ದ್ವಿತೀಯ ಪಿಯುಸಿ ಲೆಕ್ಕಶಾಸ್ತ್ರ ಪರೀಕ್ಷೆ ಅಕ್ರಮ!

Posted By:

ಎಷ್ಟೇ ಎಚ್ಚರ ವಹಿಸಿದರು ಪಿಯುಸಿ ಪರೀಕ್ಷೆಗಳಲ್ಲಿ ಏನಾದರು ಒಂದು ಎಡವಟ್ಟು ನಡೆಯುವುದನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಪರೀಕ್ಷೆ ಶುರುವಾದ ಅರ್ಧಗಂಟೆಯಲ್ಲೇ ಪ್ರಶ್ನೆಪತ್ರಿಕೆ ವಾಟ್ಸ್ ಆ್ಯಪ್ ನಲ್ಲಿ ಹರಿದಾಡಿ ದೊಡ್ಡ ಸುದ್ದಿ ಮಾಡಿದೆ.

ಮಾನ್ವಿ ಪಟ್ಟಣದ ಎಸ್​ಆರ್​ಎಸ್​ವಿಎಸ್ ಪಿಯು ಕಾಲೇಜಿನಲ್ಲಿ ಅಕೌಂಟೆನ್ಸಿ ಪತ್ರಿಕೆಯ ಪುಟವೊಂದು ವಾಟ್ಸ್ ಆ್ಯಪ್ ಮೂಲಕ ಹರಿದಾಡಿದೆ.

ಕಳೆದ ವರ್ಷ ದ್ವಿತೀಯ ಪಿಯುಸಿ ರಸಾಯನವಿಜ್ಞಾನ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ದೊಡ್ಡ ವಿವಾದ ಸೃಷ್ಟಿಸಿತ್ತು. ಹೀಗಾಗಿ ಈ ವರ್ಷ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇಷ್ಟಾದರೂ ಈ ಬಾರಿ ಅಕ್ರಮ ನಡೆದಿದಿದ್ದು, ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಮತ್ತೊಮ್ಮೆ ಮುಜುಗರಕ್ಕೆ ಒಳಗಾಗಿದೆ.

ಪ್ರಶ್ನೆಪತ್ರಿಕೆ ಬಯಲು

ಪರೀಕ್ಷೆ ಶುರುವಾದ ಅರ್ಧಗಂಟೆಯಲ್ಲೇ ಪೇಪರ್ ಔಟ್

ದ್ವಿತೀಯ ಪಿಯುಸಿ ಅಕೌಂಟೆನ್ಸಿ ವಿಷಯದ ಪ್ರಶ್ನೆಪತ್ರಿಕೆ ಸೋಮವಾರ ಪರೀಕ್ಷೆ ಆರಂಭವಾದ ಅರ್ಧಗಂಟೆಯಲ್ಲೇ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿದೆ.
ಉಪನ್ಯಾಸಕನಿಂದ ಲೀಕ್
ವಿಚಕ್ಷಣ ದಳದ ಅಧಿಕಾರಿಯ ಸೋಗಿನಲ್ಲಿ ಪರೀಕ್ಷಾ ಕೊಠಡಿ ಪ್ರವೇಶಿಸಿದ ಉಪನ್ಯಾಸಕ ಸಿದ್ದನಗೌಡ ತನ್ನ ಮೊಬೈಲ್‌ನಲ್ಲಿ ಪ್ರಶ್ನೆಪತ್ರಿಕೆ ಫೋಟೊ ತೆಗೆದು ಅದನ್ನು ಪ್ರಾಚಾರ್ಯ ಮಹೇಶ ಕುಮಾರ ಅವರಿಗೆ ರವಾನಿಸಿರುವದೇ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ. ಬೆಳಗ್ಗೆ 10.45ರಲ್ಲಿ ಪರೀಕ್ಷಾ ಪರಿವೀಕ್ಷಕನ ನೆಪದಲ್ಲಿ ಕೇಂದ್ರ ಪ್ರವೇಶಿಸಿದ ಸಿದ್ದನಗೌಡ ವಿದ್ಯಾರ್ಥಿಯೊಬ್ಬನ ಬಳಿ ಹೋಗಿ ಪ್ರಶ್ನೆಪತ್ರಿಕೆಯ 3ನೇ ಪುಟವನ್ನು ತನ್ನ ಮೊಬೈಲ್​ನಲ್ಲಿ ಫೋಟೋ ತೆಗೆದುಕೊಂಡಿದ್ದ. ಕಳಿಂಗ ಕಾಲೇಜಿನ ಪ್ರಾಂಶುಪಾಲ ಮಹೇಶ್ ಎಂಬುವವರಿಗೆ ವಾಟ್ಸ್​ಆಪ್​ನಲ್ಲಿ ಕಳುಹಿಸಿದ್ದ. ನಂತರ ಮಹೇಶ್, ಕಾಲೇಜಿನ ನಿರ್ದೇಶಕ ಶರಣಬಸಪ್ಪನಿಗೆ ಕಳುಹಿಸಿದ್ದಾರೆ.

ಮೂವರ ಬಂಧನ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಕಳಿಂಗ ಕಾಲೇಜಿನ ಪ್ರಾಚಾರ್ಯ ಮಹೇಶ ಕುಮಾರ, ಸಿದ್ಧನಗೌಡ ಮತ್ತು ಶರಣಬಸಪ್ಪ ಈ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯಾಹ್ನ ಪಟ್ಟಣಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಬಗಾದಿ ಗೌತಮ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೇತನ್‌ಸಿಂಗ್‌ ರಾಥೋಡ್‌ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಕಲ್ಮಠ ಕಾಲೇಜಿನ ಉಪನ್ಯಾಸಕ ಸಿದ್ದನಗೌಡ ಪರೀಕ್ಷಾ ಕೇಂದ್ರವೊಂದರಲ್ಲಿ ಅಕ್ರಮವಾಗಿ ಫೋಟೊ ತೆಗೆದು ವಾಟ್ಸ್ಆ್ಯಪ್‌ ಮೂಲಕ ಮೊದಲು ಕಳುಹಿಸಿದ ಬಗ್ಗೆ ಒಪ್ಪಿಕೊಂಡಿದ್ದಾರೆ' ಎಂದು ಮೂಲಗಳು ತಿಳಿಸಿವೆ

ಸೂಕ್ತ ಕ್ರಮ

ಆರೋಪಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದು, ಕಳಿಂಗ ಕಾಲೇಜಿನ ಮಾನ್ಯತೆ ರದ್ದು ಮಾಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಪಕೀರ್ತಿ ತರಲು ಪ್ರಯತ್ನ

ಸ್ಥಳೀಯ ಮೂಲಗಳ ಪ್ರಕಾರ ಮಾನ್ವಿ ಪಟ್ಟಣದಲ್ಲಿರುವ ಖಾಸಗಿ ಕಾಲೇಜುಗಳ ಉಪನ್ಯಾಸಕರ ನಡುವಿನ ದ್ವೇಷದಿಂದ ಈ ಕೃತ್ಯಕ್ಕೆ ಮುಂದಾಗಿದ್ದಾನೆ. ಕಲ್ಮಠ ಕಾಲೇಜಿನ ಪ್ರಾಂಶುಪಾಲ ಮಹೇಶ್, ಎಸ್​ಆರ್​ಎಸ್​ವಿಎಸ್ ಪಿಯು ಕಾಲೇಜಿಗೆ ಕೆಟ್ಟ ಹೆಸರು ತರಬೇಕು. ಪ್ರಶ್ನೆಪತ್ರಿಕೆ ಸೋರಿಕೆಯಾದರೆ, ಕಾಲೇಜಿಗೆ ಕೆಟ್ಟ ಹೆಸರು ಬರುತ್ತದೆ ಎಂಬ ದುರುದ್ದೇಶ ಹೊಂದಿ ಹೀಗೆ ಮಾಡಿದ್ದಾನೆನ್ನಲಾಗಿದೆ.

ಸೋರಿಕೆ ಅಲ್ಲ ಅಕ್ರಮ

ಪ್ರಶ್ನೆ ಪತ್ರಿಕೆ ಬಯಲು ಪ್ರಕರಣ ಕುರಿತು ಬೆಂಗಳೂರಿನಲ್ಲಿ ಮಾಧ್ಯಮ ಗೋಷ್ಠಿ ನಡೆಸಿದ ಶಿಕ್ಷಣ ಸಚಿವ ತನ್ವೀರ್‌ ಸೇಠ್‌, 'ಇದು ಪ್ರಶ್ನೆಪತ್ರಿಕೆ ಸೋರಿಕೆಯಲ್ಲ. ಪರೀಕ್ಷಾ ಅಕ್ರಮ ಅಷ್ಟೆ' ಎಂದು ಹೇಳಿದ್ದಾರೆ.  ಅಕೌಂಟೆನ್ಸಿ ಪ್ರಶ್ನೆ ಪತ್ರಿಕೆಯಲ್ಲಿ ಒಟ್ಟು 18 ಪುಟಗಳಿದ್ದವು. ಕನ್ನಡ ಮಾಧ್ಯಮದಲ್ಲಿ 10 ಪುಟಗಳು, ಇಂಗ್ಲಿಷ್‌ ಮಾಧ್ಯಮದ 8 ಪುಟಗಳಿದ್ದವು. ಆರೋಪಿಗಳು ಒಂದು ಪುಟದ ಚಿತ್ರ ಸೆರೆ ಹಿಡಿದು ತಮ್ಮ ವಾಟ್ಸ್‌ ಆ್ಯಪ್‌ ಮೂಲಕ ಕೆಲವರಿಗೆ ಕಳುಹಿಸಿದ್ದಾರೆ. ಕೆಲವೇ ಕೆಲವರ ವಾಟ್ಸ್‌ ಆ್ಯಪ್‌ನಲ್ಲಿ ಮಾತ್ರ ಇದು ಹರಿದಾಡಿದೆ. ಬಹುತೇಕ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ಇದರ ಮಾಹಿತಿಯೇ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಲೇಜಿನ ಮಾನ್ಯತೆ ರದ್ದು

ಮಾನ್ವಿಯ ಕಳಿಂಗ ಕಾಲೇಜಿನ ಮಾನ್ಯತೆ ರದ್ದು ಮಾಡಲಾಗಿದೆ. ಆ ಕಾಲೇಜಿನಲ್ಲಿ ಈಗ ಪ್ರಥಮ ಪಿಯುಸಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಬರುವ ಶೈಕ್ಷಣಿಕ ವರ್ಷದಲ್ಲಿ ಬೇರೆ ಕಾಲೇಜುಗಳಲ್ಲಿ ದಾಖಲಾತಿಗೆ ಅವಕಾಶ ನೀಡಲಾಗುವುದು. ಹೊಸದಾಗಿ ಪ್ರಥಮ ಪಿಯುಸಿಗೆ ಪ್ರವೇಶ ಅವಕಾಶ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಮರು ಪರೀಕ್ಷೆ ಇಲ್ಲ

ಕಳೆದ ಬಾರಿ ರಸಾಯನ ಪ್ರಶ್ನೆಪತ್ರಿಕೆ ಸೋರಿಕೆಯಾಗಿ ವಿದ್ಯಾರ್ಥಿಗಳು ಎರೆಡೆರಡು ಬಾರಿ ಮರುಪರೀಕ್ಷೆ ಬರೆದಿದ್ದರು ಆದರೆ ಈ ಪ್ರಕರಣದಿಂದ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಮರು ಪರೀಕ್ಷೆ ಮಾಡುವುದಿಲ್ಲ. ಮೂರು ವ್ಯಕ್ತಿಗಳ ದೂರವಾಣಿ ಕರೆಗಳ ಪರಿಶೀಲನೆ ನಡೆಸಲು ಪೊಲೀಸರಿಗೆ ತಿಳಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಮತ್ತಷ್ಟು ಕಟ್ಟುನಿಟ್ಟಿನ ಕ್ರಮ

ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಯಾವುದೇ ಅಧಿಕಾರಿಗಳು ಅಥವಾ ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಮೊಬೈಲ್ ಫೋನ್ ಬಳಕೆ ಮಾಡುವಂತಿಲ್ಲವೆಂದು ಪಿಯು ಇಲಾಖೆ ಆದೇಶಿಸಿದೆ. ಒಂದು ವೇಳೆ ಪರೀಕ್ಷಾ ಅಕ್ರಮ ನಡೆದಲ್ಲಿ ಅದಕ್ಕೆ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಮತ್ತು ಪರೀಕ್ಷಾ ಅಧಿಕಾರಿಗಳು, ಸಿಬ್ಬಂದಿ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ ಎಂದು ಎಚ್ಚರಿಕೆ ನೀಡಿದೆ. ಪರೀಕ್ಷೆಗೆ ಹಾಜರಾಗಿ ಅವಧಿ ಮುಗಿಯುವ ಮುನ್ನವೇ ತೆರಳುವ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ನೀಡುವಂತಿಲ್ಲ. 1.30 ನಂತರ ಹೋಗುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರಶ್ನೆಪತ್ರಿಕೆ ನೀಡಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸುತ್ತೋಲೆ ಹೊರಡಿಸಿದ್ದಾರೆ.

English summary
The question paper for the pre-university accountancy course leaked on social media.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia