ಗುಲ್ಬರ್ಗ ವಿವಿಯ ಬಿಕಾಂ ಮೂರನೇ ಸೆಮಿಸ್ಟರ್ 'ಕ್ವಾಂಟಿಟೇಟಿವ್ ಟೆಕ್ನಿಕ್ಸ್' ವಿಷಯದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ.
ಮಂಗಳವಾರ ಬಿಕಾಂ ಮೂರನೇ ಸೆಮಿಸ್ಟರ್ 'ಕ್ವಾಂಟಿಟೇಟಿವ್ ಟೆಕ್ನಿಕ್ಸ್' ವಿಷಯದ ಪರೀಕ್ಷೆ ಪ್ರಶ್ನೆ ಪತ್ರಿಕೆ ಮೂರು ತಾಸು ಮುನ್ನವೇ ವಾಟ್ಸ್ ಆ್ಯಪ್‌ಗಳಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ವಿವಿ ಆಡಳಿತ, ಪರೀಕ್ಷೆ ರದ್ದುಗೊಳಿಸಿ ಆದೇಶಿಸಿತು.
ಮಧ್ಯಾಹ್ನ 2ಕ್ಕೆ ಪರೀಕ್ಷೆ ಸಮಯ ನಿಗದಿಯಾಗಿತ್ತು. ಆದರೆ, ವಿವಿ ವ್ಯಾಪ್ತಿಯ ಬಹುತೇಕರ ಮೊಬೈಲ್‌ಗಳಲ್ಲಿ ಬೆಳಗ್ಗೆ 11ರ ಸುಮಾರಿಗೆ ಪ್ರಶ್ನೆಪತ್ರಿಕೆ ಹರಿದಾಡತೊಡಗಿತ್ತು. ಈ ಬಗ್ಗೆ ಹಲವು ಕಾಲೇಜುಗಳ ಮುಖ್ಯಸ್ಥರು, ವಿವಿ ಆಡಳಿತದ ಗಮನಕ್ಕೆ ತಂದಿದ್ದಾರೆ.
ತಕ್ಷಣ ಎಚ್ಚೆತ್ತ ವಿವಿ ಆಡಳಿತ, ವಾಟ್ಸ್ ಆ್ಯಪ್‌ಗಳಲ್ಲಿ ಹರಿದಾಡಿದ ಪ್ರಶ್ನೆಪತ್ರಿಕೆ ಮತ್ತು ಮೂಲ ಪ್ರಶ್ನೆ ಪತ್ರಿಕೆ ಪರಿಶೀಲಿಸಿ, ಬಹುತೇಕ ಪುಟಗಳು ಸಾಮ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ ಬಿಕಾಂ ಮೂರನೇ ಸೆಮಿಸ್ಟರ್‌ನ 'ಕ್ವಾಂಟಿಟೇಟಿವ್ ಟೆಕ್ನಿಕ್ಸ್' ವಿಷಯದ ಪರೀಕ್ಷೆಯನ್ನು ರದ್ದುಗೊಳಿಸಿತು.
ಬಿಕಾಂ ಮೂರನೇ ಸೆಮಿಸ್ಟರ್‌ನ ಕ್ಯೂ.ಟಿ. ಪತ್ರಿಕೆ ಬಯಲಾಗಿರುವುದು ಬೆಳಗ್ಗೆ 11.15ಕ್ಕೆ ಗಮನಕ್ಕೆ ಬಂತು. ವಾಟ್ಸ್ ಆ್ಯಪ್‌ನಲ್ಲಿ ಹರಿದಾಡಿದ ಪ್ರಶ್ನೆಪತ್ರಿಕೆ ಪರಿಶೀಲಿಸಿದಾಗ ಒಟ್ಟು 7 ಪುಟಗಳಲ್ಲಿ ಐದು ಪುಟಗಳು ತಾಳೆಯಾದವು. ಈ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದುಗೊಳಿಸಲು ನಿರ್ಧರಿಸಲಾಗಿದೆ. ಈ ಕುರಿತು ಸಮಗ್ರ ತನಿಖೆಗೆ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಲು ನಿರ್ಧರಿಸಲಾಗಿದೆ ಎಂದು ಗುಲ್ಬರ್ಗ ವಿವಿಯ ಪರೀಕ್ಷಾಂಗ ವಿಭಾಗದ ಕುಲಸಚಿವರಾದ ಪ್ರೊ.ಡಿ.ಎಂ.ಮದರಿ ತಿಳಿಸಿದ್ದಾರೆ.
ಮಂಗಳವಾರ ಮಧ್ಯಾಹ್ನದ ಪರೀಕ್ಷೆ ರದ್ದಾದ ಮಾಹಿತಿಯಿಲ್ಲದೇ ಹಲವು ವಿದ್ಯಾರ್ಥಿಗಳು ಎಂದಿನ ಉತ್ಸಾಹದಿಂದ ಮಧ್ಯಾಹ್ನ 1.30ಕ್ಕೆ ಸಂಬಂಧಿಸಿದ ಕಾಲೇಜುಗಳ ಪರೀಕ್ಷಾ ಕೇಂದ್ರಗಳಿಗೆ ತೆರಳಿದ್ದರು. ಕಾಲೇಜುಗಳ ಉಪನ್ಯಾಸಕರು ಪರೀಕ್ಷೆ ರದ್ದತಿ ಕುರಿತು ಮಾಹಿತಿ ನೀಡಿ ವಿದ್ಯಾರ್ಥಿಗಳನ್ನು ವಾಪಸ್ ಕಳಿಸಿದರು. ಪರೀಕ್ಷೆ ರದ್ದಾಗಿದ್ದರಿಂದ ವಿದ್ಯಾರ್ಥಿಗಳು ತೀವ್ರ ನಿರಾಸೆ ಅನುಭವಿಸುವಂತಾಯಿತು.