ಶಾಲೆಗಳಲ್ಲಿ ಎರಡು ಭಾಷೆಗೆ ಮಾತ್ರ ಆದ್ಯತೆ ನೀಡಲು ಚಿಂತನೆ

Posted By:

ಪ್ರೌಢಶಾಲೆಯಲ್ಲಿ ಮೂರು ಭಾಷೆ ಕಲಿಸುವ ಬದಲು ಎರಡು ಭಾಷೆಗಳನ್ನು ಕಲಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಇದಕ್ಕಾಗಿ ಹೊಸ ನೀತಿ ಜಾರಿಗೆ ತರುವುದಾಗಿ ಹೇಳಿದೆ.

ಪ್ರೌಢಶಾಲೆ ಹಂತದಲ್ಲಿ ಮೂರು ಭಾಷೆ ಕಲಿಯಲು ವಿದ್ಯಾರ್ಥಿಗಳು ಹೆಚ್ಚು ಸಮಯ ವ್ಯಯ ಮಾಡುವಂತಾಗಿದೆ. ಇದರಿಂದಾಗಿ ಅವರ ಕಲಿಕೆಯ ಸಾಮರ್ಥ್ಯದ ಮೇಲೆ ಅಗಾಧ ಪರಿಣಾಮ ಆಗುತ್ತಿದೆ. ಮೂರನೇ ಭಾಷೆ ತೆಗೆಯುವುದರಿಂದ ವಿದ್ಯಾರ್ಥಿಗಳ ಹೊರೆ ಕಡಿಮೆ ಆಗುತ್ತದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಶಾಲೆಗಳಲ್ಲಿ ಎರಡು ಭಾಷೆ

ಈಗ ರಾಜ್ಯ ಪಠ್ಯಕ್ರಮದಲ್ಲಿ 8 ರಿಂದ 10 ನೇ ತರಗತಿವರೆಗೆ ಮೂರು ಭಾಷೆಗಳ ಕಲಿಕೆಗೆ ಅವಕಾಶವಿದೆ. ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಕನ್ನಡ, ಇಂಗ್ಲಿಷ್‌, ಉರ್ದು, ತಮಿಳು, ತೆಲುಗು,ಮರಾಠಿ ಮತ್ತು ಹಿಂದಿಯನ್ನು ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಬಹುದು. ಪ್ರಥಮ ಐಚ್ಛಿಕ ಭಾಷೆಯಾಗಿ ಸಂಸ್ಕೃತ ಕಲಿಯಬಹುದು.

'ಮೂರನೇ ಭಾಷೆ ಕಲಿಕೆ ಮಹತ್ವದ್ದು ಎಂಬುದು ನಿಜ. ವಿದ್ಯಾರ್ಥಿಗಳು ಎಷ್ಟು ವರ್ಷ ಮೂರು ಭಾಷೆಗಳನ್ನು ಕಲಿಯಬೇಕು ಎಂಬುದು ನಮ್ಮ ಮುಂದಿರುವ ಪ್ರಶ್ನೆ, ಸಿಬಿಎಸ್‌ಇ ವಿದ್ಯಾರ್ಥಿಗಳು ಪ್ರೌಢಶಾಲೆಯ ಹಂತದಲ್ಲಿ ಎರಡು ಭಾಷೆಗಳನ್ನು ಮಾತ್ರ ಕಲಿಯುತ್ತಾರೆ. ಇದರಿಂದಾಗಿ ಸಿಬಿಎಸ್‌ಇ ವಿದ್ಯಾರ್ಥಿಗಳು ಇತರ ಕೌಶಲಗಳನ್ನು ಕಲಿಯಲು ಹೆಚ್ಚು ಸಮಯ ಮೀಸಲಿಡಲು ಸಾಧ್ಯವಾಗುತ್ತದೆ. ಪದವಿ ಪೂರ್ವ ಹಂತದಲ್ಲಿ ಎರಡು ಭಾಷೆ ಬದಲು ಒಂದು ಭಾಷೆ ಕಲಿಯುವುದಕ್ಕೆ ಅವಕಾಶ ನೀಡಲು ಪರಿಶೀಲನೆ ನಡೆಸಲಾಗುತ್ತಿದೆ' ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಜಯ್ ಸೇಟ್ ಹೇಳಿದ್ದಾರೆ..

ಪ್ರೌಢಶಾಲೆಯಲ್ಲಿ ಎರಡು ಭಾಷೆಗಳು ಮತ್ತು ಪದವಿಪೂರ್ವ ಶಿಕ್ಷಣದ ಹಂತದಲ್ಲಿ ಒಂದು ಭಾಷೆ ಕಲಿಕೆಗೆ ಕರ್ನಾಟಕ ಜ್ಞಾನ ಆಯೋಗವೇ ಶಿಫಾರಸು ಮಾಡಿದೆ. ಇದಕ್ಕಾಗಿ ಪ್ರತ್ಯೇಕ ಶಿಕ್ಷಣ ನೀತಿ ರೂ‍‍ಪಿಸಲಾಗುತ್ತಿದ್ದು, ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗುವುದು ಎಂದು ಸೇಟ್ ಹೇಳಿದರು.

ದ್ವಿಭಾಷೆಗೆ ವಿರೋಧ

ಕರ್ನಾಟಕ ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ಸರ್ಕಾರದ ಚಿಂತನೆಯನ್ನು ವಿರೋಧಿಸಿದೆ. 'ವಿದ್ಯಾರ್ಥಿಗಳು ತೃತೀಯ ಭಾಷೆಯನ್ನಾಗಿ ಯಾವುದೇ ಭಾಷೆ ಕಲಿಯುವುದಕ್ಕೆ ಅವಕಾಶವಿದೆ. ವಿದ್ಯಾರ್ಥಿಗಳ ಭಾಷಾ ಕಲಿಕೆಯ ಆಯ್ಕೆಯನ್ನು ಸರ್ಕಾರ ಏಕೆ ಕಸಿದುಕೊಳ್ಳಬೇಕು' ಎಂದು ಒಕ್ಕೂಟದ ಕಾರ್ಯದರ್ಶಿ ಡಿ.ಶಶಿಕುಮಾರ್‌ ಪ್ರಶ್ನಿಸಿದ್ದಾರೆ.

English summary
The Department of Education intends to implement a new policy that will abandon the three-language learning formula at the high school level and retain only two languages.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia