರೆ. ಈಗ ಏಕಾಏಕಿ ನಿಯಮ ಬದಲಾಯಿಸುವುದರಿಂದ ಸುಮಾರು 5,000 ಅಭ್ಯರ್ಥಿಗಳು ಉದ್ಯೋಗ ಕಳೆದುಕೊಂಡು ಬೀದಿಗೆ ಬರಬೇಕಾಗುತ್ತದೆ. ಹೀಗಾಗಿ ಸೇವಾ ಹಿರಿತನಕ್ಕೆ ಮೊದಲ ಆದ್ಯತೆ ನೀಡಬೇಕು' ಎಂದು ಸಂಘದ ಅಧ್ಯಕ್ಷ ಎನ್‌. ಶ್ರೀನಿವಾಸಾಚಾರ್‌ ಹೇಳಿದ್ದಾರೆ.

ಕಳೆದ ಮೂರು ವರ್ಷಗಳಿಂದಲೂ ಸೇವಾ ಹಿರಿತನ ಪರಿಗಣಿಸಿಯೇ ನೇಮಕ ಮಾಡಲಾಗುತ್ತಿದೆ. ಆದರೆ, ಈ ಬಾರಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಪ್ರತಿಷ್ಠೆಗೆ ಬಿದ್ದು ಹಳಬರನ್ನು ಕೈಬಿಡಲು ನಿರ್ಧರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

English summary
National eligibility test (NET), KSET or PhD is mandatory for guest lecturers, commissioner of collegiate education M N Ajay Nagbhushan said.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia